ADVERTISEMENT

ಆರ್ಥಿಕ ಮುನ್ನೋಟ ಕಳವಳಕಾರಿ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2012, 19:30 IST
Last Updated 25 ಏಪ್ರಿಲ್ 2012, 19:30 IST

ನವದೆಹಲಿ (ಪಿಟಿಐ): ವಿತ್ತೀಯ ಪರಿಸ್ಥಿತಿ ಮತ್ತು ರಾಜಕೀಯ ವಾತಾವರಣ ಸುಧಾರಿಸದೇ ಇದ್ದರೆ, ದೇಶದಲ್ಲಿನ ಬಂಡವಾಳ ಹೂಡಿಕೆ ಪ್ರಮಾಣ ಮತ್ತು ಸಾಲ ಮರು ಪಾವತಿ ಸಾಮರ್ಥ್ಯ ಕುಸಿದು ಆರ್ಥಿಕ ಪರಿಸ್ಥಿತಿಯು ಸ್ಥಿರತೆಯಿಂದ ಋಣಾತ್ಮಕ ಹಂತಕ್ಕೆ ಕುಸಿಯುವ ಸಾಧ್ಯತೆಗಳಿವೆ.

ಜಾಗತಿಕ ಸಾಲ ಮೌಲ್ಯ ಮಾಪನ ಸಂಸ್ಥೆ `ಸ್ಟಾಂಡರ್ಡ್ ಅಂಡ್ ಪೂರ್ಸ್‌~ ಭಾರತದ ಭವಿಷ್ಯದ ಆರ್ಥಿಕ ಸಂಕಷ್ಟದ ಬಗ್ಗೆ ತನ್ನ ವರದಿಯಲ್ಲಿ ನೀಡಿರುವ ಎಚ್ಚರಿಕೆ ಇದಾಗಿದೆ.

ದೇಶಿ ಕಂಪನಿಗಳು, ಹಣಕಾಸು ಸಂಸ್ಥೆಗಳು ವಿದೇಶಗಳಿಂದ ಪದೇಪದೇ ಸಾಲ ಪಡೆಯುತ್ತಿರುವುದು ದೇಶದ ಆರ್ಥಿಕ ಪರಿಸ್ಥಿತಿಗೆ ಹೆಚ್ಚು ಹೊರೆಯಾಗಿ ಪರಿಣಮಿಸಲಿದೆ. ಇದು ದೇಶದ ಅರ್ಥ ವ್ಯವಸ್ಥೆಯನ್ನು ಸದ್ಯದ ಸುಸ್ಥಿರ (ಬಿಬಿಬಿ ಪ್ಲಸ್) ದರ್ಜೆಯಿಂದ ಋಣಾತ್ಮಕ (ಬಿಬಿಬಿ ಮೈನಸ್) ದರ್ಜೆಗೆ ದೂಡಲಿದೆ.  ದೇಶದ ಬಂಡವಾಳ ಮಾರುಕಟ್ಟೆ ಮೇಲೂ ಪ್ರತಿಕೂಲ ಪರಿಣಾಮ ಬೀರಲಿದೆ. ಸದ್ಯದ ದುರ್ಬಲ ರಾಜಕೀಯ ಪರಿಸ್ಥಿತಿಯೂ ಆರ್ಥಿಕ ಹಿನ್ನಡೆಗೆ ಕಾರಣವಾಗಲಿದೆ ಎಂದು `ಎಸ್‌ಅಂಡ್‌ಪಿ~ಯ ಸಾಲ ವಿಶ್ಲೇಷಣೆ ಪರಿಣತ ತಕಹಿರ ಒಗಾವಾ ಬುಧವಾರ ಹೇಳಿಕೆಯಲ್ಲಿ ಎಚ್ಚರಿಸಿದ್ದಾರೆ.

ADVERTISEMENT

`ಸಕಾಲಿಕ ಎಚ್ಚರಿಕೆ ಗಂಟೆ~

ಸ್ಟಾಂಡರ್ಡ್ ಅಂಡ್ ಪೂರ್ ಸಂಸ್ಥೆ ದೇಶದ ಆರ್ಥಿಕ ವೃದ್ಧಿ ದರದ ಬಗ್ಗೆ  ನೀಡಿರುವ `ಋಣಾತ್ಮಕ~ ಮೌಲ್ಯಮಾಪನವು ಸಕಾಲಿಕವಾದ ಎಚ್ಚರಿಕೆ ಗಂಟೆ~ಯಾಗಿದೆ ಎಂದು ಪ್ರಣವ್ ಮುಖರ್ಜಿ ಪ್ರತಿಕ್ರಿಯಿಸಿದ್ದಾರೆ. `ಈ ಮುನ್ನೋಟದ ಹೇಳಿಕೆಯಿಂದ  ಆತಂಕ  ಪಡಬೇಕಿಲ್ಲ. ಎರಡನೇ ಹಂತದ ಆರ್ಥಿಕ ಸುಧಾರಣೆ ಕ್ರಮಗಳನ್ನು ಕೈಗೊಳ್ಳಲಿದೆ~ ಎಂದಿದ್ದಾರೆ. `ದೇಶದ ಆರ್ಥಿಕ ಪ್ರಗತಿಗತಿ ಶೇ 7ರ ಪ್ರಮಾಣ ಮುಟ್ಟಲಿದೆ. ವಿತ್ತೀಯ ಕೊರತೆ ನಿಯಂತ್ರಿಸುವುದಕ್ಕೆ ನಾವು ಈಗಲೂ ಬದ್ಧರಾಗಿದ್ದೇವೆ~ ಎಂಬ ಉತ್ತೇಜನದ ಮಾತನಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.