ADVERTISEMENT

ಉದ್ದೇಶಪೂರ್ವಕ ಸುಸ್ತಿದಾರರ ₹ 516 ಕೋಟಿ ಸಾಲ ವಜಾ

ಪಿಟಿಐ
Published 4 ಮಾರ್ಚ್ 2018, 19:30 IST
Last Updated 4 ಮಾರ್ಚ್ 2018, 19:30 IST
ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಸಂಗ್ರಹ ಚಿತ್ರ).
ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಸಂಗ್ರಹ ಚಿತ್ರ).   

ನವದೆಹಲಿ: ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ಪ್ರಸಕ್ತ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಉದ್ದೇಶಪೂರ್ವಕ ಸುಸ್ತಿದಾರರ ₹ 516 ಕೋಟಿಗಳಷ್ಟು ಸಾಲ ವಜಾ ಮಾಡಿವೆ.

ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗಿನ ಅವಧಿಯಲ್ಲಿ ಬ್ಯಾಂಕ್‌ಗಳು ಸುಸ್ತಿದಾರರ 38 ಖಾತೆಗಳನ್ನು ವಜಾ ಮಾಡಿವೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿ ಸಾಲ ವಜಾ ಮಾಡುವುದು ಎಂದರೆ, ಬ್ಯಾಂಕ್‌ ತನ್ನ ಲಾಭದಲ್ಲಿನ ಮೊತ್ತವನ್ನು ಈ ಸಾಲದ ಮೊತ್ತಕ್ಕೆ ತೆಗೆದು ಇರಿಸುವುದು ಎಂದರ್ಥ. ಹೀಗೆ ಮಾಡುವುದರಿಂದ ವಸೂಲಾಗದ ಸಾಲವು (ಎನ್‌ಪಿಎ) ಬ್ಯಾಂಕ್‌ನ  ಹಣಕಾಸು ಪರಿಸ್ಥಿತಿಯ ಭಾಗವಾಗಿರುವುದಿಲ್ಲ. ಬ್ಯಾಲನ್ಸ್‌ಶೀಟ್‌ನಲ್ಲಿ ಅದನ್ನು ಉಲ್ಲೇಖಿಸುವುದಿಲ್ಲ. ಆದರೆ, ಇದು ಬ್ಯಾಂಕ್‌ನ ಲಾಭದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.

ADVERTISEMENT

‘ಉದ್ದೇಶಪೂರ್ವಕ ಸುಸ್ತಿದಾರರಿಂದ ಸಾಲ ವಸೂಲಿ ಸಾಧ್ಯತೆ ಕ್ಷೀಣಿಸಿದಾಗ, ಭವಿಷ್ಯದಲ್ಲಿ ಸಾಲ ಮರುಪಾವತಿ ಸಾಧ್ಯವೇ ಇಲ್ಲ ಎನ್ನುವ ಪರಿಸ್ಥಿತಿ ಇದ್ದಾಗ ಬ್ಯಾಂಕ್‌ಗಳು ಸಾಲ ವಜಾಕ್ಕೆ ಮುಂದಾಗುತ್ತವೆ’ ಎಂದು ಹಿರಿಯ ಬ್ಯಾಂಕ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಬ್ಯಾಂಕ್‌ನಿಂದ ಪಡೆದ ಸಾಲವನ್ನು ಸಾಲ ಪಡೆದ ಉದ್ದೇಶಕ್ಕೆ ಬಳಸದ, ಸಾಲ ಮರುಪಾವತಿಸದ, ಹಣವನ್ನು ಬೇರೆಡೆ ವರ್ಗಾಯಿಸಿದ ಅಥವಾ ಸಾಲಕ್ಕೆ ಆಧಾರ ರೂಪದಲ್ಲಿ ಬ್ಯಾಂಕ್‌ಗೆ ಒತ್ತೆ ಇಟ್ಟಿದ್ದ ಸಂಪತ್ತನ್ನು ಬ್ಯಾಂಕ್ ಗಮನಕ್ಕೆ ತರದೆ ಮಾರಾಟ ಮಾಡಿದವರನ್ನು ಉದ್ದೇಶಪೂರ್ವಕ ಸುಸ್ತಿದಾರ ಎಂದು ಪರಿಗಣಿಸಲಾಗುತ್ತಿದೆ. ಬ್ಯಾಂಕ್‌ಗಳಿಗೆ ಸಾಲ ಮರಳಿಸಬಾರದು ಎನ್ನುವ ಉದ್ದೇಶದಿಂದಲೇ ಸಾಲ ಪಡೆದವರಿಂದ ಸಾಲ ಮರುಪಾವತಿ ಸಾಧ್ಯವಿಲ್ಲ’ ಎಂದು ಅಧಿಕಾರಿ ಹೇಳುತ್ತಾರೆ.

ಅಗತ್ಯ ಕಂಡುಬಂದರೆ ಬ್ಯಾಂಕ್‌ಗಳು ಇಂತಹ ಸುಸ್ತಿದಾರರು ಮತ್ತು ಅವರ ಜಾಮೀನುದಾರರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಬಹುದು. ಸಾಲಕ್ಕೆ ಅಡವಿಟ್ಟ ಆಸ್ತಿ ಮಾರಾಟ ಮಾಡಿ ಬಾಕಿ ಸಾಲ ವಸೂಲಿಗೆ ತ್ವರಿತ ಕ್ರಮ ಕೈಗೊಳ್ಳಬಹುದು. ಸುಸ್ತಿದಾರರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆಯನ್ನೂ ಹೂಡಬಹುದು.

ಎಸ್‌ಬಿಐ ಪಾಲು ಶೇ 27: ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಗೆ ಉದ್ದೇಶಪೂರ್ವಕ ಸುಸ್ತಿದಾರರು ಬಾಕಿ ಉಳಿಸಿಕೊಂಡಿರುವ ಸಾಲದ ಮೊತ್ತದಲ್ಲಿ ಸ್ಟೇಟ್‌ಬ್ಯಾಂಕ್‌ ಆಫ್‌ ಇಂಡಿಯಾದ ಪಾಲು ಶೇ 27ರಷ್ಟು ಇದೆ. ಇಂತಹ ಸಾಲದ ಮೊತ್ತದಲ್ಲಿ ಎಸ್‌ಬಿಐ ಮತ್ತು ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನ (ಪಿಎನ್‌ಬಿ) ಒಟ್ಟು ಪಾಲು ಶೇ 40ರಷ್ಟಿದೆ. ಸಾಲದ ಮೊತ್ತ ₹ 37,382 ಕೋಟಿಗಳಷ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.