ADVERTISEMENT

ಅಗ್ಗದ ದರದ ಟ್ಯಾಬ್ಲೆಟ್ ಸಮರ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2012, 19:30 IST
Last Updated 13 ಆಗಸ್ಟ್ 2012, 19:30 IST
ಅಗ್ಗದ ದರದ ಟ್ಯಾಬ್ಲೆಟ್ ಸಮರ
ಅಗ್ಗದ ದರದ ಟ್ಯಾಬ್ಲೆಟ್ ಸಮರ   

ನವದೆಹಲಿ (ಐಎಎನ್‌ಎಸ್): ಕಳೆದ ಕೆಲವು ತಿಂಗಳುಗಳಿಂದ ದೇಶೀಯ ಮಾರುಕಟ್ಟೆಗೆ ದೊಡ್ಡ ಪ್ರಮಾಣದಲ್ಲಿ ಅಗ್ಗದ ದರದ, ಲಘು ಭಾರದ, ತೆಳು ಟ್ಯಾಬ್ಲೆಟ್‌ಗಳು ಆಮದಾಗುತ್ತಿದ್ದು, ಗರಿಷ್ಠ ಗುಣಮಟ್ಟದ, ದುಬಾರಿ ಬ್ರಾಂಡ್‌ಗಳಿಗೆ ಸವಾಲು ಒಡ್ಡುತ್ತಿವೆ ಎಂದು ಅಧ್ಯಯನವೊಂದು ತಿಳಿಸಿದೆ.

ಕಂಪ್ಯೂಟರ್ ಮಾರುಕಟ್ಟೆ ಅಧ್ಯಯನ ಸಂಸ್ಥೆ `ಗಾರ್ಟ್‌ನರ್~ ಈ ಸಮೀಕ್ಷೆ ನಡೆಸಿದೆ. ಶಿಕ್ಷಣ, ವಿಮೆ ಕ್ಷೇತ್ರಗಳಿಂದ ಇಂತಹ ಅಗ್ಗದ ಟ್ಯಾಬ್ಲೆಟ್‌ಗಳಿಗೆ ಬೇಡಿಕೆ ಹೆಚ್ಚಿದೆ. ಎಲ್ಲ ರೀತಿಯ ಸೌಲಭ್ಯಗಳ ಜತೆಗೆ ನೋಡಲು ಆಕರ್ಷಕವಾಗಿರುವುದು ಬೇಡಿಕೆ ಹೆಚ್ಚಲು ಪ್ರಮುಖ ಕಾರಣ ಎಂದು `ಗಾರ್ಟ್‌ನರ್~ನ ಹಿರಿಯ ವಿಶ್ಲೇಷಕ ವಿಶಾಲ್ ತ್ರಿಪಾಠಿ ಅಭಿಪ್ರಾಯಪಟ್ಟಿದ್ದಾರೆ.

ಮಾರ್ಚ್ 31ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಇಂತಹ 3 ಲಕ್ಷ ಟ್ಯಾಬ್ಲೆಟ್‌ಗಳುಆಮದಾಗಿವೆ. ಬೇಡಿಕೆ ಕೂಡ ಶೇ 25ರಷ್ಟು ಹೆಚ್ಚಿದೆ ಎಂದು ಅವರು ಗಮನ ಸೆಳೆದಿದ್ದಾರೆ. ಪ್ರೊಸ್ಟ್ ಅಂಡ್ ಸ್ಯುಲಿವೆನ್ ಸಮೀಕ್ಷೆ ಪ್ರಕಾರ ದೇಶದ ಟ್ಯಾಬ್ಲೆಟ್ ಮಾರುಕಟ್ಟೆಯು 2017ರ ವೇಳೆಗೆ 23 ದಶಲಕ್ಷಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ. 

ಟ್ಯಾಬ್ಲೆಟ್ ಸದ್ಯ ಚಾಲ್ತಿಯಲ್ಲಿರುವ ಜನಪ್ರಿಯ ಉದ್ಯಮ ಉಪಕರಣ ಆಗಿರುವುದರಿಂದ ಈ ಮಾರುಕಟ್ಟೆಗೆ ವಿಪುಲ ಅವಕಾಶ ಇದೆ. ಟ್ಯಾಬ್ಲೆಟ್‌ನಲ್ಲಿ ಉಚಿತ ಅಪ್ಲಿಕೇಷನ್ ಇಲ್ಲದಿದ್ದರೆ ಇದಕ್ಕೆ  ಬೆಲೆಯೇ ಇರುವುದಿಲ್ಲ ಎಂದೂ  ಅರ್ನೆಸ್ಟ್ ಅಂಡ್ ಯಂಗ್ ಅಧ್ಯಯನ ಹೇಳಿದೆ.

ಮೈಕ್ರೊಮ್ಯಾಕ್ಸ್ ಫನ್‌ಬುಕ್
ಅತ್ಯಂತ ಅಗ್ಗದ ಟ್ಯಾಬ್ಲೆಟ್‌ಗಳಲ್ಲಿ ಮೈಕ್ರೊಮ್ಯಾಕ್ಸ್ ಫನ್‌ಬುಕ್ ಕೂಡ ಒಂದು. ರೂ.6,999 ಈ ಟ್ಯಾಬ್ಲೆಟ್‌ನ ಬೆಲೆ. 1.2 ಗಿಗಾ ಹರ್ಟ್ಸ್ ಕೋರ್‌ಟೆಕ್ಸ್-ಎ8 ಪ್ರೊಸೆಸರ್ ಮತ್ತು 512 ಎಂ.ಬಿ ರ‌್ಯಾಮ್ ಹೊಂದಿರುವ  ಈ ಪುಟ್ಟ ಗಣಕ ಆಂಡ್ರಾಯ್ಡ ಕಾರ್ಯನಿರ್ವಹಣೆ ವ್ಯವಸ್ಥೆ ಜತೆಗೆ 32 ಜಿ.ಬಿ.ವರೆಗೆ ವಿಸ್ತರಿಸಿಕೊಳ್ಳಬಹುದಾದ ಸ್ಮರಣ ಸಾಮರ್ಥ್ಯ ಹೊಂದಿದೆ.

ಎಚ್‌ಸಿಎಲ್ ಎಂಇ ಯು-1
ಲಘು ಭಾರದ ಈ ಟ್ಯಾಬ್ಲೆಟ್ ಬೆಲೆ ರೂ.7,999. ಆಂಡ್ರಾಯ್ಡ ಕಾರ್ಯನಿರ್ವಹಣಾ ವ್ಯವಸ್ಥೆ 512 ಎಂಬಿ ರ‌್ಯಾಮ್, 31ಜಿ.ಬಿ.ವರೆಗೆ ವಿಸ್ತರಿಸಿಕೊಳ್ಳಬಹುದಾದ ಸ್ಮರಣ ಸಾಮರ್ಥ್ಯ, 3ಜಿ ಮತ್ತು ವೈ-ಫೈ ಸೌಲಭ್ಯ ಜತೆಗೆ ಫ್ರೆಂಟ್ ಕ್ಯಾಮೆರಾ ಸೌಲಭ್ಯವನ್ನೂ ಹೊಂದಿದೆ. ಸಂಗೀತ, ಗೇಮಿಂಗ್ ಸಾಮಾಜಿಕ ತಾಣಕ್ಕೆ ಸಂಬಂಧಿಸಿದ 17ಕ್ಕೂ ಹೆಚ್ಚು ಉಚಿತ ಅಪ್ಲಿಕೇಷನ್‌ಗಳಿರುವುದು ಇದರ ವಿಶೇಷ.

ಜಿಂಕ್ ಜಡ್-999
ಸರಳವಾಗಿ ಕಾಣುವ ಈ ಟ್ಯಾಬ್ಲೆಟ್ ಗರಿಷ್ಠ ಗುಣಮಟ್ಟದ ತಾಂತ್ರಿಕ ವಿಶೇಷತೆಗಳನ್ನು ಒಳಗೊಂಡಿದೆ. 512 ಎಂಬಿ ರ‌್ಯಾಮ್, 3ಜಿ ಮತ್ತು ವೈ-ಫೈ ಸಂಪರ್ಕ, 2 ಎಂ.ಪಿ ಕ್ಯಾಮೆರಾ ಮತ್ತು 1.5 ಗಿಗಾ ಹರ್ಟ್ಸ್ ಕೋರ್‌ಟೆಕ್ಸ್-ಎ8 ಪ್ರೊಸೆಸರ್ ಇರುವ ಈ ಟ್ಯಾಬ್ಲೆಟ್ ಬೆಲೆ ರೂ.11,900.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.