ADVERTISEMENT

ಎಲೆಕ್ಟ್ರಾನಿಕ್ಸ್ ಉದ್ಯಮ ಹೂಡಿಕೆ ಗುರಿ ವಿಸ್ತರಣೆ

500 ಕೋಟಿ ಡಾಲರ್‌ಗೆ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 11 ಜೂನ್ 2013, 19:59 IST
Last Updated 11 ಜೂನ್ 2013, 19:59 IST

ನವದೆಹಲಿ(ಪಿಟಿಐ): ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದ ಎಲೆಕ್ಟ್ರಾನಿಕ್ಸ್ ಉದ್ಯಮ ವಲಯದಲ್ಲಿನ ಹೂಡಿಕೆ ಪ್ರಮಾಣದ ಗುರಿಯನ್ನು ಕೇಂದ್ರ ಸರ್ಕಾರ 500 ಕೋಟಿ ಅಮೆರಿಕನ್ ಡಾಲರ್(ಈಗಿನ ಲೆಕ್ಕದಲ್ಲಿ ರೂ.28,500 ಕೋಟಿ)ಗೆ ಹೆಚ್ಚಿಸಿದೆ ಎಂದು ಕೇಂದ್ರದ ಮಾಹಿತಿ ತಂತ್ರಜ್ಞಾನ ಇಲಾಖೆ(ಡಿಇಐಟಿವೈ) ಹೇಳಿದೆ.

ಈ ಬಾರಿ ಎಲೆಕ್ಟ್ರಾನಿಕ್ಸ್ ಉದ್ಯಮ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆಗೆ ಸಂಬಂಧಿಸಿ 100 ಕೋಟಿ ಡಾಲರ್‌ಗಳಷ್ಟು ಹೆಚ್ಚುವರಿ ಮೊತ್ತದ ಪ್ರಸ್ತಾವನೆ ಸ್ವೀಕರಿಸಿದ್ದೇವೆ. ಹಾಗಾಗಿ ಮಹತ್ವದ ಈ ಉದ್ಯಮ ವಲಯಕ್ಕೆ ನಿಗದಿಪಡಿಸಿದ್ದ ಹೂಡಿಕೆ ಗುರಿಯನ್ನು 500 ಕೋಟಿ ಡಾಲರ್‌ಗಳಿಗೆ ವಿಸ್ತರಿಸಲಾಗಿದೆ ಎಂದು `ಡಿಇಐಟಿವೈ' ಕಾರ್ಯದರ್ಶಿ ಜೆ.ಸತ್ಯನಾರಾಯಣ ಹೇಳಿದರು.

ಇಲ್ಲಿ ಮಂಗಳವಾರ ಭಾರತೀಯ ವಾಣಿಜ್ಯ ಸಂಘಟನೆ(ಐಸಿಸಿ) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ  ಅವರು, ದೇಶದಲ್ಲಿನ ಎಲೆಕ್ಟ್ರಾನಿಕ್ಸ್ ಹಾರ್ಡ್‌ವೇರ್ ಪರಿಕರಗಳ ಬೇಡಿಕೆ 2020ರ ವೇಳೆಗೆ 400 ಕೋಟಿ ಡಾಲರ್ ಪ್ರಮಾಣಕ್ಕೆ ಬೆಳವಣಿಗೆ ಕಾಣುವ ನಿರೀಕ್ಷೆ ಇದೆ. ಇದು ದೇಶದ ಎಲೆಕ್ಟ್ರಾನಿಕ್ಸ್ ಸಿಸ್ಟೆಂಗಳ ವಿನ್ಯಾಸ ಮತ್ತು ತಯಾರಿಕೆ ಉದ್ಯಮ ಕ್ಷೇತ್ರಕ್ಕೆ(ಇಎಸ್‌ಡಿಎಂ) ಅವಕಾಶಗಳ ಮಹಾಪೂರವನ್ನೇ ಸೃಷ್ಟಿ ಮಾಡಿಕೊಡಲಿದೆ ಎಂದರು.

ದೇಶದಲ್ಲಿ ಒಟ್ಟು 10 `ಎಲೆಕ್ಟ್ರಾನಿಕ್ಸ್ ಪರಿಕರ ತಯಾರಿಕಾ ಉದ್ಯಮ ವಲಯ' (ಇಎಂಸಿ) ಸ್ಥಾಪಿಸುವ ಗುರಿ ಇದೆ. ಆಂಧ್ರಪ್ರದೇಶದ ಹೈದರಾಬಾದ್‌ನಲ್ಲಿ ಎರಡು ಮತ್ತು ವಿಶಾಖಪಟ್ಟಣದಲ್ಲಿ ಒಂದು ಹಾಗೂ ತಮಿಳುನಾಡಿನ ಹೊಸೂರಿನಲ್ಲಿ ಒಂದು ಸೇರಿದಂತೆ ಒಟ್ಟು 6 `ಇಎಂಸಿ' ಯೋಜನೆಗಳು ಅನುಷ್ಠಾನಕ್ಕೆ ಸಿದ್ಧವಾಗಿದ್ದು, ಅನುಮತಿ ನಿರೀಕ್ಷೆಯಲ್ಲಿವೆ ಎಂದು ವಿವರಿಸಿದರು.

ಬೆಂಗಳೂರು `ಐಟಿಐಆರ್'
ಬೆಂಗಳೂರಿನಲ್ಲಿ 10,000 ಎಕರೆಯಲ್ಲಿ `ಮಾಹಿತಿ ತಂತ್ರಜ್ಞಾನ ಉದ್ಯಮ ಹೂಡಿಕೆ ವಲಯ'(ಐಟಿಐಆರ್) ನೆಲೆಗೊಳ್ಳಲಿದ್ದು, ರೂ.6,500 ಕೋಟಿಯಷ್ಟು ದೊಡ್ಡ ಮೊತ್ತದ ಈ ಯೋಜನೆಗೆ ಕೇಂದ್ರ ಸಚಿವ ಸಂಪುಟದ ಅನುಮೋದನೆಯೂ ದೊರಕಿದೆ. ರಾಜ್ಯ ಸರ್ಕಾರ ಈಗಾಗಲೇ ಮೊದಲ ಹಂತದಲ್ಲಿ 2,072 ಎಕರೆ ಭೂಮಿಯನ್ನೂ ಗುರುತಿಸಿದೆ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.