ADVERTISEMENT

ಯುರೋಪಿನ 10 ರಾಷ್ಟ್ರಗಳಲ್ಲಿ ಅಲ್ಟ್ರಾವೈಲೆಟ್ ಎಫ್77 ವಿದ್ಯುತ್ ಚಾಲಿತ ಬೈಕ್ ಮೋಡಿ | ಈ ಮೈಲಿಗಲ್ಲು ಸಾಧಿಸಿದ ಭಾರತದ ಮೊದಲ ವಿದ್ಯುತ್ ಚಾಲಿತ ದ್ವಿಚಕ್ರ ವಾಹನ ಸಂಸ್ಥೆ

​ಪ್ರಜಾವಾಣಿ ವಾರ್ತೆ
Published 18 ಜೂನ್ 2025, 12:23 IST
Last Updated 18 ಜೂನ್ 2025, 12:23 IST
   

ಅಲ್ಟ್ರಾವೈಲೆಟ್ ಈಗ ಜರ್ಮನಿ, ಫ್ರಾನ್ಸ್, ಬ್ರಿಟನ್, ಐರ್ಲೆಂಡ್, ಆಸ್ಟ್ರಿಯಾ, ಇಟಲಿ, ಸ್ವಿಜರ್ಲೆಂಡ್, ಬೆಲ್ಜಿಯಂ, ನೆದರ್ಲೆಂಡ್ಸ್ ಮತ್ತು ಲಕ್ಸೆಂಬರ್ಗ್‌ನಲ್ಲಿ ಲಭ್ಯ |

ಬೆಂಗಳೂರು: ಬೆಂಗಳೂರು ಮೂಲದ ಅಲ್ಟ್ರಾವೈಲೆಟ್ (Ultraviolette)  ವಾಹನ ತಯಾರಕ ಸಂಸ್ಥೆಯು, ಫ್ರಾನ್ಸ್‌ಗೆ ಅತಿ ನೂತನ ಎಫ್77 ಮಾಚ್ 2 (F77 MACH 2) ಮತ್ತು ಎಫ್77 ಸೂಪರ್‌ಸ್ಟ್ರೀಟ್ (F77 SuperStreet) ವಿದ್ಯುತ್ ಚಾಲಿತ ಬೈಕ್‌ಗಳನ್ನು ಪರಿಚಯಿಸಿದೆ.  

ಫ್ರಾನ್ಸ್‌ನ ಐತಿಹಾಸಿಕ ಐಫೆಲ್ ಟವರ್‌ನಲ್ಲಿ ಅಲ್ಟ್ರಾವೈಲೆಟ್ ಮೋಡಿ ಮಾಡಿದೆ. ಆ ಮೂಲಕ ಜರ್ಮನಿಯ ಬೆನ್ನಲ್ಲೇ ಫ್ರಾನ್ಸ್‌ಗೆ ದಾಪುಗಾಲು ಇಟ್ಟಿದೆ.  

ADVERTISEMENT

ಇದರೊಂದಿಗೆ ಎಫ್77 ವಿದ್ಯುತ್ ಚಾಲಿತ ಬೈಕ್, ಯುರೋಪ್‌ನ 10 ರಾಷ್ಟ್ರಗಳಿಗೆ ಕಾಲಿಟ್ಟಿದ್ದು, ಅಲ್ಲದೆ ಈ ಮೈಲಿಗಲ್ಲು ಸಾಧಿಸಿದ ವಿಶ್ವದ ಮೊದಲ ವಿದ್ಯುತ್  ಚಾಲಿತ  ದ್ವಿಚಕ್ರ ವಾಹನ ಸಂಸ್ಥೆ ಎನಿಸಿದೆ. ಅಲ್ಟ್ರಾವೈಲೆಟ್ ಎಫ್77 ವಿದ್ಯುತ್ ಚಾಲಿತ ವಾಹನ ಈಗ ಜರ್ಮನಿ, ಫ್ರಾನ್ಸ್, ಬ್ರಿಟನ್, ಐರ್ಲೆಂಡ್, ಆಸ್ಟ್ರಿಯಾ, ಇಟಲಿ, ಸ್ವಿಜರ್ಲೆಂಡ್, ಬೆಲ್ಜಿಯಂ, ನೆದರ್ಲೆಂಡ್ಸ್ ಮತ್ತು ಲಕ್ಸೆಂಬರ್ಗ್‌ನಲ್ಲಿ ಲಭ್ಯವಿದೆ.  

ಇದು ಭಾರತದಲ್ಲಿ ದೃಢವಾದ ಹೂಡಿಕೆದಾರರ ಜಾಲ ಹಾಗೂ ಸಂಶೋಧನಾ ಮತ್ತು ಅಭಿವೃದ್ಧಿ(ಆರ್‌ ಆ್ಯಂಡ್‌ ಡಿ) ಘಟಕ ಹೊಂದಿರುವ ಅಲ್ಟ್ರಾವೈಲೆಟ್ ಸಂಸ್ಥೆಗೆ ಜಾಗತಿಕವಾಗಿ ತನ್ನ ಛಾಪು ಮೂಡಿಸುವ ಮಹತ್ವಾಕಾಂಕ್ಷೆಗೆ ಮತ್ತಷ್ಟು ಬಲ ತುಂಬಿದೆ.  

ಎಫ್77 ಮ್ಯಾಕ್ ವಿದ್ಯುತ್ ಚಾಲಿತ ಬೈಕ್ ರೇಸಿಂಗ್‌ನಿಂದ ಸ್ಪೂರ್ತಿ ಪಡೆದ ಆಕ್ರಮಣಕಾರಿ ಶೈಲಿಯ ಬೈಕ್ ಆಗಿದೆ. ಮತ್ತೊಂದೆಡೆ ಎಫ್77 ಸೂಪರ್‌ಸ್ಟ್ರೀಟ್, ರೋಚಕತೆಗೆ ಯಾವುದೇ ಧಕ್ಕೆಯಾಗದಂತೆ ಹೆಚ್ಚಿನ ದಕ್ಷತೆಯನ್ನು ಖಚಿತಪಡಿಸುತ್ತದೆ.  

'ಜರ್ಮನಿ, ಫ್ರಾನ್ಸ್, ಬ್ರಿಟನ್ ಮತ್ತು ಯುರೋಪಿನ ಇತರೆ ರಾಷ್ಟ್ರಗಳಲ್ಲಿ ಎಫ್77 ಲಗ್ಗೆ ಇಟ್ಟಿರುವುದು ಅಲ್ಟ್ರಾವೈಲೆಟ್‌ಗೆ ಮಹತ್ವದ ಕ್ಷಣವಾಗಿದ್ದು, ಭಾರತದ ಆಟೋಮೊಬೈಲ್ ಕ್ಷೇತ್ರದ ಮಹತ್ತರ ಸಾಧನೆಯಾಗಿದೆ' ಎಂದು ಅಲ್ಟ್ರಾವೈಲೆಟ್‌ನ ಸಿಇಒ ಮತ್ತು ಸಹ-ಸಂಸ್ಥಾಪಕ ನಾರಾಯಣ ಸುಬ್ರಮಣಿಯಂ ಅಭಿಪ್ರಾಯಪಟ್ಟಿದ್ದಾರೆ.  

'ಇದು ಯುರೋಪಿನ ಅತ್ಯಂತ ಪ್ರಭಾವಶಾಲಿ ದ್ವಿಚಕ್ರ ವಾಹನ ಮಾರುಕಟ್ಟೆಗೆ ಅಲ್ಟ್ರಾವೈಲೆಟ್‌ನ ಪ್ರವೇಶವನ್ನು ಸೂಚಿಸುತ್ತದೆಯಲ್ಲದೆ ವಿದ್ಯುತ್ ಚಾಲಿತ ಕ್ರಾಂತಿಯಲ್ಲಿ ಜಾಗತಿಕ ಶಕ್ತಿಯಾಗುವ ನಮ್ಮ ಬದ್ಧತೆಯನ್ನು ತೋರಿಸುತ್ತದೆ' ಎಂದು ಅವರು ಹೇಳಿದ್ದಾರೆ 

'ಭಾರತದ ಸಂಸ್ಥೆಯಾಗಿ, ಭವಿಷ್ಯದ ವಿನ್ಯಾಸ ಮತ್ತು ಅತ್ಯಾಧುನಿಕ ತಂತ್ರಜ್ಞಾನವನ್ನು ಜಗತ್ತಿಗೆ ಪರಿಚಯಿಸಲು ನಾವು ಹೆಮ್ಮೆಪಟ್ಟುಕೊಳ್ಳುತ್ತೇವೆ. ಭಾರತದ ಎಂಜಿನಿಯರಿಂಗ್ ಮತ್ತು ಉತ್ಪಾದನಾ ವ್ಯವಸ್ಥೆಯಲ್ಲಿನ ಪ್ರತಿಭೆ ಹಾಗೂ ಸಾಮರ್ಥ್ಯಕ್ಕೆ ದೊರಕಿದ ಮನ್ನಣೆ ಇದಾಗಿದೆ' ಎಂದು ಅವರು ತಿಳಿಸಿದ್ದಾರೆ.  

'ನಮ್ಮ ವಿತರಕರ ಮೂಲಕ ಯುರೋಪ್‌ಗೆ ಅಲ್ಟ್ರಾವೈಲೆಟ್ ವಿಸ್ತರಿಸುವುದಲ್ಲದೆ ಭಾರತವು ನೀಡಬಹುದಾದ ಅತ್ಯುತ್ತಮ ಉತ್ಪನ್ನ ಹಾಗೂ ವಿಶ್ವದರ್ಜೆಯ ಮಾಲೀಕತ್ವದ ಅನುಭವವನ್ನು ನೀಡುತ್ತದೆ' ಎಂದು ಅವರು ನುಡಿದಿದ್ದಾರೆ.  

ಎಫ್77 ಬೈಕ್, ಕೇವಲ 2.8 ಸೆಕೆಂಡುಗಳಲ್ಲಿ 0ದಿಂದ 60 ಕಿ.ಮೀ. ವೇಗ ಪಡೆದುಕೊಳ್ಳಲಿದೆ. ಇದರ 10.3 ಕೆಡಬ್ಲ್ಯುಎಚ್ ಬ್ಯಾಟರಿ 30 ಕೆಡಬ್ಲ್ಯು ಪವರ್ ಹಾಗೂ 100 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಗರಿಷ್ಠ ವೇಗ ಮಿತಿ ಗಂಟೆಗೆ 155 ಕಿ.ಮೀ. ಆಗಿದೆ.  

ಅಲ್ಟ್ರಾವೈಲೆಟ್‌ನ ವಿದ್ಯುತ್ ಚಾಲಿತ ಬೈಕ್‌ಗಳು, ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿವೆ. ಇದರಲ್ಲಿ ಕಟ್ಟಿಂಗ್-ಎಡ್ಜ್ ತಂತ್ರಜ್ಞಾನ, ವೈಲೆಟ್ ಎಐ ಸಿಸ್ಟಂ, ಬಾಷ್ ಅಭಿವೃದ್ಧಿಪಡಿಸಿದ ಸ್ವಿಚಬಲ್ ಡ್ಯುಯಲ್ ಚಾನಲ್ ಎಬಿಎಸ್ ಸೇರಿವೆ. 

10 ಹಂತದ ರಿಜನರೇಟಿವ್ ಬ್ರೇಕಿಂಗ್, 4 ಹಂತದ ಟ್ರಾಕ್ಷನ್ ಕಂಟ್ರೋಲ್, ಡೈನಾಮಿಕ್ ಸ್ಟೆಬಿಲಿಟಿ ಕಂಟ್ರೋಲ್ ಮತ್ತು ಸುರಕ್ಷತೆ ಹಾಗೂ ಕಾರ್ಯಕ್ಷಮತೆಯು ಉಲ್ಲಾಸದಾಯಕ ಸವಾರಿ ಅನುಭವವನ್ನು ನೀಡುತ್ತದೆ.  

'ಇದು ಹೊಸ ಮಾರುಕಟ್ಟೆಗಳಲ್ಲಿ ಬೈಕ್‌ಗಳ ಪರಿಚಯ ಮಾತ್ರವಲ್ಲದೆ, ಭಾರತದಲ್ಲಿ ಹುಟ್ಟಿ ವರ್ಷಗಳ ನಿರಂತರ ಸಂಶೋಧನೆ, ಎಂಜಿನಿಯರಿಂಗ್ ಮತ್ತು ನಾವೀನ್ಯತೆಯ ಜಾಗತಿಕ ಅನಾವರಣವಾಗಿದೆ' ಎಂದು ಅಲ್ಟ್ರಾವೈಲೆಟ್ ಸಂಸ್ಥೆಯ ಸಹ ಸ್ಥಾಪಕ ಹಾಗೂ ಸಿಟಿಒ ನೀರಜ್ ರಾಜ್‌ಮೋಹನ್ ಅಭಿಪ್ರಾಯಪಟ್ಟಿದ್ದಾರೆ.  

'ನಾವು ಜಗತ್ತಿನ ಅತ್ಯಂತ ಸುಧಾರಿತ ಎಲೆಕ್ಟ್ರಿಕ್ ಬೈಕ್ ನಿರ್ಮಿಸುವ ದಿಟ್ಟ ಮಹತ್ವಾಕಾಂಕ್ಷೆಯೊಂದಿಗೆ ಪ್ರಯಾಣವನ್ನು ಆರಂಭಿಸಿದೆವು. ಇಂದು ಆ ದೃಷ್ಟಿಕೋನವನ್ನು ಅಂತರರಾಷ್ಟ್ರೀಯ ಗ್ರಾಹಕರಿಗೆ ತಲುಪಿಸಿದ್ದೇವೆ' ಎಂದು ಅವರು ಹೇಳಿದ್ದಾರೆ.  

ಎಫ್77 ಬೈಕ್, ಅಲ್ಟ್ರಾವೈಲೆಟ್‌ನ ಸಂಶೋಧನಾ ಮತ್ತು ಅಭಿವೃದ್ಧಿ(ಆರ್‌ ಆ್ಯಂಡ್‌ ಡಿ) ಕೇಂದ್ರದಲ್ಲಿ ನುರಿತ ಅಭಿವೃದ್ಧಿ, ಕಠಿಣ ಪರೀಕ್ಷೆ, ಕಾರ್ಯಕ್ಷಮತೆ, ನಾವೀನ್ಯತೆ, ಸುರಕ್ಷತೆ ಹಾಗೂ ವಿನ್ಯಾಸದ ಬದ್ಧತೆಯ ಫಲಿತಾಂಶವಾಗಿದೆ. ಭಾರತಕ್ಕೆ ಈ ಮೈಲಿಗಲ್ಲು ಜಾಗತಿಕ ವಿದ್ಯುತ್ ಚಾಲಿತ ಪರಿವರ್ತನಾ ಮಾರುಕಟ್ಟೆಯಲ್ಲಿ ತನ್ನ ಸಾಮರ್ಥ್ಯದ ಪ್ರದರ್ಶನ ಮಾತ್ರವಲ್ಲದೆ ಅತ್ಯುನ್ನತ ಮಟ್ಟದಲ್ಲಿ ಸ್ಪರ್ಧಿಸುವ ತಂತ್ರಗಾರಿಕೆಯೊಂದಿಗೆ ಅದನ್ನು ಮುನ್ನಡೆಸುವ ಸಾಮರ್ಥ್ಯವನ್ನು ಪ್ರತಿನಿಧಿಸುತ್ತದೆ.  

2025, ಜುಲೈ 31ರೊಳಗೆ ಮುಂಗಡ ಬುಕ್ಕಿಂಗ್ ಮಾಡುವ ಗ್ರಾಹಕರಿಗೆ ಅಲ್ಟ್ರಾವೈಲೆಟ್ ಸಂಸ್ಥೆಯು ಈ ಎರಡೂ ಬೈಕ್‌ಗಳಿಗೆ ವಿಶೇಷ ಬೆಲೆಯ ಆಫರ್ ನೀಡುತ್ತದೆ. ಎಫ್77 ಮ್ಯಾಕ್ 2 ಕೇವಲ €8990 (ಸಾಮಾನ್ಯ ದರ €9990) ಮತ್ತು ಎಫ್77 ಸೂಪರ್‌ಸ್ಟ್ರೀಟ್ ಕೇವಲ €9290 (ಸಾಮಾನ್ಯ ದರ € 10390) ಬೆಲೆಯಲ್ಲಿ ಲಭ್ಯವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.