ನವದೆಹಲಿ: ದೇಶಿ ಮತ್ತು ಜಾಗತಿಕ ವಿದ್ಯಮಾನಗಳ ಪ್ರಭಾವಕ್ಕೆ ಸಿಲುಕಿ ಷೇರುಪೇಟೆಗಳಲ್ಲಿ ಸತತ ಐದನೇ ವಹಿವಾಟು ಅವಧಿಯಲ್ಲಿಯೂ ಸೂಚ್ಯಂಕಗಳು ಇಳಿಕೆ ಕಂಡಿವೆ.
ಕರ್ನಾಟಕದಲ್ಲಿ ನಡೆಯುತ್ತಿರುವ ರಾಜಕೀಯ ವಿದ್ಯಮಾನಗಳು ಹೂಡಿಕೆದಾರರ ಉತ್ಸಾಹ ಉಡುಗಿಸಿವೆ. ಯಡಿಯೂರಪ್ಪ ಅವರು ಶನಿವಾರ ವಿಶ್ವಾಸಮತ ಯಾಚಿಸದೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಬೆಳವಣಿಗೆಯು ಹೂಡಿಕೆದಾರರಲ್ಲಿ ನಿರಾಶೆ ಮೂಡಿಸಿದೆ.
ರೂಪಾಯಿ ಮೌಲ್ಯ ಇಳಿಕೆ ಕಾಣುತ್ತಲೇ ಇದೆ. ಕಚ್ಚಾ ತೈಲ ದರವೂ ಭಾರಿ ಏರಿಕೆ ಕಾಣುತ್ತಿದೆ. ವಿದೇಶಿ ಬಂಡವಾಳ ಹೊರ ಹರಿವು ಹೆಚ್ಚುತ್ತಿರುವುದರಿಂದ ನಕಾರಾತ್ಮಕ ವಹಿವಾಟು ನಡೆಯುವಂತಾಗಿದೆ ಎಂದು ದಲ್ಲಾಳಿಗಳು ಹೇಳಿದ್ದಾರೆ.
ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು (ಬಿಎಸ್‌ಇ) ದಿನದ ವಹಿವಾಟಿನಲ್ಲಿ 232 ಅಂಶ ಇಳಿಕೆಯಾಗಿ ಒಂದು ತಿಂಗಳ ಕನಿಷ್ಠ ಮಟ್ಟವಾದ 34,616 ಅಂಶಗಳಲ್ಲಿ ವಹಿವಾಟು ಮುಕ್ತಾಯವಾಗಿದೆ.
ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ, 80 ಅಂಶ ಇಳಿಕೆ ಕಂಡು 10,516 ಅಂಶಗಳಲ್ಲಿ ವಹಿವಾಟು ಅಂತ್ಯಕಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.