ADVERTISEMENT

ಕಂಪೆನಿ ಬದಲಿಸುವವರ ಸಂಖ್ಯೆ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 14 ಜೂನ್ 2013, 19:59 IST
Last Updated 14 ಜೂನ್ 2013, 19:59 IST

ನವದೆಹಲಿ(ಪಿಟಿಐ): ಜಾಗತಿಕ ಉದ್ಯೋಗ ಮಾರುಕಟ್ಟೆ ಚೇತರಿಸಿಕೊಳ್ಳುತ್ತಿದೆ. ಇದರ ಬೆನ್ನಲ್ಲೇ, ಒಂದು ಕಂಪೆನಿಯಿಂದ ಇನ್ನೊಂದಕ್ಕೆ ಉದ್ಯೋಗ ಬದಲಿಸುವವರ ಸಂಖ್ಯೆಯೂ ಹೆಚ್ಚುತ್ತಿದೆ. ಮಾನವ ಸಂಪನ್ಮೂಲ ಸಲಹಾ ಸಂಸ್ಥೆ `ಹೇ ಗ್ರೂಪ್' ನಡೆಸಿದ ಅಧ್ಯಯನದಂತೆ ಹಾಲಿ ಉದ್ಯೋಗ ತ್ಯಜಿಸಿ ಹೆಚ್ಚಿನ ಆಕರ್ಷಣೆ ನೀಡುವ ಕಂಪೆನಿಗೆ ಜಾಗ ಬದಲಿಸುವವರ ಪಟ್ಟಿಯಲ್ಲಿ ಭಾರತ ಜಾಗತಿಕ ಮಟ್ಟದಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ!

ಭಾರತದಲ್ಲಿನ ನಾಲ್ವರಲ್ಲಿ ಒಬ್ಬ ಉದ್ಯೋಗಿ ಹೆಚ್ಚಿನ ವೇತನ ಆಕರ್ಷಣೆ ಮತ್ತು  ವೃತ್ತಿಪರ ಉದ್ದೇಶಗಳಿಂದ ಕಂಪೆನಿ ಬದಲಿಸುತ್ತಿದ್ದಾರೆ. ಒಟ್ಟಾರೆ ಜಾಗತಿಕ ಮಟ್ಟದಲ್ಲಿ ಮುಂದಿನ ಐದು ವರ್ಷಗಳಲ್ಲಿ 4.90 ಕೋಟಿ ಉದ್ಯೋಗಿಗಳು ತಮ್ಮ ಕಂಪೆನಿ ಬದಲಿಸಲಿದ್ದಾರೆ ಎಂದೂ ಈ ಅಧ್ಯಯನ ಹೇಳಿದೆ.

ಏಷ್ಯಾ-ಪೆಸಿಫಿಕ್ ವಲಯದಲ್ಲಿ ಹೆಚ್ಚಿನ ಉದ್ಯೋಗಿಗಳು ಕಂಪೆನಿ ಬದಲಿಸಿದ್ದಾರೆ.  ಭಾರತದಲ್ಲಿ ಸಂಘಟಿತ ವಲಯದಲ್ಲಿ ಉದ್ಯೋಗ ತ್ಯಜಿಸುವವರ  ಸಂಖ್ಯೆ ಪ್ರಸಕ್ತ ವರ್ಷ ಶೇ 26.9ರಷ್ಟು ಹೆಚ್ಚಲಿದೆ ಎಂದು `ಹೇ ಗ್ರೂಪ್' ಅಂದಾಜು ಮಾಡಿದೆ. 

`ಸದ್ಯದ ಪರಿಸ್ಥಿತಿಯಲ್ಲಿ ವಿಶೇಷವಾಗಿ ಭಾರತದಲ್ಲಿ ಕಂಪೆನಿಗಳ ಆಡಳಿತ ಮಂಡಳಿ ತಮ್ಮ ಉದ್ಯೋಗಿಗಳನ್ನು ಉಳಿಸಿಕೊಳ್ಳಲು ಗಂಭೀರವಾಗಿ ಚಿಂತಿಸುವ ಅಗತ್ಯವಿದೆ' ಎಂದು ಹೇ ಗ್ರೂಪ್‌ನ ಭಾರತೀಯ ಮುಖ್ಯಸ್ಥರಾದ ಮೊಹಿನಿಶ್ ಸಿನ್ಹಾ ಅಭಿಪ್ರಾಯಪಟ್ಟಿದ್ದಾರೆ.
 
ಭಾರತದಲ್ಲಿ ಉದ್ಯೋಗಾವಕಾಶ ಹೆಚ್ಚಿದೆ. ಕಂಪೆನಿಗಳು ಸಹ ಪ್ರತಿಭೆಗೆ ತಕ್ಕಂತೆ ಗರಿಷ್ಠ ವೇತನದ ಕೊಡುಗೆ ನೀಡುತ್ತಿವೆ. ಇದರಿಂದ ಶೇ 55ರಷ್ಟು ಉದ್ಯೋಗಿಗಳು ಉದ್ಯೋಗ ಬದಲಿಸುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಮೂರರಲ್ಲಿ ಒಬ್ಬ ಉದ್ಯೋಗಿ ವೃತ್ತಿಪರವಾಗಿ ಬೆಳೆಯಲು ಕಂಪೆನಿ ಬದಲಿಸುವುದಾಗಿ ಹೇಳಿದ್ದಾರೆ ಎಂದೂ ಈ ಅಧ್ಯಯನ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.