ADVERTISEMENT

ಇಲಾರಗಿಯಲ್ಲೇ ಕೊಳೆಯುತ್ತಿರುವ ಈರುಳ್ಳಿ..!

ಡಿ.ಬಿ, ನಾಗರಾಜ
Published 7 ಜೂನ್ 2018, 5:10 IST
Last Updated 7 ಜೂನ್ 2018, 5:10 IST
ಕೊಳೆತ ಉಳ್ಳಾಗಡ್ಡಿ ಬೇರ್ಪಡಿಸುತ್ತಿರುವ ಕೃಷಿ ಕಾರ್ಮಿಕರು
ಕೊಳೆತ ಉಳ್ಳಾಗಡ್ಡಿ ಬೇರ್ಪಡಿಸುತ್ತಿರುವ ಕೃಷಿ ಕಾರ್ಮಿಕರು   

ವಿಜಯಪುರ: ಕಾರ ಹುಣ್ಣಿಮೆಯ ಆಸುಪಾಸಿನಲ್ಲಿ ಉತ್ತಮ ಧಾರಣೆ ಸಿಗಬಹುದು ಎಂಬ ನಂಬಿಕೆಯಿಂದ, ಎರಡು ತಿಂಗಳಿಂದ ಕಾಪಿಟ್ಟಿದ್ದ ಉಳ್ಳಾಗಡ್ಡಿ, ಇಲಾರಗಿಯಲ್ಲೇ (ಬಯಲು ಪ್ರದೇಶದಲ್ಲಿ ಈರುಳ್ಳಿ ಸಂಗ್ರಹಿಸುವ ವ್ಯವಸ್ಥೆ) ಕೊಳೆಯಲಾರಂಭಿಸಿದ್ದು, ಬೆಳೆಗಾರರನ್ನು ಆತಂಕಕ್ಕೆ ದೂಡಿದೆ.

ಹವಾಮಾನ ವೈಪರೀತ್ಯದಿಂದ ರೈತರ ಹೊಲಗಳಲ್ಲಿನ ಇಲಾರಗಿಯಲ್ಲಿನ ಉಳ್ಳಾಗಡ್ಡಿ ಕೊಳೆತು ದುರ್ನಾತ ಬೀರುತ್ತಿದೆ.

ಬಂಪರ್‌ ಬೆಳೆ ಮತ್ತು ಬೆಲೆಯ ನಿರೀಕ್ಷೆ ಇಟ್ಟುಕೊಂಡು ಪ್ರತಿ ವರ್ಷವೂ ಜಿಲ್ಲೆಯ ಬಸವನಬಾಗೇವಾಡಿ, ನಿಡಗುಂದಿ, ಕೊಲ್ಹಾರ, ಬಬಲೇಶ್ವರ ತಾಲ್ಲೂಕು ವ್ಯಾಪ್ತಿಯ ಹಲವು ಗ್ರಾಮಗಳ ರೈತರು ಬೇಸಿಗೆ ಬೆಳೆಯನ್ನಾಗಿ ಉಳ್ಳಾಗಡ್ಡಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಾರೆ. ನಿರೀಕ್ಷಿತ ಧಾರಣೆ ದೊರಕದಿದ್ದರೆ, ಇಲಾರಗಿಗಳಲ್ಲಿ ಉತ್ಪನ್ನ ಸಂಗ್ರಹಿಸಿಟ್ಟು ಬೆಲೆ ಹೆಚ್ಚಾದಾಗ ಮಾರಾಟ ಮಾಡುತ್ತಾರೆ. ಆದರೆ, ಈ ವರ್ಷ ಬೇಸಿಗೆಯಲ್ಲಿ ಬಿಸಿಲ ಝಳ ಹೆಚ್ಚುವ ಜತೆಗೆ, ಜೂನ್‌ ತಿಂಗಳ ಮುಂಚೆಯೇ ಸಂಗ್ರಹಿಸಿಟ್ಟ ಉಳ್ಳಾಗಡ್ಡಿ ಕೊಳೆತು ನಾರುತ್ತಿದ್ದು, ಗೊಳಸಂಗಿ, ಬುದ್ನಿ, ತೆಲಗಿ, ಮಸೂತಿ, ಕೂಡಗಿ, ಬೀರಲದಿನ್ನಿ, ವಂದಾಲ, ಉಪ್ಪಲದಿನ್ನಿ, ಮಮದಾಪುರ ಭಾಗದ ರೈತರು ಕಂಗಾಲಾಗಿದ್ದಾರೆ.

ADVERTISEMENT

ಕೂಲಿ ಸಿಕ್ಕರೆ ಸಾಕು!: ಹತ್ತು ಎಕರೆಯಲ್ಲಿ ಉಳ್ಳಾಗಡ್ಡಿ ಬೆಳೆದು ಉತ್ತಮ ಧಾರಣೆ ನಿರೀಕ್ಷೆಯಲ್ಲಿದ್ದ ನಿಡಗುಂದಿ ತಾಲ್ಲೂಕಿನ ಬುದ್ನಿ ಗ್ರಾಮದ ರಾಮನಗೌಡ ಪಾಟೀಲ ಅವರಿಗೆ ದಿಕ್ಕೇ ತೋಚುತ್ತಿಲ್ಲ.  ₹ 2.5 ಲಕ್ಷಕ್ಕೆ 10 ಎಕರೆ ಜಮೀನನ್ನು ಲಾವಣಿ ಪಡೆದಿದ್ದ ಅವರು , ಈರುಳ್ಳಿ ಕೃಷಿಗೆ  ₹ 6 ಲಕ್ಷ ಖರ್ಚು ಮಾಡಿದ್ದಾರೆ. ಇಲಾರಗಿಗಾಗಿ ₹ 1 ಲಕ್ಷ ವೆಚ್ಚ ಮತ್ತು ಅಲ್ಲಿಗೆ ಈರುಳ್ಳಿಯನ್ನು ಸಾಗಿಸಲು ₹ 50 ಸಾವಿರ ಟ್ರ್ಯಾಕ್ಟರ್‌ ಬಾಡಿಗೆ ನೀಡಿದ್ದಾಗಿ ಹೇಳುವ ಅವರಿಗೆ ಖರ್ಚು–ವೆಚ್ಚವನ್ನು ಸರಿದೂಗಿಸುವ ದಾರಿ ಕಾಣುತ್ತಿಲ್ಲ.

‘ಸಾಲ ಮಾಡಿ ಬೆಳೆ ತೆಗದಿದ್ದೆ. 100 ಟನ್‌ ಉತ್ಪನ್ನ ಸಿಕ್ಕಿತ್ತು. ಧಾರಣೆ ಕಮ್ಮಿ ಇದ್ದುದ್ದಕ್ಕ ಕಾರ ಹುಣ್ಣಿಮೆ ಆಸುಪಾಸು ಮಾರೋಣ ಅಂದ್ಕೊಂಡಿದ್ದೆ. ಆದ್ರ ನಾಲ್ಕೈದು ದಿನದ ಹಿಂದೆ ಇಲಾರಗಿಯಿಂದ ದುರ್ನಾತ ಹೆಚ್ಚಿತ್ತು. ಏನಾಗೇತಿ ಅಂತ ನೋಡಿದ್ರ ಗಡ್ಡಿ ಕೊಳ್ಯಾಕತ್ತೇತಿ. ಒಂದ್ ಕ್ಷಣಾ ನನ್ನ ಎದೀನ ಒಡದಂಗಾತು’ ಎಂದು ಅಳಲು ತೋಡಿಕೊಂಡರು ರಾಮನಗೌಡರು.

‘ಬಸನಗೌಡ ಪಾಟೀಲ, ಅಲ್ಲಾಸಾಬ್‌ ಹತ್ತರಕಿಹಾಳ, ಹುಸೇನ್‌ಬಾಷಾ ಹತ್ತರಕಿಹಾಳ, ಮುರುಗೇಶ ಹೆಬ್ಬಾಳ ಸೇರಿದಂತೆ ಇನ್ನಿತರರು ಎದುರಿಸುತ್ತಿರುವ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ’ ಎಂದು ಮರುಗುತ್ತಾರೆ ಅವರು.

‘ಕೊಳೆತ ಗಡ್ಡೆಗಳನ್ನು ಹೊರ ಹಾಕುತ್ತಿರುವ ಅವರು, ಉಳಿದದ್ದನ್ನು ಒಣಗಿಸಿ ಸ್ವಚ್ಛ ಮಾಡಿಸುತ್ತಿದ್ದಾರೆ. ದಿನಕ್ಕೆ ಹತ್ತು ಹೆಣ್ಣಾಳುಗಳು ತಲಾ ₹ 200ರಂತೆ, ನಾಲ್ವರು ಗಂಡಾಳುಗಳು ₹ 400ಕ್ಕೆ ದುಡಿಯುತ್ತಿದ್ದಾರೆ. ಈಗಿನ ಲೆಕ್ಕಾಚಾರಕ್ಕೆ ಶೇ 30ರಷ್ಟು ಉತ್ತಮ ಉಳ್ಳಾಗಡ್ಡಿ ಸಿಕ್ಕರೂ ತಮ್ಮ ಪುಣ್ಯ’ ಎನ್ನುತ್ತಾರೆ ಅವರು.

‘ಕೊಳೆತ ಉಳ್ಳಾಗಡ್ಡಿಯನ್ನು ಹೊಲ, ತಿಪ್ಪೆಗೆ ಹಾಕುತ್ತಿದ್ದು, ಕುರಿಗಾಹಿಗಳು ಅಲ್ಲಿಗೆ ಬಂದು ಕೆಲ ಹೊತ್ತು ಮೇಯಿಸುತ್ತಿದ್ದಾರೆ. ಉಳಿದುದನ್ನು ಸ್ವಚ್ಛಗೊಳಿಸಿ ಒಣಗಿಸಿ ಮಾರಾಟಕ್ಕೆ ಸಜ್ಜುಗೊಳಿಸಲು ವಾರಕ್ಕಿಂತ ಹೆಚ್ಚಿನ ಸಮಯ ಬೇಕು. ಇದುವರೆಗೆ ಕೂಲಿಗೆ ಖರ್ಚು ಮಾಡಿರುವ ಹಣ ಕೈ ಸೇರಿದರೆ ಸಾಕು ಎನ್ನುವಂತಾಗಿದೆ’ ಎಂದು ಅಲವತ್ತುಕೊಂಡರು.

₹ 10 ಲಕ್ಷಕ್ಕೂ ಹೆಚ್ಚು ಸಾಲವಿದೆ. ಗಂಟು, ಬಡ್ಡಿ ಕೊಡದಿದ್ರೆ ಸಾವ್ಕಾರ ಮನೀಗ ಬಂದ್ ಕುಂದರತಾನ. ಕಿರಿಕಿರಿ ಮಾಡ್ತಾನ. ವಿಧಿ ಇಲ್ಲದ ಮತ್ತೊಂದ್‌ ಕಡೆ ಸಾಲ ತಂದು ತೀರಿಸಬೇಕು. ಈಗ ಮಾರ್ಕೆಟ್‌ನಾಗ ಕ್ವಿಂಟಲ್‌ಗೆ ₹ 600ರಿಂದ ₹ 800 ಧಾರಣೆ ಐತಿ. ₹ 1200ರಿಂದ ₹ 1400 ಸಿಕ್ರ ಸ್ವಲ್ಪ ಉಸಿರಾಡಬಹುದು’ ಎಂದು ರಾಮನಗೌಡ ‘ಪ್ರಜಾವಾಣಿ’ ಬಳಿ ತಮ್ಮ ಅಸಹಾಯಕತೆ ತೋಡಿಕೊಂಡರು.

‘ಧಾರಣಿ ಬಂದೀತು ಅಂತ ಕಾದು ಉಳ್ಳಾಗಡ್ಡಿ ಇಟ್ಟಿದ್ದೆ. ಏಕಾಏಕಿ ಕೊಳ್ಯಾಕತ್ತೇತಿ. ಬಜಾರ್‌ನಾಗ ರೇಟಿಲ್ಲ. ಆದ್ರ, ಮಾರಲಿಲ್ಲ ಅಂತಂದ್ರ ಎಲ್ಲಾ ಗಡ್ಡೀನೂ ಕೊಳೀತೈತಿ. ಏನ್ಮಾಡೋದ್ರಿ?’ ಎಂದು ಕೇಳುತ್ತಾರೆ ಬುದ್ನಿ ಗ್ರಾಮದ ಬಸನಗೌಡ ಪಾಟೀಲ.

**

ಉಳ್ಳಾಗಡ್ಡಿಗೆ ಬೆಂಬಲ ಬೆಲೆ ಘೋಷಿಸಿ, ಖರೀದಿಗೆ ಮುಂದಾಗಬೇಕು.ರೈತರ ಬಳಿ ಉತ್ಪನ್ನ ಖಾಲಿಯಾದ ಮೇಲೆ ಕೇಂದ್ರ ಆರಂಭಿಸಿದರೆ ಏನು ಪ್ರಯೋಜನ?
 –ಸೋಮನಾಥ ಬಿರಾದಾರ, ಉಪ್ಪಲದಿನ್ನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.