
ಮುಂಬೈ (ಪಿಟಿಐ): ಹಣದುಬ್ಬರ ಗಣನೀಯವಾಗಿ ತಗ್ಗಿರುವುದರಿಂದ ಹೂಡಿಕೆಗೆ ಉತ್ತೇಜನ ನೀಡಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮಂಗಳವಾರ ಪ್ರಕಟಿಸಿದ ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆಯಲ್ಲಿ ಅಲ್ಪಾವಧಿ ಬಡ್ಡಿ ದರವಾದ ರೆಪೊ ದರದಲ್ಲಿ ಶೇ 0.25ರಷ್ಟು ಕಡಿತ ಮಾಡಿದೆ.
ಇದು ಈ ವರ್ಷದಲ್ಲಿ ಆರ್‌ಬಿಐ ಮಾಡುತ್ತಿರುವ ಮೂರನೆಯ ಬಡ್ಡಿ ದರ ಕಡಿತವಾಗಿದೆ. ಜನವರಿ ಮತ್ತು ಮಾರ್ಚ್‌ನಲ್ಲೂ ರೆಪೊ ದರವನ್ನು ಶೇ 0.25ರಷ್ಟು ತಗ್ಗಿಸಲಾಗಿತ್ತು.
ಹೂಡಿಕೆಗೆ ಉತ್ತೇಜನ: ‘ಅರ್ಥ ವ್ಯವಸ್ಥೆ ಚೇತರಿಸಿಕೊಂಡಿದ್ದು, ಹೂಡಿಕೆಗೆ ಉತ್ತೇಜನ ನೀಡಲು ಬಡ್ಡಿ ದರ ತಗ್ಗಿಸಲಾಗಿದೆ. ಬ್ಯಾಂಕುಗಳು ಈ ಲಾಭವನ್ನು ಶೀಘ್ರದಲ್ಲೇ ಗ್ರಾಹಕರಿಗೆ ವರ್ಗಾಯಿಸುವ ವಿಶ್ವಾಸ ಇದೆ’ ಎಂದು ಗವರ್ನರ್ ರಘುರಾಂ ರಾಜನ್ ಹೆಳಿದ್ದಾರೆ.
ಇಳಿಯಲಿದೆ ಇಎಂಐ: ರೆಪೊ ದರ ತಗ್ಗಿರುವುದರಿಂದ ಗೃಹ, ವಾಣಿಜ್ಯ, ವಾಹನ ಮತ್ತು ವೈಯಕ್ತಿಕ ಸಾಲಗಳ ಮೇಲಿನ ಬಡ್ಡಿ ದರ ಕಡಿಮೆಯಾಗಲಿವೆ. ಈಗಾಗಲೇ ಬ್ಯಾಂಕುಗಳಿಂದ ಸಾಲ ಪಡೆದು ಮರು ಪಾವತಿ ಮಾಡುತ್ತಿರುವವರ ಸಮಾನ ಮಾಸಿಕ ಕಂತು (ಇಎಂಐ) ಕೂಡ ಇಳಿಯಲಿದೆ. ಶೀಘ್ರದಲ್ಲೇ ಬ್ಯಾಂಕುಗಳು ಪರಿಷ್ಕೃತ ಬಡ್ಡಿ ದರ ಪ್ರಕಟಿಸುವ ಸಾಧ್ಯತೆ ಇದೆ.
ತಯಾರಿಕಾ ವಲಯಕ್ಕೆ ಉತ್ತೇಜನ: ರೆಪೊ ದರ ತಗ್ಗಿರುವುದರಿಂದ ಮಾರುಕಟ್ಟೆಯಲ್ಲಿ ನಗದು ಹರಿವು ಹೆಚ್ಚಲಿದ್ದು, ತಯಾರಿಕಾ ವಲಯಕ್ಕೆ ಗರಿಷ್ಠ ಮಟ್ಟದಲ್ಲಿ ಉತ್ತೇಜನ ಲಭಿಸಲಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ಉದ್ಯಮ ವಲಯ ಕೂಡ ಆರ್‌ಬಿಐ ನೀತಿಯನ್ನು ಸ್ವಾಗತಿಸಿದೆ.
ಸದ್ಯ ಬಡ್ಡಿ ದರ ಶೇ 7.5 ರಿಂದ ಶೇ 7.25ಕ್ಕೆ ಇಳಿದಿದೆ. ಆದರೆ, ಶೇ 4ರಷ್ಟಿದ್ದ ನಗದು ಮೀಸಲು ಅನುಪಾತದಲ್ಲಿ (ಸಿಆರ್‌ಆರ್) ಮತ್ತು ಶೇ 21.5ರಷ್ಟಿದ್ದ ಶಾಸನಬದ್ಧ ನಗದು ಅನುಪಾತದಲ್ಲಿ (ಎಸ್‌ಎಲ್‌ಆರ್) ಆರ್‌ಬಿಐ ಯಥಾಸ್ಥಿತಿಯನ್ನೇ ಕಾಯ್ದುಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.