ADVERTISEMENT

ಎಸ್‌ಎಂಇಗೆ ಅಂತರ್ಜಾಲ ನೆರವು: ಗೂಗಲ್ ಸಮೀಕ್ಷೆ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2011, 17:20 IST
Last Updated 17 ಫೆಬ್ರುವರಿ 2011, 17:20 IST

ಬೆಂಗಳೂರು: ದೇಶದಲ್ಲಿನ ಶೇ 57ರಷ್ಟು ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು (ಎಸ್‌ಎಂಇ), ತಮ್ಮ ಮಾರಾಟ ವಹಿವಾಟಿಗೆ ಇಂಟರ್‌ನೆಟ್ ಅನ್ನು ನೆಚ್ಚಿಕೊಂಡು  ಗರಿಷ್ಠ ಲಾಭ ಪಡೆಯುತ್ತಿರುವುದು ಗೂಗಲ್ ಇಂಡಿಯಾ ನಡೆಸಿದ ಸಮೀಕ್ಷೆಯಲ್ಲಿ ತಿಳಿದು ಬಂದಿದೆ.

‘ಎಸ್‌ಎಂಇ’ಗಳಿಗೆ ಇಂಟರ್‌ನೆಟ್ ಮಾಧ್ಯಮವು ಅದೆಷ್ಟು ಉಪಯುಕ್ತಕರವಾಗಿದೆ ಮತ್ತು ಈ ಉದ್ದಿಮೆಗಳು ಎಷ್ಟರಮಟ್ಟಿಗೆ ಈ  ಪ್ರಯೋಜನ ಪಡೆದುಕೊಂಡಿವೆ ಎನ್ನುವುದನ್ನು ತಿಳಿದುಕೊಳ್ಳಲು ಈ ಸಮೀಕ್ಷೆ ನಡೆಸಲಾಗಿತ್ತು. ದೇಶದಲ್ಲಿನ ಒಟ್ಟು 3.5 ಕೋಟಿಗಳಷ್ಟು ‘ಎಸ್‌ಎಂಇ’ಗಳ ಪೈಕಿ ಆನ್‌ಲೈನ್‌ನಲ್ಲಿ ಅಸ್ತಿತ್ವ ಹೊಂದಿರುವ ಉದ್ದಿಮೆಗಳ ಸಂಖ್ಯೆ ತೀರ ಕಡಿಮೆ ಇದೆ. ಆದರೆ, ವಹಿವಾಟು ಹೆಚ್ಚಳಕ್ಕೆ  ಇಂಟರ್‌ನೆಟ್ ಬಳಸಿಕೊಳ್ಳುವ ಪ್ರವೃತ್ತಿ ಹೆಚ್ಚುತ್ತಿರುವುದು ಕಂಡು ಬಂದಿದೆ ಎಂದು ಗೂಗಲ್ ಇಂಡಿಯಾದ ಅಂತರ್‌ಜಾಲ ಮಾರಾಟದ ಮುಖ್ಯಸ್ಥ ಶ್ರೀಧರ ಶೇಷಾದ್ರಿ, ಗುರುವಾರ ಇಲ್ಲಿ ಅಭಿಪ್ರಾಯಪಟ್ಟರು.

ಇಂಟರ್‌ನೆಟ್ ಅನ್ನು ಬಳಸುವ ಉದ್ದಿಮೆ ಸಂಸ್ಥೆಗಳಿಗೆ  ಆನ್‌ಲೈನ್ ಜಾಹೀರಾತಿನಿಂದ ಬರುವ ವರಮಾನವೂ ಹೆಚ್ಚುತ್ತಿದೆ. ಸಾಂಪ್ರದಾಯಿಕ ಮುದ್ರಣ ಮತ್ತು ಟೆಲಿವಿಷನ್ ಮಾಧ್ಯಮಗಳಿಗಿಂತ ಇಂಟರ್‌ನೆಟ್ ಮೂಲಕ ಕಡಿಮೆ ವೆಚ್ಚದಲ್ಲಿ ಜಾಹೀರಾತು ನೀಡಿ  ಹೆಚ್ಚು ಲಾಭ ಪಡೆಯುವುದು ‘ಎಸ್‌ಎಂಇ’ಗಳಿಗೆ  ಹೆಚ್ಚು ಪ್ರಯೋಜನಕಾರಿಯಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.