ನವದೆಹಲಿ (ಪಿಟಿಐ): ನೇರ ತೆರಿಗೆ ನೀತಿ ಸಂಹಿತೆ (ಡಿಟಿಸಿ) ಪರಿಶೀಲಿಸುತ್ತಿರುವ ಸಂಸತ್ತಿನ ಹಣಕಾಸು ಸ್ಥಾಯಿ ಸಮಿತಿಯು, ವಾರ್ಷಿಕ ಆದಾಯ ತೆರಿಗೆ ವಿನಾಯ್ತಿ ಮಿತಿಯನ್ನು ರೂ 3 ಲಕ್ಷ ಮತ್ತು ತೆರಿಗೆ ಉಳಿತಾಯ ಯೋಜನೆಗಳಿಗೆ ಸಂಬಂಧಿಸಿದ ಮಿತಿಯನ್ನು ರೂ 3.20 ಲಕ್ಷಕ್ಕೆ ಹೆಚ್ಚಿಸಲು ಅಂತಿಮವಾಗಿ ಶಿಫಾರಸು ಮಾಡಿದೆ.
ಸಮಿತಿಯು ತನ್ನ ವರದಿಯನ್ನು ಶುಕ್ರವಾರ ಲೋಕಸಭಾಧ್ಯಕ್ಷೆ ಮೀರಾ ಕುಮಾರ್ ಅವರಿಗೆ ಸಲ್ಲಿಸಿದ್ದು, ಸಂಪತ್ತು ತೆರಿಗೆ ಮಿತಿಯನ್ನು ರೂ 5 ಕೋಟಿಗಳಿಗೆ ಹೆಚ್ಚಿಸಲು ಮತ್ತು ಷೇರು ವಹಿವಾಟು ತೆರಿಗೆ (ಎಸ್‌ಟಿಟಿ) ರದ್ದುಪಡಿಸಲು ಸೂಚಿಸಿದೆ.
ಬಿಜೆಪಿ ಮುಖಂಡ ಯಶವಂತ ಸಿನ್ಹಾ ಅಧ್ಯಕ್ಷತೆಯಲ್ಲಿನ ಸಮಿತಿಯು ಕಂಪನಿ ತೆರಿಗೆಯನ್ನು ಶೇ 30ರ ಮಟ್ಟದಲ್ಲಿ ಉಳಿಸಿಕೊಳ್ಳಲು ಸಲಹೆ ನೀಡಿದೆ.
ಆದಾಯ ತೆರಿಗೆ ವಿನಾಯ್ತಿ ಮಿತಿಯನ್ನು ಸದ್ಯದ ರೂ 1.80 ಲಕ್ಷದಿಂದ ರೂ 3 ಲಕ್ಷಕ್ಕೆ ಹೆಚ್ಚಿಸಲು ಸಲಹೆ ನೀಡಿರುವ ಸಮಿತಿಯು, ಆದಾಯ ತೆರಿಗೆ ಹಂತಗಳಲ್ಲಿಯೂ ಸಾಕಷ್ಟು ಬದಲಾವಣೆ ಸೂಚಿಸಿದೆ.
ರೂ 3 ಲಕ್ಷದಿಂದ ರೂ 10 ಲಕ್ಷ ವರೆಗಿನ ಆದಾಯಕ್ಕೆ ಶೇ 10ರಷ್ಟು, ರೂ 10 ರಿಂದ ರೂ 20 ಲಕ್ಷ ಆದಾಯಕ್ಕೆ ಶೇ 20ರಷ್ಟು ಮತ್ತು ರೂ 20 ಲಕ್ಷದಿಂದ ಹೆಚ್ಚಿನ ಮೊತ್ತಕ್ಕೆ ಶೇ 30ರಷ್ಟು ತೆರಿಗೆ ವಿಧಿಸಬೇಕು ಎಂದು ಹೇಳಿದೆ.
ಸದ್ಯಕ್ಕೆ ರೂ 1.8ರಿಂದ ರೂ 5ಲಕ್ಷವರೆಗಿನ ಆದಾಯಕ್ಕೆ ಶೇ 10, ರೂ 5 ರಿಂದ ರೂ 8 ಲಕ್ಷಕ್ಕೆ ಶೇ 20 ಮತ್ತು ರೂ 8 ಲಕ್ಷಕ್ಕಿಂತ ಹೆಚ್ಚಿನ ಆದಾಯಕ್ಕೆ ಶೇ 30ರಷ್ಟು ತೆರಿಗೆ ವಿಧಿಸಲಾಗುತ್ತಿದೆ.
ತೆರಿಗೆ ಉಳಿತಾಯ ಯೋಜನೆಗಳಿಗೆ ಸಂಬಂಧಿಸಿದಂತೆ, ಭವಿಷ್ಯ ನಿಧಿ, ಜೀವ ವಿಮೆ, ಮಕ್ಕಳ ಶಿಕ್ಷಣ, ಮೂಲ ಸೌಕರ್ಯ ಬಾಂಡ್‌ಗಳಲ್ಲಿ ತೊಡಗಿಸುವ ಉಳಿತಾಯಕ್ಕೆ ಸಂಬಂಧಿಸಿದಂತೆ ಒಟ್ಟು ತೆರಿಗೆ ವಿನಾಯ್ತಿ ಮಿತಿಯನ್ನು ಸದ್ಯದ ರೂ 1.8 ಲಕ್ಷದಿಂದ ರೂ 3.2 ಲಕ್ಷಕ್ಕೆ ಹೆಚ್ಚಿಸಲು ಶಿಫಾರಸು ಮಾಡಿದೆ.
ಸಂಪತ್ತು ತೆರಿಗೆಗೆ ಸಂಬಂಧಿಸಿದಂತೆಯೂ ಸಮಿತಿಯು, ನಿರ್ದಿಷ್ಟ ಸಂಪತ್ತಿನ ಮೌಲ್ಯ ಸದ್ಯದ ರೂ 30 ಲಕ್ಷ ಬದಲಿಗೆ ರೂ 5 ಕೋಟಿ ಮೀರಿದರೆ ಮಾತ್ರ ತೆರಿಗೆ ಅನ್ವಯಿಸಲು ಸೂಚಿಸಿದೆ. ರೂ 5ರಿಂದ ರೂ 20 ಕೋಟಿ ಸಂಪತ್ತಿಗೆ ಶೇ 0.5, ರೂ 20 ರಿಂದ ರೂ 50 ಕೋಟಿಗೆ ಶೇ 0.7 ಮತ್ತು ರೂ 50 ಕೋಟಿಗಿಂತ ಹೆಚ್ಚಿನ ಸಂಪತ್ತಿಗೆ ಶೇ 1ರಷ್ಟು ತೆರಿಗೆ ವಿಧಿಸಲು ಸಲಹೆ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.