ADVERTISEMENT

ಆರ್ಥಿಕ ಬಿಕ್ಕಟ್ಟಿನ ಪರಿಣಾಮ ವಾರಾಂತ್ಯದಲ್ಲೂ ಕೆಲಸ!

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2013, 19:59 IST
Last Updated 6 ಸೆಪ್ಟೆಂಬರ್ 2013, 19:59 IST

ನವದೆಹಲಿ(ಪಿಟಿಐ): ದೇಶದ ಹಣಕಾಸು ಮಾರುಕಟ್ಟೆಯಲ್ಲಿ ತಲೆದೋರಿರುವ ಬಿಕ್ಕಟ್ಟು ಸಣ್ಣ ಮತ್ತು ಮಧ್ಯಮ ಪ್ರಮಾಣದ(ಎಂಎಸ್‌ಎಂಇ) ಉದ್ಯಮಗಳ ವರಮಾನದ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆ ಇದೆ.  ಇನ್ನೊಂದೆಡೆ ಆರ್ಥಿಕ ಅಸ್ಥಿರತೆ ಮತ್ತು ಅದರಿಂದ ಸೃಷ್ಟಿಯಾಗಿರುವ ತೀವ್ರ ಸ್ಪರ್ಧೆಯಿಂದ  ಹಲವು ಖಾಸಗಿ ಕಂಪೆನಿಗಳು ವಾರಾಂತ್ಯದಲ್ಲೂ ತಮ್ಮ ಉದ್ಯೋಗಿಗಳಿಗೆ ಕೆಲಸ ಮಾಡುವಂತೆ ಸೂಚನೆ ನೀಡಿವೆ.

ಡಾಲರ್ ವಿರುದ್ಧ ರೂಪಾಯಿ ವಿನಿಮಯ ಮೌಲ್ಯ ಕುಸಿತ, ಒಟ್ಟಾರೆ ಉದ್ಯಮದ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಜತೆಗೆ ಕಳೆದ 2-3 ತಿಂಗಳಿಂದ ವಾರಾಂತ್ಯದಲ್ಲಿ ಸರ್ಕಾರಿ ರಜಾ ದಿನಗಳೂ ಹೆಚ್ಚಿವೆ. ಇದರಿಂದ ಉತ್ಪಾದನೆ ಕಡಿಮೆ ಆಗಿದೆ. ಇನ್ನೊಂದೆಡೆ  ಕಂಪೆನಿಗಳ ನಡುವೆ ಸ್ಪರ್ಧೆ ಹೆಚ್ಚಿದೆ. ಇದರಿಂದ ಶೇ 60ರಿಂದ ಶೇ 70ರಷ್ಟು ಕಂಪೆನಿಗಳು ವಾರಾಂತ್ಯದಲ್ಲೂ ಕೆಲಸ ಮಾಡುವಂತೆ ತಮ್ಮ ಉದ್ಯೋಗಿಗಳಿಗೆ ಸೂಚನೆ ನೀಡಿವೆ ಎಂದು ಮಾರುಕಟ್ಟೆ ಅಧ್ಯಯನ ಸಂಸ್ಥೆ `ಟಾಪ್ ಗೇರ್ ಕನ್ಸಲ್ಟೆಂಟ್' ಹೇಳಿದೆ.

`ವಿನಿಮಯ ಮಾರುಕಟ್ಟೆಯಲ್ಲಿನ ಅಸ್ಥಿರತೆಯಿಂದ ವಿದೇಶಿ ಗ್ರಾಹಕ ಸಂಸ್ಥೆಗಳು ತಮ್ಮ ಬೇಡಿಕೆಯನ್ನು ಆದಷ್ಟು ಬೇಗನೇ ಪೂರೈಸುವಂತೆ ಒತ್ತಡ ಹೇರುತ್ತಿವೆ. ಇದರಿಂದ ವಾರಾಂತ್ಯದಲ್ಲೂ ಹೆಚ್ಚಿನ ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ' ಎಂದು  ಟಾಪ್ ಗೇರ್ ಉಪಾಧ್ಯಕ್ಷೆ ವಿದ್ಯಾ ವೆಂಕಟ್ ಹೇಳಿದ್ದಾರೆ.

`ರೂಪಾಯಿ ಅಪಮೌಲ್ಯದ ಬಿಸಿ ಸಣ್ಣ ಮತ್ತು ಮಧ್ಯಮ ಪ್ರಮಾಣದ ಸಂಸ್ಥೆಗಳನ್ನು ಹೆಚ್ಚಾಗಿ ತಟ್ಟಿದೆ. ಬಿಡಿಭಾಗಗಳ ಆಮದು ತುಟ್ಟಿಯಾಗಿದೆ. ಇನ್ನೊಂದೆಡೆ ದೀರ್ಘಾವಧಿ ಬೇಡಿಕೆಗಳು ಬರುತ್ತಿಲ್ಲ. ಚಿಕ್ಕ ಚಿಕ್ಕ ಬೇಡಿಕೆಗಳನ್ನು ಅಲ್ಪಾವಧಿಯಲ್ಲಿ ಪೂರೈಸುವಂತೆ ಒತ್ತಡ ಹೆಚ್ಚುತ್ತಿದೆ. ಈ ಎಲ್ಲ ಸಂಗತಿಗಳಿಂದ `ಎಂಎಸ್‌ಎಂಇ' ಉದ್ಯಮ ನಿಜವಾದ ಬಿಕ್ಕಟ್ಟು ಎದುರಿಸುತ್ತಿದೆ' ಎನ್ನುತ್ತಾರೆ ಯುನಿಸೆಲ್ ಇಂಟರ್‌ನ್ಯಾಷನಲ್ ಸಂಸ್ಥೆ ವ್ಯವಸ್ಥಾಪಕ ಉದಿತ್ ಮಿತ್ತಲ್.

`ಆರ್ಥಿಕ ಬಿಕ್ಕಟ್ಟಿನ ಪರಿಣಾಮ ಎದುರಿಸಲು ಕಂಪೆನಿಗಳು ಹೆಚ್ಚುವರಿ ಶ್ರಮ ಹಾಕುವುದು ಅನಿವಾರ್ಯ. ಬ್ಯಾಂಕಿಂಗ್, ಐ.ಟಿ, ಎಂಎನ್‌ಸಿ ಕಂಪೆನಿಗಳು ವಾರಾಂತ್ಯದಲ್ಲೂ ತಮ್ಮ ಸಿಬ್ಬಂದಿ ಸೇವೆ ಬಳಸಿಕೊಳ್ಳುತ್ತಿವೆ. ಐ.ಟಿ ವಲಯದಲ್ಲಿ ಮತ್ತೊಮ್ಮೆ 24x7 ದುಡಿಮೆ ಸಂಸ್ಕೃತಿ ಆರಂಭವಾದರೆ ಆಶ್ಚರ್ಯ ಇಲ್ಲ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.