ADVERTISEMENT

ಇರಾನ್‌ಗೆ ರಫ್ತು ವಹಿವಾಟು ರೂಪಾಯಿಯಲ್ಲೇ ವ್ಯವಹಾರ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2012, 19:30 IST
Last Updated 13 ಫೆಬ್ರುವರಿ 2012, 19:30 IST

ಮಂಗಳೂರು:   ರಫ್ತು ಕ್ಷೇತ್ರದಲ್ಲಿ ಇದೇ ಪ್ರಥಮ ಬಾರಿಗೆ ರೂಪಾಯಿಯಲ್ಲೇ ವ್ಯವಹರಿಸುವ ಅವಕಾಶ ಸಾಧ್ಯವಾಗಿದ್ದು, ಇರಾನ್ ಜತೆಗಿನ ಈ ಒಪ್ಪಂದದ ಲಾಭ ದೇಶದ ರಫ್ತುದಾರರಿಗೆ ಲಭಿಸಲಿದೆ ಎಂದು ವಿದೇಶಿ ವ್ಯಾಪಾರ ಇಲಾಖೆ ಮಹಾ ನಿರ್ದೇಶಕ ಅನೂಪ್ ಕೆ.ಪೂಜಾರಿ ಹೇಳಿದರು.

ಇರಾನ್‌ನಿಂದ ಆಮದು ಮಾಡಿಕೊಳ್ಳುವ ತೈಲದ ಮೌಲ್ಯದ ಶೇ 25ರಷ್ಟು ಮೊತ್ತವನ್ನು ಭಾರತದ ಬ್ಯಾಂಕ್ ಒಂದರಲ್ಲಿ (ಯುಕೊ ಬ್ಯಾಂಕ್) ಸರ್ಕಾರ ಠೇವಣಿ ಇಡಬೇಕಾಗುತ್ತದೆ. ದೇಶಿ ರಫ್ತುದಾರರು ಇರಾನ್‌ಗೆ ಮಾಡುವ ರಫ್ತಿಗೆ ಪ್ರತಿಯಾಗಿ ಈ ಬ್ಯಾಂಕ್‌ನಿಂದ ರೂಪಾಯಿಯಲ್ಲೇ ಹಣ ಪಡೆಯಬಹುದು. ಹೀಗಾಗಿ ಡಾಲರ್, ಯೂರೊ, ಯೆನ್‌ನಂತಹ ವಿದೇಶಿ ಕರೆನ್ಸಿಗಳೊಂದಿಗೆ ವಿನಿಮಯದ ಕಷ್ಟ ತಪ್ಪಿ ರೂಪಾಯಿಗೆ ಅನುಕೂಲವಾಗಲಿದೆ ಎಂದರು.
ಸೋಮವಾರ ನಗರದಲ್ಲಿ ನಡೆದ `ಕರ್ನಾಟಕ: ರಫ್ತು ಮುನ್ನೋಟ-2020~ ಹೆಸರಿನ ರಫ್ತುದಾರರ ಸಮಾವೇಶದಲ್ಲಿ ಅವರು ಮಾತನಾಡುತ್ತಿದ್ದರು.

ಇರಾನ್ ಮೇಲೆ ಅಮೆರಿಕದ ಆರ್ಥಿಕ ದಿಗ್ಬಂಧನ ಹಿನ್ನೆಲೆಯಲ್ಲಿ ಕೆಲವು ದಿನಗಳ ಹಿಂದೆ ಈ ಒಪ್ಪಂದ ಏರ್ಪಟ್ಟಿದ್ದು, ಈ ಬಗ್ಗೆ ಇನ್ನಷ್ಟು ವಿವರವಾಗಿ ಚರ್ಚಿಸುವುದಕ್ಕಾಗಿ ಅಧಿಕಾರಿಗಳ ನಿಯೋಗ ಶೀಘ್ರವೇ ಇರಾನ್‌ಗೆ ತೆರಳಲಿದೆ. ರೂಪಾಯಿಯಲ್ಲೇ ರಫ್ತು ನಡೆಸುವುದಕ್ಕೆ ದೇಶಕ್ಕೆ ಲಭಿಸಿದ ಅತ್ಯುತ್ತಮ ಅವಕಾಶ ಇದಾಗಿದ್ದು, ರಫ್ತುದಾರರು ಇದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಎಂಎಸ್‌ಇಜೆಡ್:  ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಕಂಪೆನಿ ವ್ಯವಹಾರಗಳ ಸಚಿವ ಎಂ.ವೀರಪ್ಪ ಮೊಯಿಲಿ, ಮಂಗಳೂರು ವಿಶೇಷ ಆರ್ಥಿಕ ವಲಯದ (ಎಂಎಸ್‌ಇಜೆಡ್) 2ನೇ ಹಂತದ ಕಾಮಗಾರಿಗಾಗಿ ಶೇ 80ರಷ್ಟು ರೈತರು ಭೂಮಿ ನೀಡಲು ಸಿದ್ಧರಿದ್ದು, ಈ ಬಗ್ಗೆ ಮುಖ್ಯಮಂತ್ರಿಗೆ ಪತ್ರ ಬರೆದಿರುವೆ. ಆದರೆ, ಅವರಿಂದ ಇನ್ನೂ ಉತ್ತರ ಬಂದಿಲ್ಲ. ಅವರು ಶೀಘ್ರವೇ ಜನಪ್ರತಿನಿಧಿಗಳ ಸಭೆ ಕರೆದು ಮತ್ತೆ ನೋಟಿಫಿಕೇಷನ್ ಆದೇಶ ಹೊರಡಿಸಲು ಕ್ರಮಕೈಗೊಳ್ಳಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.