ನವದೆಹಲಿ (ಪಿಟಿಐ): ಅನಿಲ್ ಧೀರೂಬಾಯಿ ಅಂಬಾನಿ ಸಮೂಹದ ಅಧ್ಯಕ್ಷ ಅನಿಲ್ ಅಂಬಾನಿ ಕಳೆದ ಹಣಕಾಸು ವರ್ಷದಲ್ಲಿ (2011-12) ತಮ್ಮ ಒಟ್ಟು ವೇತನದಲ್ಲಿ ರೂ5.5 ಕೋಟಿಗಳಷ್ಟು ಕಡಿತ ಅನುಭವಿಸಿದ್ದಾರೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಅವರ ವೇತನ ಮೂರರಲ್ಲಿ ಎರಡು ಭಾಗದಷ್ಟು ಕಡಿಮೆಯಾಗಿದೆ.
ಅಂಬಾನಿ ಸಮೂಹದ ನಾಲ್ಕು ಕಂಪೆನಿಗಳಾದ ರಿಲಯನ್ಸ್ ಕಮ್ಯುನಿಕೇಷನ್, ರಿಲಯನ್ಸ್ ಪವರ್, ರಿಲಯನ್ಸ್ ಇನ್‌ಫ್ರಾ ಮತ್ತು ರಿಲಯ ನ್ಸ್ ಕ್ಯಾಪಿಟಲ್ ಮೂಲಕ ಅಂಬಾನಿ 2010-11ರಲ್ಲಿ ಒಟ್ಟು ರೂ17 ಕೋಟಿಗಳಷ್ಟು ಸಂಭಾವನೆ ಪಡೆದಿದ್ದರು.
ವಿಶೇಷವೆಂದರೆ ಅನಿಲ್ ಅಂಬಾನಿ ಈ ಕಂಪೆನಿಗಳಿಂದ ಯಾವುದೇ ವೇತನ ಪಡೆಯುವುದಿಲ್ಲ. ಬದಲಿಗೆ ನಿರ್ದೇಶಕ ಮಂಡಳಿ ಸೇರಿದಂತೆ ವಿವಿಧ ಸಭೆಗಳಿಗೆ ಹಾಜರಾಗುವುದಕ್ಕೆ `ಸಭಾ ಶುಲ್ಕ~ ಪಡೆಯುತ್ತಾರೆ. ಕಂಪೆನಿಯ ನಿಯಮದಂತೆ ನಿರ್ದೇಶಕರಿಗೆ ಇರುವ ವೇತನವೂ ಅವರಿಗೆ ಸಂದಾಯವಾಗುತ್ತದೆ.
ಸಭಾ ಶುಲ್ಕದ ರೂಪದಲ್ಲಿ ರಿಲಯನ್ಸ್ ಪವರ್‌ನಿಂದ ರೂ80 ಸಾವಿರ, ರಿಲಯನ್ಸ್ ಇನ್‌ಫ್ರಾ ಮತ್ತು ರಿಲಯನ್ಸ್ ಕ್ಯಾಪ್‌ನಿಂದ ತಲಾ ರೂ1 ಲಕ್ಷ, ರಿಲಯನ್ಸ್ ಕಮ್ಯುನಿಕೇಷನ್‌ನಿಂದ ರೂ2.6 ಲಕ್ಷ ಬಾಕಿ ಪಾವತಿಯಾಗಬೇಕಿದ್ದು, ಈ ಮೊತ್ತವನ್ನು ಅನಿಲ್ ನಿರಾಕರಿಸಿದ್ದಾರೆ.
ಕಂಪೆನಿಯ ಇತ್ತೀಚಿನ ವರದಿ ಪ್ರಕಾರ ಕಳೆದ ಹಣಕಾಸು ವರ್ಷದಲ್ಲಿ ಅನಿಲ್ `ಆರ್-ಪವರ್, ಆರ್-ಕ್ಯಾಪ್ ಮತ್ತು ಆರ್-ಕಾಂ ಸಂಸ್ಥೆಗಳಿಂದ ಯಾವುದೇ ಸಂಭಾವನೆ ಪಡೆದಿಲ್ಲ. ಜಾಗತಿಕ ಆರ್ಥಿಕ ಅಸ್ಥಿರತೆಯಿಂದಾಗಿ ಕಳೆದ ಕೆಲವು ವರ್ಷಗಳಿಂದ ದೇಶದ ಪ್ರಮುಖ ಕಂಪೆನಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಸ್ವಯಂಪ್ರೇರಿತವಾಗಿ ತಮ್ಮ ವೇತನದಲ್ಲಿ ಕಡಿತ ಮಾಡಿಕೊಂಡಿದ್ದಾರೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.
ವೇತನ ಕಡಿತ ಮಾಡಿಕೊಂಡಿರುವ ಪ್ರಮುಖರ ಪಟ್ಟಿಯಲ್ಲಿ ಭಾರ್ತಿ ಏರ್‌ಟೆಲ್ ಅಧ್ಯಕ್ಷ ಸುನಿಲ್ ಮಿತ್ತಲ್ ಹೆಸರೂ ಇದೆ. ಮಿತ್ತಲ್ ಕಳೆದ ವರ್ಷ ಒಟ್ಟು ವೇತನ ರೂ21 ಕೋಟಿಯಲ್ಲಿ ಶೇ 22ರಷ್ಟು ಕಡಿತ ಮಾಡಿಕೊಂಡಿದ್ದಾರೆ. ವಿಪ್ರೊ ಅಧ್ಯಕ್ಷ ಅಜೀಂ ಪ್ರೇಮ್‌ಜಿ ಅವರ ವೇತನ ಕೂಡ ಇಳಿಕೆಯಾಗಿದೆ. ಪ್ರೇಮ್‌ಜಿ ಕಳೆದ ವರ್ಷ ತಮ್ಮ ಒಟ್ಟು ವೇತನದಲ್ಲಿ ರೂ1.9 ಕೋಟಿಗಳಷ್ಟು ಕಡಿತ ಅನುಭವಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.