ADVERTISEMENT

ಕುಟುಂಬ ಒಡೆತನದ ಉದ್ದಿಮೆ ಮೂರನೇ ಸ್ಥಾನದಲ್ಲಿ ಭಾರತ

ಪಿಟಿಐ
Published 26 ಅಕ್ಟೋಬರ್ 2017, 19:30 IST
Last Updated 26 ಅಕ್ಟೋಬರ್ 2017, 19:30 IST

ನವದೆಹಲಿ: ದೇಶಿ ಷೇರುಪೇಟೆಯಲ್ಲಿ ವಹಿವಾಟು ನಡೆಸುವ ಉದ್ದಿಮೆಗಳ ಪೈಕಿ 108 ಕಾರ್ಪೊರೇಟ್‌ಗಳು ಕುಟುಂಬದ ಒಡೆತನದಲ್ಲಿ ಇವೆ.

ಈ ವಿಷಯದಲ್ಲಿ ಭಾರತ ವಿಶ್ವದಲ್ಲಿ ಮೂರನೇ ಸ್ಥಾನದಲ್ಲಿ ಇದೆ. ಇಂತಹ 167 ಉದ್ದಿಮೆಗಳನ್ನು ಹೊಂದಿರುವ ಚೀನಾ ಎರಡನೆ ಸ್ಥಾನದಲ್ಲಿ ಮತ್ತು ಅಮೆರಿಕ (121) ಮೂರನೇ ಸ್ಥಾನದಲ್ಲಿ ಇವೆ.

ಕುಟುಂಬದ ನಿಯಂತ್ರಣದಲ್ಲಿ ಇರುವ ಭಾರತದ ಉದ್ದಿಮೆ ಸಂಸ್ಥೆಗಳು ಹೆಚ್ಚು ಪ್ರಬುದ್ಧತೆ ಹೊಂದಿವೆ ಎಂದು ವರದಿಯಲ್ಲಿ ಅಭಿಪ್ರಾಯಪಡಲಾಗಿದೆ. ಶೇ 60 ರಷ್ಟು ಉದ್ದಿಮೆಗಳು ಸದ್ಯಕ್ಕೆ ಮೂರನೇ ತಲೆಮಾರಿನ ನಿಯಂತ್ರಣದಲ್ಲಿ ಇವೆ. ಇಂತಹ ಉದ್ದಿಮೆಗಳ ಹಣಕಾಸು ಸಾಧನೆಯು, ವೃತ್ತಿಪರರ ಒಡೆತನದಲ್ಲಿ ಇರುವ ಉದ್ದಿಮೆಗಳಿಗಿಂತ ಉತ್ತಮವಾಗಿದೆ. ಈ ಉದ್ದಿಮೆಗಳು ದೀರ್ಘಾವಧಿ ಬೆಳವಣಿಗೆ ಮೇಲೆ ಹೆಚ್ಚು ಆದ್ಯತೆ ನೀಡಿರುತ್ತವೆ. ಷೇರುಗಳ ಗಳಿಕೆಯಲ್ಲಿಯೂ ಇವುಗಳ ಸಾಧನೆ ಉತ್ತಮವಾಗಿರಲಿದೆ. ಭವಿಷ್ಯದಲ್ಲಿನ ವರಮಾನ ಬೆಳವಣಿಗೆ ವಿಷಯದಲ್ಲಿಯೂ ಇವುಗಳ ಸಾಧನೆ ಆಶಾದಾಯಕವಾಗಿದೆ.

ADVERTISEMENT

ಕ್ರೆಡಿಟ್‌ ಸೂಸ್ಸೆ ರಿಸರ್ಚ್‌ ಇನ್‌ಸ್ಟಿಟ್ಯೂಟ್‌ನ (ಸಿಎಸ್‌ಆರ್‌ಐ) ವರದಿ ಪ್ರಕಾರ, ಇಂತಹ ಉದ್ದಿಮೆ ಸಂಸ್ಥೆಗಳ ₹ 42,250 ಕೋಟಿಗಳಷ್ಟು ಸರಾಸರಿ ಮಾರುಕಟ್ಟೆ ಬಂಡವಾಳ ಆಧರಿಸಿ ಭಾರತವು ಏಷ್ಯಾ ಪೆಸಿಫಿಕ್‌ ಪ್ರದೇಶದಲ್ಲಿ 5ನೇ ಮತ್ತು ಜಾಗತಿಕ ಮಟ್ಟದಲ್ಲಿ 22 ಸ್ಥಾನದಲ್ಲಿ ಇದೆ.

ಸರಾಸರಿ ಮಾರುಕಟ್ಟೆ ಬಂಡವಾಳ ಆಧರಿಸಿದ ಕಾರ್ಪೊರೇಟ್‌ಗಳ ಶ್ರೇಯಾಂಕದಲ್ಲಿ ಸಿರಿವಂತ ದೇಶಗಳ ಪಾಲು ಹೆಚ್ಚಿಗೆ ಇದೆ. ಕುಟುಂಬದ ನಿಯಂತ್ರಣದಲ್ಲಿ ಇರುವ ಕಾರ್ಪೊರೇಟ್‌ಗಳ ಸರಾಸರಿ ಮಾರುಕಟ್ಟೆ ಬಂಡವಾಳವು ಸ್ಪೇನ್‌ನಲ್ಲಿ ಗರಿಷ್ಠ ಪ್ರಮಾಣದಲ್ಲಿ ಇದೆ. ನಂತರದ ಸ್ಥಾನದಲ್ಲಿ ನೆದರ್ಲೆಂಡ್‌, ಜಪಾನ್‌ ಮತ್ತು ಸ್ವಿಟ್ಜರ್ಲೆಂಡ್‌ಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.