ADVERTISEMENT

ಉಳಿತಾಯ: ಮಹಿಳೆಗೆ ಉತ್ತೇಜನ

ಭಾರತೀಯ ಮಹಿಳಾ ಬ್ಯಾಂಕ್‌

ಸುಶೀಲಾ ಡೋಣೂರ
Published 3 ಡಿಸೆಂಬರ್ 2013, 19:30 IST
Last Updated 3 ಡಿಸೆಂಬರ್ 2013, 19:30 IST

ಟೈಲರಿಂಗ್ ತರಬೇತಿ ಕೇಂದ್ರ ತೆರೆಯಬೇಕು ಎನ್ನುವುದು ನನ್ನ ಬಹು     ದಿನದ ಆಸೆ. ನನಗೆ ಹೆಚ್ಚೇನೂ ಬೇಕಿಲ್ಲ. ಒಂದು ದೊಡ್ಡ ಹಾಲ್ ಇರುವ ಕೋಣೆಯನ್ನು ಲೀಸ್‌ಗೆ  ಹಾಕಿಕೊಳ್ಳಬೇಕು. ಕನಿಷ್ಠ ಹತ್ತು ಮೆಷಿನ್‌ಗಳನ್ನು ಖರೀದಿ ಮಾಡಬೇಕು. ಇದಕ್ಕೆ ರೂ.10 ಲಕ್ಷದಿಂದ 15 ಲಕ್ಷ ದವರೆಗೂ ಸಾಲ ಬೇಕಾಗಬಹುದು. ಇಲ್ಲಿ ಮಹಿಳೆಯರಿಗೆ ಕಡಿಮೆ ಬಡ್ಡಿಯಲ್ಲಿ ಸಾಲ ಸಿಗುತ್ತೆ, ಸಬ್ಸಿಡಿ ಸಿಗುತ್ತೆ ಅಂತ ಪೇಪರಿನಲ್ಲಿ ಓದಿದೆ. ನೋಡಬೇಕು ಏನಾಗುತ್ತೋ’?.....

‘ನನ್ನದು ಒಂದು ಪುಟ್ಟ ಬ್ಯೂಟಿ ಪಾರ್ಲರ್ ಇದೆ. ಆದರೆ ಒಂದು ಸುಸಜ್ಜಿತ ಬ್ಯೂಟಿ ಸಲೂನ್ ಅಂಡ್ ಸ್ಪಾ  ತೆರೆಯುವ ಕನಸಿದೆ. ಒಂದು ಖ್ಯಾತ ಕಂಪೆನಿಗೆ ಫ್ರಾಂಚೈಸಿ ಕೋರಿ ಪತ್ರ ಬರೆದಿದ್ದೆ. ಅವರು ನನಗೆ ಫ್ರಾಂಚೈಸಿ ಕೊಡಲು ಒಪ್ಪಿದ್ದಾರೆ. ಅದಕ್ಕೆ ಈಗ ಸುಮಾರು ರೂ.40 ಲಕ್ಷ ಬಂಡವಾಳದ ಅಗತ್ಯವಿದೆ. ಹಾಗಾಗಿ, ಇಲ್ಲಿ ಮಹಿಳಾ ಬ್ಯಾಂಕ್‌ಗೆ ಮಾಹಿತಿ ಕೇಳಲು ಬಂದಿದ್ದೇನೆ’...

‘ಬೆಂಗ್ಳೂರೊಳಗೆ ಹೆಣ್ಮಕ್ಳಿಗಾಗೇ ಒಂದು ಬ್ಯಾಂಕ್ ಬಂದೈತೆ ಅಂತ ನನ್ನ ಮಗಳು ಹೇಳಿದ್ಲು. ತರಕಾರಿ ಮಾರಿ ಜೀವನ ಸಾಗಿಸ್ತಾ, ಮಗಳನ್ನು ಕಷ್ಟಪಟ್ಟು ಡಿಗ್ರಿ ಓದಿಸ್ತಾ ಇದ್ದೇನೆ. ದೊಡ್ಡದಾಗಿ ತರಕಾರಿ ಅಂಗಡಿ  ಹಾಕೋದಕ್ಕೆ ಸಾಲ ಗೀಲಾ ಕೊಡ್ತಾರೇನೊ ಅಂತ ಬಂದೆ. ಆದ್ರೆ ಈ ಮೇಡಮ್ಮನಾರು ಹೇಳೋದೇನೂ ಅರ್ಥ ಆಗ್ತಿಲ್ಲ. ಯಾರೂ ಕನ್ನಡ ಮಾತಾಡಲ್ಲ. ಅದಕ್ಕೆ ಈಗ ಮನೆಗೆ ಹೋಗಿ ನಾಳೆ ಮಗಳನ್ನು ಜತೆಗೆ ಕರೆದುಕೊಂಡು ಬರ್ತೀನಿ’...

ಬೆಂಗಳೂರಿನ ಹಡ್ಸನ್‌ ವೃತ್ತದ ಹಲಸೂರು ಗೇಟ್‌ ಪೊಲೀಸ್‌ ಠಾಣೆ ಎದುರಿನ ‘ಐಎಸ್‌ಸಿಐ’ ಕಟ್ಟಡದಲ್ಲಿ ನ. 19ರಂದು ಕಾರ್ಯಾರಂಭ ಮಾಡಿರುವ ಮಹಿಳಾ ಬ್ಯಾಂಕಿನಲ್ಲಿ ಕಳೆದ ಹದಿನೈದು ದಿನಗಳಲ್ಲಿ ಕಂಡು ಬಂದ ದೃಶ್ಯಗಳಿವು.

ಕೇಂದ್ರ ಸರ್ಕಾರ ಮಹಿಳೆಯರಿಂದ, ಮಹಿಳೆಯರಿ­ಗಾಗಿ ಆರಂಭಿಸಿರುವ ಪ್ರಥಮ ‘ಭಾರತೀಯ ಮಹಿಳಾ ಬ್ಯಾಂಕ್‌’ (ಬಿಎಂಬಿ)ನ ರಾಜ್ಯದಲ್ಲಿನ ಮೊದಲ ಶಾಖೆ ಇನ್ನೂ ನಿರ್ಮಾಣ ಹಂತದಲ್ಲಿರುವ ಕಟ್ಟಡದಲ್ಲಿ ವಹಿವಾಟಿಗೆ ಚಾಲನೆ ನೀಡಿದೆ.

ಕಣ್ಣಲ್ಲಿ ಕನಸು ಹೊತ್ತ ನಗರದ ಹತ್ತಾರು ಮಹಿಳೆಯರ ಹೆಜ್ಜೆಗಳು ಹೆಚ್ಚಿನ ಆರ್ಥಿಕ ಬಲಕ್ಕಾಗಿ ಬ್ಯಾಂಕಿನತ್ತ ಸಾಗಿ ಬರುತ್ತಿವೆ. ತಮ್ಮ ಬಹುದಿನದ ಹಂಬಲಕ್ಕೆ ಹಣಕಾಸಿನ ಒತ್ತಾಸೆ ಸಿಕ್ಕ ಖುಷಿ ಒಂದೆಡೆ ಆದರೆ, ಈ ನೂತನ ಯೋಜನೆಗಳು ಎಷ್ಟರ ಮಟ್ಟಿಗೆ ಫಲಕಾರಿಯಾದಾವು ಎನ್ನುವ ಸಣ್ಣ ಕಳವಳ ಇನ್ನೊಂದೆಡೆ.

ಇನ್ನೂ ಪೂರ್ಣಗೊಳ್ಳದ ಕಟ್ಟಡದ ಕೆಲಸ, ಕಿರ್ರ್... ಸರ್ರ್... ಎನ್ನುವ ಶಬ್ದಗಳ ನಡುವೆಯೇ ಧೂಳಿನಿಂದ ರಕ್ಷಿಸಿಕೊಳ್ಳಲು ಮುಖಕ್ಕೆ ಸೆರಗು ಹಿಡಿದು ಅಡ್ಡಡ್ಡ ಬಿದ್ದಿರುವ ನಿರ್ಮಾಣ ಕಾರ್ಯದ ವಸ್ತುಗಳನ್ನು ಜಾಗ್ರತೆಯಿಂದ ದಾಟಿ ಒಳಗೆ ಬಂದು ಮಲಯಾಳಿ, ತಮಿಳು ಮಿಶ್ರಿತ ಹಿಂದಿ– ಇಂಗ್ಲಿಷನ್ನು ತಾಳ್ಮೆಯಿಂದ ಅರ್ಥ ಮಾಡಿಕೊಂಡು ಬ್ಯಾಂಕಿನ ಯೋಜನೆಗಳ ಬಗ್ಗೆ ತಿಳಿದುಕೊಳ್ಳುವ ಶ್ರಮ ಗ್ರಾಹಕರದ್ದು.
ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಮಾದರಿಯಲ್ಲೇ ಕಾರ್ಯನಿರ್ವಹಿಸುವ ಈ ಬ್ಯಾಂಕಿನಲ್ಲಿ ಮಹಿಳೆಯರದ್ದೇ ಮಿಂಚು. ವಿಚಾರಣಾ ಕೌಂಟರ್, ಕ್ಯಾಶ್‌ ಕೌಂಟರ್‌, ಮ್ಯಾನೇಜರ್ ಕ್ಯಾಬಿನಿನಲ್ಲಿ ಮಹಿಳೆಯರೇ ಕಾಣುತ್ತಾರೆ.

ಮಾಹಿತಿ ಅರಸಿ ಬರುವ ಗ್ರಾಹಕರಲ್ಲಿಯೂ ಬಹುಪಾಲು ಮಹಿಳೆಯರೇ. ಉದ್ಘಾಟನೆ ದಿನದಂದು ಸಾಂಕೇತಿಕವಾಗಿ ಮಹಿಳಾ ಉದ್ಯಮಿ, ವಿದ್ಯಾರ್ಥಿನಿ, ಅಂಗವಿಕಲರು ಹಾಗೂ ಅಲ್ಪಸಂಖ್ಯಾತ, ಪರಿಶಿಷ್ಟ ಜಾತಿಯ ಗ್ರಾಹಕರಿಗೆ ಮೊದಲ ಸೇವೆ ನೀಡಲಾಗಿದೆ. ಮೊದಲ ಐದು ದಿನಗಳಲ್ಲಿಯೇ ಸುಮಾರು 100ಕ್ಕೂ ಅಧಿಕ ಖಾತೆಗಳನ್ನು ತೆರೆಯಲಾಗಿದೆ. ಮೊದಲ ವರ್ಷದಲ್ಲಿ 33,400 ಖಾತೆಗಳನ್ನು ತೆರೆಯುವ ಯೋಜನೆ ಇದೆ. ಮುಂದಿನ ಹಂತದಲ್ಲಿ ಎಟಿಎಂ, ಹಾಗೂ ಇಂಟರ್‌ನೆಟ್‌ ಬ್ಯಾಂಕಿಂಗ್‌ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು  ಕಲ್ಪಿಸುವ ತಯಾರಿ ನಡೆದಿದೆ.

ಪ್ರಸಕ್ತ ಹಣಕಾಸು ವರ್ಷದ ಮುಂಗಡ ಪತ್ರದಲ್ಲಿ  ಪ್ರಸ್ತಾಪಿಸಿದಂತೆ ಕೇಂದ್ರ ಸರ್ಕಾರ ಈ ಯೋಜನೆಗೆ ರೂ.1 ಸಾವಿರ ಕೋಟಿ ಮೀಸಲಿರಿಸಿದೆ. ಅಂತೆಯೇ ವಾಣಿ­ಜ್ಯೋದ್ಯಮಿ­ಗಳಿಗೆ, ವೃತ್ತಿಪರ ಮಹಿಳೆಯರಿಗೆ, ಸ್ವಸ­ಹಾಯ ಗುಂಪುಗಳಿಗೆ, ಅಷ್ಟೇ ಏಕೆ ಗೃಹಿಣಿಯರಿಗೂ ಸಾಲ ವಿತರಿಸುವ ಯೋಜನೆ ಇದೆ. ಮಹಿಳೆಯರಲ್ಲಿನ ಉಳಿತಾಯ ಮನೋಭಾವವನ್ನು ಉತ್ತೇ­ಜಿಸುವ ನಿಟ್ಟಿನಲ್ಲಿ ಉಳಿತಾಯ ಖಾತೆಯಲ್ಲಿನ ರೂ.1 ಲಕ್ಷದವರೆಗಿನ ಮೊತ್ತಕ್ಕೆ ಶೇ 4.5ರಷ್ಟು ಮತ್ತು ರೂ.1 ಲಕ್ಷಕ್ಕಿಂತ ಅಧಿಕ ಮೊತ್ತಕ್ಕೆ ಶೇ 5ರಷ್ಟು ಬಡ್ಡಿ ದರ ನೀಡಲಾಗುತ್ತಿದೆ.

ಮಹಿಳಾ ಸ್ವಸಹಾಯ ಗುಂಪುಗಳಿಗೆ  ಸ್ವರ್ಣ ಜಯಂತಿ ಗ್ರಾಮ್‌ ಸ್ವರೋಜ್‌­ಗಾರ್‌ ಯೋಜನೆಯಡಿ ವಾರ್ಷಿಕ ಶೇ 7ರ ಬಡ್ಡಿ ದರದಲ್ಲಿ ಸಾಲ ನೀಡುವಂತೆ (ಗರಿಷ್ಠ ರೂ.3 ಲಕ್ಷ)  ಭಾರತೀಯ ರಿಸರ್ವ್‌ ಬ್ಯಾಂಕ್‌ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಿಗೆ ಸೂಚನೆ ನೀಡಿದೆ. ಈ ಸೂಚನೆ ‘ಬಿಎಂಬಿ’ಗೂ ಅನ್ವಯಿಸುತ್ತದೆ.

ಪುರುಷರಿಗೂ ಅವಕಾಶ
ಇದು ಮಹಿಳಾ ಬ್ಯಾಂಕ್‌ ಆಗಿದ್ದರೂ, ಸೇವೆ ಪಡೆದುಕೊಳ್ಳುವಲ್ಲಿ ಶೇ 20ರಷ್ಟು ಪಾಲನ್ನು ಪುರುಷರಿಗೂ ನೀಡಲಾಗಿದೆ. (ಶೇ 80ರಷ್ಟು ದೊಡ್ಡ ಪಾಲು ಮಹಿಳೆಯರಿಗೆ). ಸಿಬ್ಬಂದಿಯಲ್ಲೂ ಸಹ ಅಲ್ಲಲ್ಲಿ ಪುರುಷ ಮುಖಗಳು ಕಾಣುತ್ತವೆ (ಸದ್ಯ ಮೊದಲ ಹಂತದಲ್ಲಿ ನೇಮಕಗೊಂಡ ಅಧಿಕಾರಿಗಳಲ್ಲಿ ಶೇ 36ರಷ್ಟು ಪುರುಷರೇ ಇದ್ದಾರೆ).

ಮುಂಬರುವ ದಿನಗಳಲ್ಲಿ ಮಹಿಳೆಯರ ಸಬಲೀಕರಣವನ್ನು ಗಮನದಲ್ಲಿ ಇಟ್ಟುಕೊಂಡು ಹಲವು ರೀತಿಯ ಯೋಜನೆಗಳನ್ನು ಪರಿಚಯಿಸಲಾಗುತ್ತದೆ. ಹಣ ಉಳಿತಾಯ, ಉದ್ಯಮ ಸ್ಥಾಪನೆ, ಉಪ ಕಸಬುಗಳು, ಶಿಕ್ಷಣ ಸೇರಿದಂತೆ ಅಗತ್ಯ ಸಾಲ ಯೋಜನೆಗಳನ್ನು ರೂಪಿಸಲಾಗುವುದು. ಮಹಿಳೆಯರಿಗೆ ಸಿಗುವ ಎಲ್ಲಾ ಯೋಜನೆಗಳೂ ಇಲ್ಲಿ ಖಾತೆ ತೆರೆಯುವ ಪುರುಷರಿಗೆ ಅನ್ವಯವಾಗುತ್ತವೆ ಎನ್ನಲಾಗದು ಎಂದು ನೂತನ ಮಹಿಳಾ ಬ್ಯಾಂಕ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.ಅದೇನೇ ಇರಲಿ, ಮಹಿಳಾ ಬ್ಯಾಂಕ್ ಇನ್ನೂ ಕೆಲವು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಿದೆ.

ಮಹಿಳೆಯರ ಆರ್ಥಿಕ ಸಬಲೀಕರಣ ಉದ್ದೇಶವನ್ನು ಇದು ಹೇಗೆ ಸಾಧಿಸುತ್ತದೆ? ಮಹಿಳೆಯರ ಖಾತೆಯಲ್ಲಿ ಪುರುಷರ ಹಸ್ತಕ್ಷೇಪ ಅಥವಾ ಅವರದೇ ನಿರ್ವಹಣೆಯ ಅಪಾಯವನ್ನು ಹೇಗೆ ವ್ಯಾಖ್ಯಾನಿಸುತ್ತದೆ? ಅಲೆದಾಟವಿಲ್ಲದ ಹಾಗೂ ಜಾಮೀನು ರಹಿತ ಸಾಲ ಸೌಲಭ್ಯವನ್ನು ಈ ಬ್ಯಾಂಕ್‌ ಒದಗಿಸುತ್ತದೆಯೇ? ಹಾಗೆ ಒದಗಿಸುವುದೇ ಆದಲ್ಲಿ, ಸಾಲ ಮರು ಪಾವತಿ ಅಥವಾ ವಸೂಲಿ ಬಗೆ ಹೇಗೆ? ಬ್ಯಾಂಕ್ ಸೇವೆಗಳಿಂದ ದೂರ ಉಳಿದಿರುವ ಗ್ರಾಮೀಣ ಮಹಿಳೆಯರನ್ನು ತಲುಪಲು ಮಹಿಳಾ ಬ್ಯಾಂಕಿಗೆ ಎಷ್ಟು ಕಾಲಾವಕಾಶ ಬೇಕು? ಅದಕ್ಕಾಗಿ ಯಾವ ರೀತಿಯ ತಯಾರಿ ನಡೆದಿದೆ... ಈ ಪ್ರಶ್ನೆಗಳಿಗೆ ಮುಂದಿನ ದಿನಗಳಲ್ಲಿ ಉತ್ತರ ದೊರೆಯಬಹುದು.

ರೂ.60000 ಕೋಟಿ ವಹಿವಾಟು ಗುರಿ

‘ಮಹಿಳೆಯರ ಸಬಲೀಕ ರಣ; ಆ ಮೂಲಕ ಭಾರತ ವನ್ನು ಇನ್ನಷ್ಟು ಬಲಿಷ್ಠಗೊಳಿ ಸುವುದು’ ಎಂಬ ಮಹತ್ವದ ಉದ್ದೇಶದೊಂದಿಗೆ ಕೇಂದ್ರ ಸರ್ಕಾರ ಆರಂಭಿಸಿದ ಭಾರತೀಯ ಮಹಿಳಾ ಬ್ಯಾಂಕ್‌(ಬಿಎಂಬಿ) ಬಗ್ಗೆ ಭಾರಿ ನಿರೀಕ್ಷೆಗಳಿವೆ. ಮುಂಬೈನಲ್ಲಿ ನಾರಿಮನ್‌ ಪಾಯಿಂಟ್‌ನಲ್ಲಿ ಪ್ರಧಾನ ಕಚೇರಿ ಹೊಂದಿರುವ ‘ಬಿಎಂಬಿ’ಯತ್ತ ವನಿತಾ ಸಮೂಹವೂ ಕುತೂಹ ಲದ ಕಣ್ಣು ನೆಟ್ಟಿದೆ.‘ಬಿಎಂಬಿ’ ಮೊದಲ ಅಧ್ಯಕ್ಷೆ ಯಾಗಿ ಅಧಿಕಾರ ವಹಿಸಿಕೊಂಡಿರುವ ಉಷಾ ಅನಂತಸುಬ್ರಮ­ಣಿಯನ್‌ ಅವರೂ ಬಹಳ ಉತ್ಸಾಹದಲ್ಲಿಯೇ ಇದ್ದಾರೆ.

‘ಈಗಷ್ಟೇ ಮೊದಲ ಅಡಿ ಇಟ್ಟಿದ್ದೇವೆ. ಸಾಗಬೇಕಾದ ಹಾದಿ ದೀರ್ಘವಾಗಿದೆ. ಏನೇ ಇದ್ದರೂ ಮುಂದಿನ ಏಳು ವರ್ಷಗಳಲ್ಲಿ ಠೇವಣಿ ಮತ್ತು ಸಾಲ ವಿತರಣೆ ಸೇರಿದಂತೆ ಒಟ್ಟಾರೆ ವಹಿವಾಟನ್ನು ರೂ.60,000 ಕೋಟಿಗೆ ಮುಟ್ಟಿಸುವ ವಿಶ್ವಾಸವಿದೆ’ ಎಂದಿದ್ದಾರೆ.

ಉದ್ದೇಶ ಸಾಧಿಸಲಿ’

ADVERTISEMENT

ಬಹಳ ದಿನಗಳಿಂದ ಇಂಥದ್ದೊಂದು ಬ್ಯಾಂಕಿನ ನಿರೀಕ್ಷೆ ಇತ್ತು. ಅದೀಗ ಸಾಕಾರಗೊಂಡಿದೆ. ಆದರೆ ಕೇಂದ್ರ ಸರ್ಕಾರದ ಉದ್ದೇಶ ಸೂಕ್ತ ರೀತಿಯಲ್ಲಿ ಈಡೇರಬೇಕಷ್ಟೆ.

ಇತರ ಬ್ಯಾಂಕುಗಳಲ್ಲಿ ಕಿರಿಕಿರಿ ಎನಿಸುವ ಕೆಲವು ಸಂಗತಿಗಳತ್ತ ಈ ಬ್ಯಾಂಕ್ ಗಮನ ಹರಿಸಬೇಕು. ಗ್ರಾಹಕರಿಗೆ ಯಾವುದೇ ಅಡೆ–ತಡೆ ಇಲ್ಲದೇ ಅಗತ್ಯ ಮಾಹಿತಿ ಸಿಗಬೇಕು. ಸಾಲದ ವಿಚಾರ ಬಂದಾಗ ಅನಗತ್ಯ ತಿರುಗಾಟದ ತೊಂದರೆಯನ್ನು ತಪ್ಪಿಸಬೇಕು.

ಮುಖ್ಯವಾಗಿ ಈ ಬ್ಯಾಂಕ್ ಗ್ರಾಮಾಂತರ ಪ್ರದೇಶವನ್ನೂ ತಲುಪುವತ್ತ ಗಮನ ಹರಿಸಬೇಕು. ಈ ಶತಮಾನದಲ್ಲಿಯೂ ಜೀರಿಗೆ ಡಬ್ಬಿಯಲ್ಲಿಯೇ ಹಣ ಕೂಡಿಡುವ ಗ್ರಾಮೀಣ ಮಹಿಳೆಯರ ಉಳಿತಾಯವನ್ನು ಬ್ಯಾಂಕಿಗೆ ತರಬೇಕು ಮತ್ತು ಅದರ ಲಾಭವನ್ನು ಅವರಿಗೆ ಮನದಟ್ಟು ಮಾಡಬೇಕು. ಇನ್ನು ಸ್ತ್ರೀ ಶಕ್ತಿ ಗುಂಪುಗಳು ಇತರ ಬ್ಯಾಂಕುಗಳಲ್ಲಿ ಕೋಟ್ಯಂತರ ರೂಪಾಯಿ ಉಳಿತಾಯ ಮಾಡುತ್ತವೆ. ಅದೆಲ್ಲವೂ ಈ ಮಹಿಳಾ ಬ್ಯಾಂಕಿಗೆ ವರ್ಗಾವಣೆ ಆಗುವಂತೆ ಮತ್ತು ಅದರ ಲಾಭಾಂಶವೂ ಅವರಿಗೇ ಸೇರುವಂತೆ ಕ್ರಮ ಕೈಗೊಳ್ಳಬೇಕು.
-ಸರೋಜಿನಿ ಭಾರದ್ವಾಜ, ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷೆ

‘ಇಂಥದ್ದೊಂದು ಬ್ಯಾಂಕ್ ಬೇಕೇ ಇರಲಿಲ್ಲ’!
‘ಮಹಿಳೆಯರನ್ನು ಅಸ್ಪೃಶ್ಯರಂತೆ ಕಾಣುವ ವಿದ್ಯಮಾನವನ್ನು ನಾವು ಉತ್ತೇಜಿಸಬಾರದು. ಮಹಿಳೆಯರಿಗಾ ಗಿಯೇ ಪ್ರತ್ಯೇಕ ಬ್ಯಾಂಕ್‌ ಆರಂಭಿಸುವ ಉದ್ದೇಶವಾದರೂ ಏನು? ಪುರುಷರ ನಡುವೆ ನಿಂತು ನಾವು ಬ್ಯಾಂಕ್ ವ್ಯವಹಾರಗಳನ್ನು ನಡೆಸಲು ಅಸಮರ್ಥರೇ?  ಅಷ್ಟಕ್ಕೂ ಬಹುತೇಕ ಎಲ್ಲಾ ಬ್ಯಾಂಕುಗಳೂ ಮಹಿಳಾ ಶಾಖೆಗಳನ್ನು ನಿರ್ವಹಿಸುತ್ತಿವೆ. ರಾಜ್ಯದಲ್ಲಿ ಸುಮಾರು 27 ಸಹಕಾರಿ (ಕೋ–ಆಪರೇಟಿವ್) ಬ್ಯಾಂಕುಗಳಿವೆ. ಅವುಗಳಿಗೆ ಹೆಚ್ಚಿನ ಉತ್ತೇಜನ ಕೊಟ್ಟು ಸಹಕಾರ ನೀಡಿದ್ದರೆ ಈ ಹೆಚ್ಚುವರಿ ಖರ್ಚುಗಳನ್ನು (ಕಟ್ಟಡ ನಿರ್ಮಾಣ ವೆಚ್ಚ, ಹೊಸ ಶಾಖೆಗಳ ನಿರ್ವಹಣಾ ವೆಚ್ಚ, ಅನಗತ್ಯ ಸಿಬ್ಬಂದಿಯ ನೇಮಕ ಅಥವಾ ವರ್ಗಾವಣೆ ವೆಚ್ಚ ಇತ್ಯಾದಿ) ತಡೆಯಬಹುದಿತ್ತು. ಅದನ್ನು ಬಿಟ್ಟು ಪ್ರತ್ಯೇಕ ಬ್ಯಾಂಕ್ ಎಂಬ ಬೆಣ್ಣೆ ಹಚ್ಚಿ ನಮ್ಮದೇ ದುಡ್ಡನ್ನು ಹೀಗೆ ಪೋಲು ಮಾಡಿರುವುದು ನಮಗಂತೂ ಸಮಾಧಾನ ತಂದಿಲ್ಲ. 

ಅಷ್ಟಕ್ಕೂ ಇದರಲ್ಲಿ ವಿಶೇಷತೆ ಎನ್ನುವಂಥದ್ದೇನೂ ಇಲ್ಲ. ಮೆಟ್ರೊ ನಗರಗಳಲ್ಲಿ ರಸ್ತೆಗೆ ನಾಲ್ಕರಂತೆ ರಾಷ್ಟ್ರೀಕೃತ ಬ್ಯಾಂಕುಗಳು ಕಾರ್ಯನಿರ್ವಹಿಸುತ್ತಿವೆ. ಅವೆಲ್ಲವುಗಳೊಂದಿಗೆ ಸ್ಪರ್ಧೆಗಳಿದ ಒಂದು ಬ್ಯಾಂಕ್ ಅಷ್ಟೆ. ಯಾವುದೇ ಬ್ಯಾಂಕ್‌ ತಲುಪದ ಗ್ರಾಮೀಣ ಪ್ರದೇಶಗಳಲ್ಲಿ ಹೆಜ್ಜೆ ಇಟ್ಟಿದ್ದರೆ ಅದೊಂದು ಹೊಸ ಪ್ರಯತ್ನ ಅನ್ನಬಹುದಾಗಿತ್ತು. ಇನ್ನು ಸಬ್ಸಿಡಿ ಬಗ್ಗೆ ಮಾತನಾಡುವುದಾದರೆ, ಅವರು ಸಬ್ಸಿಡಿ ನೀಡುವುದಾದರೂ ನಮ್ಮದೇ ಹಣದಿಂದ ತಾನೆ? ನಮ್ಮದೇ ಹಣದಿಂದ ನಮಗೇ ಸಬ್ಸಿಡಿ ನೀಡಿ ನಮ್ಮನ್ನು ಸೋಂಬೇರಿಗಳನ್ನಾಗಿ ಮಾಡುವ ಅಗತ್ಯವೇನಿತ್ತು?
ಒಟ್ಟಾರೆಯಾಗಿ ಹೇಳುವುದಾದರೆ ನಮಗೆ ಈ ಬ್ಯಾಂಕ್ ಅಗತ್ಯವೇ ಇರಲಿಲ್ಲ.
ಪದ್ಮಾ ಶೇಷಾದ್ರಿ, ‘ಅವೇಕ್’ ಸಂಸ್ಥೆ ಮಾಜಿ ಅಧ್ಯಕ್ಷೆ

ಬೆಂಗಳೂರು ಶಾಖೆ
-ಬೆಂಗಳೂರಿನ ಹಡ್ಸನ್‌ ವೃತ್ತ ಸಮೀಪ ಬ್ಯಾಂಕ್‌ ಬೆಂಗಳೂರು ಶಾಖೆ
-ಪ್ರಸ್ತುತ ಏಳು ಸಿಬ್ಬಂದಿ. ಆರು ತಿಂಗಳ  ಪರಿಶೀಲನೆ ನಂತರ ಸಿಬ್ಬಂದಿ ಹೆಚ್ಚಳ
-ಶೇ 80ರಷ್ಟು ಖಾತೆ ಮಹಿಳೆಯರಿಗೇ ಮೀಸಲು, ಶೇ 80ರಷ್ಟು ಸಿಬ್ಬಂದಿ ಮಹಿಳೆಯರೆ
-ಖಾತೆ ತೆರೆಯಲು ಪುರುಷರಿಗೂ ಅವಕಾಶ, ಬ್ಯಾಂಕಿನಲ್ಲಿ ಬೆರಳೆಣಿಕೆ ಪುರುಷ ಸಿಬ್ಬಂದಿ

‘ಬಿಎಂಬಿ’ ನಿರ್ದೇಶಕ ಮಂಡಳಿ
-ಉಷಾ ಸುಬ್ರಮಣಿಯನ್‌
-ಛಾವಿ ರಾಜಾವತ್‌, ಬಿಜಿನೆಸ್‌ ವಿಷಯದಲ್ಲಿ  ಪದವೀಧರೆ, ರಾಜಸ್ತಾನದ ಸರಪಂಚ್‌
-ಕಲ್ಪನಾ ಸರೋಜ್‌, ಉದ್ಯಮಿ
-ನೂಪುರ್‌ ಮಿತ್ರಾ, ನಿವೃತ್ತ ಬ್ಯಾಂಕ್‌ ಉದ್ಯೋಗಿ
- ಪಾಕಿಝಾ ಸಮದ್‌, ಶಿಕ್ಷಣತಜ್ಞೆ
-ರೇಣುಕಾ ರಾಮನಾಥ್‌, ಹೂಡಿಕೆ ತಜ್ಞೆ
-ತಾನಿಯಾ ದುಬಾಷ್‌, ಗೋದ್ರೇಜ್‌    ಸಮೂಹದ ಕಾರ್ಯನಿರ್ವಾಹಕ ನಿರ್ದೇಶಕಿ
- ಪ್ರಿಯಾ ಕುಮಾರ್‌, ಸರ್ಕಾರದಿಂದ ನಾಮ ನಿರ್ದೇಶನ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.