ADVERTISEMENT

ಎನ್‌ಪಿಎ: ಚಿದಂಬರಂ ಚಾಟಿ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2013, 19:30 IST
Last Updated 15 ಡಿಸೆಂಬರ್ 2013, 19:30 IST

ಮುಂಬೈ(ಪಿಟಿಐ): ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳ ವಸೂಲಾಗದ ಸಾಲದ ಪ್ರಮಾಣ (ಎನ್‌ಪಿಎ) ಹೆಚ್ಚುತ್ತಲೇ ಇರುವುದಕ್ಕೆ ಮತ್ತೊಮ್ಮೆ ಎಚ್ಚರಿಕೆ ನೀಡಿರುವ ಕೇಂದ್ರ ಹಣಕಾಸು ಸಚಿವ ಪಿ. ಚಿದಂಬರಂ, ‘ಎನ್‌ಪಿಎ’ ಹೆಚ್ಚುತ್ತಿರು­ವುದಕ್ಕೆ ಬ್ಯಾಂಕುಗಳೇ ಕಾರಣ. ಬ್ಯಾಂಕು ಗಳ ನಿರ್ದೇಶಕ ಮಂಡಳಿಯೇ ಇದರ ಹೊಣೆ ಹೊರಬೇಕು. ಸರ್ಕಾರ ಇದಕ್ಕೆ ಜವಾಬ್ದಾರಿಯಾಗದು ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

‘ಬ್ಯಾಂಕಿನ ನಿರ್ದೇಶಕ ಮಂಡಳಿ ತಮ್ಮ ಕೆಲಸವನ್ನು ಸರಿಯಾಗಿ ಮಾಡದಿದ್ದರೆ ‘ಎನ್‌ಪಿಎ’ ಹೆಚ್ಚುತ್ತದೆ. ಸಾಲ ವಸೂಲಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಬ್ಯಾಂಕು­ಗಳಿಗೆ ಈಗಾಗಲೇ ಸೂಚಿಸ­ಲಾಗಿದೆ. ಸರ್ಕಾರಿ ಸ್ವಾಮ್ಯದ ಪ್ರತಿ ಬ್ಯಾಂಕುಗಳಿಗೆ ಸರ್ಕಾರ ನಿರ್ದೇಶಕ­ರೊಬ್ಬರನ್ನು ನೇಮಿ­ಸಿದೆ. ಅಲ್ಲದೆ, ಸ್ವತಂತ್ರ ನಿರ್ದೇಶಕರು, ಪೂರ್ಣಾ­ವಧಿ ನಿರ್ದೇಶಕರು, ಅಧ್ಯಕ್ಷರು, ವ್ಯವಸ್ಥಾಪಕ ನಿರ್ದೇಶಕರೂ ಇದ್ದಾರೆ. ‘ಎನ್‌ಪಿಎ’ ಹೆಚ್ಚಿದರೆ ಇವರೆಲ್ಲರೂ ಹೊಣೆಗಾರರು. ಬದಲಿಗೆ ತಮ್ಮ ಜವಾ­ಬ್ದಾರಿ­ಯಿಂದ ನುಣು­ಚಿ­ಕೊಂಡು ಸರ್ಕಾ ರವನ್ನು ಟೀಕಿಸುವುದು ಸರಿಯಲ್ಲ’ ಎಂದು ಅವರು ಇಲ್ಲಿ  ನಡೆದ ರಾಷ್ಟ್ರಿಯ ಷೇರು ವಿನಿಮಯ ಕೇಂದ್ರದ (ಎನ್‌ಎಸ್‌ ಇ) 20ನೇ ವಾರ್ಷಿಕ ಸಭೆಯಲ್ಲಿ ಹೇಳಿದರು.

‘ನನ್ನ ಅಧಿಕಾರ ಅವಧಿಯಲ್ಲಿ ಹಣಕಾಸು ಸಚಿವಾಲಯ ಈ­ವರೆಗೂ ಬ್ಯಾಂಕುಗಳ ವಹಿವಾಟಿನಲ್ಲಿ ಹಸ್ತಕ್ಷೇಪ ಮಾಡಿಲ್ಲ. ಈಗ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳ ಒಟ್ಟಾರೆ ‘ಎನ್‌ಪಿಎ’  ಶೇ 4ರ ಗಡಿ ದಾಟಿದೆ. ಯುನೈಟೆಡ್‌ ಬ್ಯಾಂಕ್‌ ಆಫ್‌ ಇಂಡಿಯಾ ಶೇ 7 ಮತ್ತು ‘ಎಸ್‌ಬಿಐ’ ಶೇ 5ರ ಗಡಿ ದಾಟಿವೆ. ಇದು ಅತ್ಯಂತ ಅಪಾಯಕರ ಮಟ್ಟ. ಈ ರೀತಿ ಎನ್‌ಪಿಎ’ ಹೆಚ್ಚುತ್ತಿರು­ವುದಕ್ಕೆ ಬ್ಯಾಂಕು ಗಳು ಸಾಲ ವಸೂಲಿಗೆ ಅನುಸರಿಸುತ್ತಿ ರುವ ಮೃದುವಾದ ನೀತಿಯೇ ಕಾರಣ. ಇದನ್ನು ಕೈಬಿಟ್ಟು ಸಾಲ ವಸೂಲಿಗೆ ಕಠಿಣ ಕ್ರಮ ಕೈಗೊಳ್ಳುವಂತೆ ಸರ್ಕಾರ ಮತ್ತು ‘ಆರ್‌ಬಿಐ’ ಈಗಾಗಲೇ ಸೂಚನೆ ನೀಡಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.