ADVERTISEMENT

ಎಂಎಫ್‌ಐ: ಶೇ 24ರಷ್ಟು ಬಡ್ಡಿ ದರ ಮಿತಿ

​ಪ್ರಜಾವಾಣಿ ವಾರ್ತೆ
Published 20 ಜನವರಿ 2011, 19:30 IST
Last Updated 20 ಜನವರಿ 2011, 19:30 IST

ಮುಂಬೈ (ಪಿಟಿಐ): ಬಿಕ್ಕಟ್ಟಿನ ಸುಳಿಯಲ್ಲಿ ಸಿಲುಕಿರುವ ಕಿರು ಹಣಕಾಸು ವಲಯಕ್ಕೆ ಪುನಶ್ಚೇತನ ನೀಡಲು ಭಾರತೀಯ ರಿಸರ್ವ್ ಬ್ಯಾಂಕ್ ನೇಮಿಸಿದ್ದ ಉಪ ಸಮಿತಿಯು,ಸಣ್ಣ ಮೊತ್ತದ ಸಾಲಗಳ ಮೇಲೆ ಗರಿಷ್ಠ ಶೇ 24ರಷ್ಟು ಬಡ್ಡಿ ವಿಧಿಸಲು ಮತ್ತು ಇಂತಹ ಸಾಲದ ಪ್ರಮಾಣದ ಮೇಲೆ ರೂ 25 ಸಾವಿರದ ಗರಿಷ್ಠ ಮಿತಿ ವಿಧಿಸಲು ಶಿಫಾರಸು ಮಾಡಿದೆ.

ಆರ್‌ಬಿಐನ ಕೇಂದ್ರೀಯ ಮಂಡಳಿಯ ನಿರ್ದೇಶಕ ವೈ.ಎಚ್.ಮಾಲೆಗಂ ನೇತೃತ್ವದ ಸಮಿತಿಯು, ದುಬಾರಿ ಬಡ್ಡಿ ದರ ಮತ್ತು ಸಾಲ ವಸೂಲಾತಿಗೆ ಬೆದರಿಕೆ ತಂತ್ರ ಅನುಸರಿಸಿ ತೀವ್ರ ಟೀಕೆಗೆ ಗುರಿಯಾಗಿದ್ದ ಕಿರು ಹಣಕಾಸು ವ್ಯವಸ್ಥೆಯ ಒಟ್ಟಾರೆ ಸ್ವರೂಪ ಸರಳಗೊಳಿಸಲು ಹಲವಾರು ಸಲಹೆಗಳನ್ನು ನೀಡಿದೆ. ಕಿರು ಹಣಕಾಸು ಸಂಸ್ಥೆಗಳಿಗಾಗಿಯೇ ಪ್ರತ್ಯೇಕ ಬ್ಯಾಂಕೇತರ ಹಣಕಾಸು ಕಂಪನಿ ರಚಿಸುವ ಸಲಹೆಯನ್ನೂ ನೀಡಿದೆ.

ಶಿಫಾರಸುಗಳು: ಶೇ 24ರಷ್ಟು ಗರಿಷ್ಠ ಬಡ್ಡಿ ದರ ಮಿತಿ. ವ್ಯಕ್ತಿಗಳಿಗೆ ಮಂಜೂರು ಮಾಡುವ ಸಾಲದ ಗರಿಷ್ಠ ಮಿತಿ  ರೂ 25 ಸಾವಿರ. ಸಾಲಗಾರರ ಕುಟುಂಬದ ಆದಾಯ ರೂ 50 ಸಾವಿರಕ್ಕಿಂತ ಕಡಿಮೆ ಇರಬೇಕು. 

ಸಾಲಗಾರರ ಅನುಕೂಲಕ್ಕೆ ತಕ್ಕಂತೆ ಸಾಲ ಮರುಪಾವತಿಯು ವಾರ, ಹದಿನೈದು ದಿನ, ಮಾಸಿಕ ಕಂತಿನಲ್ಲಿ ಇರಬೇಕು.ಸಾಲದ ಶೇ 75ರಷ್ಟು ಮೊತ್ತ ವರಮಾನ ಹೆಚ್ಚಳಕ್ಕೆ ಬಳಕೆಯಾಗಬೇಕು. ಬ್ಯಾಂಕ್‌ಗಳು ಆದ್ಯತಾ ವಲಯದ ಸಾಲ ಸೌಲಭ್ಯವನ್ನು ‘ಎಂಎಫ್‌ಐ’ಗಳಿಗೆ  ಮುಂದುವರೆಸಬೇಕು.ಸಾಲದ ಪ್ರಮಾಣವೂ ಹೆಚ್ಚಬೇಕು. ಏಪ್ರಿಲ್ 1ರಿಂದ ಈ ಶಿಫಾರಸುಗಳು ಜಾರಿಗೆ ಬರಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.