ADVERTISEMENT

`ಎನ್‌ಎಂಪಿಟಿ' ಲಾಭ ರೂ.138 ಕೋಟಿ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2013, 19:59 IST
Last Updated 4 ಏಪ್ರಿಲ್ 2013, 19:59 IST
`ಎನ್‌ಎಂಪಿಟಿ' ಲಾಭ ರೂ.138 ಕೋಟಿ
`ಎನ್‌ಎಂಪಿಟಿ' ಲಾಭ ರೂ.138 ಕೋಟಿ   

ಮಂಗಳೂರು: ನವ ಮಂಗಳೂರು ಬಂದರು (ಎನ್‌ಎಂಪಿಟಿ) 2012-13ನೇ ಸಾಲಿನಲ್ಲಿ 370 ಲಕ್ಷ ಟನ್ ಸರಕು ನಿರ್ವಹಿಸಿ ಶೇ 12.43ರಷ್ಟು ಹೆಚ್ಚಿನ ಸಾಧನೆ ಮಾಡಿದೆ. ರೂ.400 ಕೋಟಿ ವಹಿವಾಟು ನಡೆಸಿ ರೂ.138 ಕೋಟಿ ಲಾಭ ಗಳಿಸಿದೆ.

ಕಬ್ಬಿಣದ ಅದಿರು ಸಾಗಣೆ ಸ್ಥಗಿತಗೊಂಡ ಬಳಿಕ ಬಂದರು ಚಟುವಟಿಕೆ ಕುಂಠಿತಗೊಳ್ಳಬಹುದು ಎಂಬ ಭೀತಿ ಎದುರಾಗಿತ್ತು. `ಎಂಆರ್‌ಪಿಎಲ್'ನಿಂದ ಹೆಚ್ಚಿನ ಕಚ್ಚಾತೈಲ ಆಮದು ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಸಾಗಣೆ ಹೆಚ್ಚಿದ್ದು, ರೈಲು ಸರಕು ಸೇವೆ, ಕಲ್ಲಿದ್ದಲು, ಮೆಕ್ಕೆಜೋಳ, ಕಂಟೇನರ್ ರವಾನೆಯಲ್ಲಿ ಹೆಚ್ಚಳವಾಗಿದ್ದರಿಂದ ಈ ಬಾರಿಯೂ ಅಧಿಕ ಸರಕು ನಿರ್ವಹಣೆ ಸಾಧ್ಯವಾಗಿದೆ. ದೇಶದ ಇತರೆ ಪ್ರಮುಖ ಬಂದರುಗಳಿಗೆ ಹೋಲಿಸಿದರೆ `ಎನ್‌ಎಂಪಿಟಿ' ಸಾಧನೆ ಉತ್ತಮವಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಪಿ.ತಮಿಳ್‌ವಾಣನ್ ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಬಂದರು ಪ್ರದೇಶದ ರೂ.820 ಕೋಟಿ ಮೌಲ್ಯದ ಸ್ವತ್ತುಗಳನ್ನು ವಿಮೆಗೆ ಅಳವಡಿಸಲು ಆರಂಭಿಕ ಹಂತದಲ್ಲಿ ರೂ.10 ಕೋಟಿ ತೆಗೆದಿರಿಸಲಾಗಿದೆ. ರೂ.79 ಕೋಟಿ ವೆಚ್ಚದಲ್ಲಿ 14 ಮೀಟರ್ ಆಳದ 17ನೇ ಧಕ್ಕೆ ನಿರ್ಮಿಸಲಾಗುತ್ತಿದೆ. ಸಾಮಾನ್ಯ ಸರಕು, ಕಂಟೇನರ್ ನಿರ್ವಹಣೆಗಾಗಿ 18ನೇ ಧಕ್ಕೆ ನಿರ್ಮಾಣಕ್ಕೆ ನೌಕಾಯಾನ ಸಚಿವಾಲಯ ಒಪ್ಪಿಗೆ ನೀಡಿದೆ. ಅಂಬುಜಾ ಸಿಮೆಂಟ್ ಕಂಪೆನಿ ರೂ.95 ಕೋಟಿ ವೆಚ್ಚದಲ್ಲಿ ಸಗಟು ಸಿಮೆಂಟ್ ಟರ್ಮಿನಲ್ ನಿರ್ಮಿಸುತ್ತಿದೆ. ರೂ.88.75 ಕೋಟಿ ವೆಚ್ಚದಲ್ಲಿ ಬಂದರು ರಸ್ತೆ ಕಾಂಕ್ರಿಟೀಕರಣ ಮತ್ತು 2 ದಾಸ್ತಾನು ಮಳಿಗೆ ನಿರ್ಮಿಸಲಾಗಿದೆ ಎಂದು ವಿವರಿಸಿದರು.

ಬಂದರು ಆಧರಿತ ವಿಶೇಷ ಆರ್ಥಿಕ ವಲಯ ಸ್ಥಾಪನೆ, ಎಲ್‌ಎನ್‌ಜಿ ಟರ್ಮಿನಲ್ ನಿರ್ಮಾಣ ಯೋಜನೆ ಇದೆ ಎಂದ ಅವರು, 1 ಲಕ್ಷ ಟನ್ ಸರಕು ಹೊತ್ತ ಹಡಗುಗಳು ಧಕ್ಕೆಯೊಳಕ್ಕೆ ಬಂದು ತ್ವರಿತವಾಗಿ ಸಾಮಗ್ರಿ ಇಳಿಸುವ ವ್ಯವಸ್ಥೆ ಇಲ್ಲಿದ್ದು, ದೇಶದ ಅಭಿವೃದ್ಧಿಗೆ ದೊಡ್ಡ ಕೊಡುಗೆ ನೀಡಲಿದೆ ಎಂದರು.

ಕರಾಚಿಗೆ ನೌಕಾಯಾನ
ಮಂಗಳೂರಿನಿಂದ ಕರಾಚಿಗೆ ಜನರನ್ನು ಕರೆದೊಯ್ಯುವ, ಸರಕು ಸಾಗಿಸುವ ನೌಕಾಯಾನ ಆರಂಭಿಸಲು ಖಾಸಗಿ ಸಂಸ್ಥೆ ಮುಂದೆ ಬಂದಿದೆ. ಇದರಿಂದ ಸರಕು ಸಾಗಣೆ ಕ್ಷೇತ್ರಕ್ಕೆ ಮಹತ್ವದ ಉತ್ತೇಜನ ದೊರಕಲಿದೆ. ಇದು ಸೂಕ್ಷ್ಮ ಕ್ಷೇತ್ರವಾಗಿದ್ದು, ವಲಸೆ ನಿಯಮ ಕಟ್ಟುನಿಟ್ಟು ಪಾಲನೆ, ಭದ್ರತಾ ಕ್ರಮಗಳನ್ನು ಇನ್ನಷ್ಟು ಬಿಗಿಗೊಳಿಸುವುದು ಅಗತ್ಯ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.