ADVERTISEMENT

ಕೈಗಾರಿಕೆ ಸಮಸ್ಯೆ; ಪ್ರತ್ಯೇಕ ಘಟಕ

​ಪ್ರಜಾವಾಣಿ ವಾರ್ತೆ
Published 1 ಜೂನ್ 2011, 19:30 IST
Last Updated 1 ಜೂನ್ 2011, 19:30 IST

ಬೆಂಗಳೂರು: `ಕಳೆದ ವರ್ಷ ಏರ್ಪಡಿಸಿದ್ದ ವಿಶ್ವ ಹೂಡಿಕೆದಾರರ ಸಮ್ಮೇಳನ (ಜಿಮ್)ದಲ್ಲಿ ಬಂಡವಾಳ ಹೂಡಲು ಮುಂದೆ ಬಂದಿರುವ ಉದ್ಯಮಿಗಳು ತಮ್ಮ ಕೈಗಾರಿಕೆಗಳನ್ನು ಸ್ಥಾಪಿಸುವ ಸಂಬಂಧ, ಏನಾದರೂ ತೊಂದರೆಗಳಿದ್ದಲ್ಲಿ ಅದನ್ನು ನಿವಾರಿಸಲು ಘಟಕವೊಂದನ್ನು ರಚಿಸುತ್ತೇವೆ~ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಪ್ರಕಟಿಸಿದರು.

`ಕರ್ನಾಟಕ ವಿದ್ಯುನ್ಮಾನ ಕೈಗಾರಿಕೆಗಳ ಒಕ್ಕೂಟ~ (ಕ್ಲಿಕ್)ವು ನಗರದಲ್ಲಿ ಬುಧವಾರ ಏರ್ಪಡಿಸಿದ್ದ ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳಿಗೆ ಬಾಡಿಗೆಯಾಧಾರದಲ್ಲಿ ಸಾಫ್ಟ್‌ವೇರ್ ಸೇವೆ ಒದಗಿಸುವ ಕುರಿತಂತೆ ಹಮ್ಮಿಕೊಂಡಿದ್ದ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.

`2012ರ ಜೂನ್ 3-4ರಂದು ಮತ್ತೆ ವಿಶ್ವ ಬಂಡವಾಳ ಹೂಡಿಕೆದಾರರ ಸಮ್ಮೇಳನವನ್ನು ಏರ್ಪಡಿಸಲಾಗುತ್ತಿದೆ. ಅದಕ್ಕೂ ಮುನ್ನ ಕಳೆದ ವರ್ಷದ ಸಮಾವೇಶದಲ್ಲಿ ಬಂಡವಾಳ ಹೂಡುತ್ತಿರುವ ಉದ್ಯಮಿಗಳಿಗೆ ಅನುಕೂಲ ಕಲ್ಪಿಸಲು ಈ ಘಟಕ ರಚನೆಗೆ ನಿರ್ಧರಿಸಲಾಗಿದೆ.

ಉದ್ಯಮಿಗಳು ಬಯಸಿದಂತೆ ಅವರ ಉದ್ಯಮಗಳ ಸ್ಥಾಪನೆಗೆ ಅಗತ್ಯ ಭೂಮಿ, ವಿದ್ಯುತ್, ನೀರು ಮತ್ತಿತರ ಮೂಲ ಸೌಕರ್ಯಗಳನ್ನು ಕಲ್ಪಿಸುವಲ್ಲಿ ಈ ಘಟಕ ಸಹಾಯ ಮಾಡಲಿದೆ. ಇದಕ್ಕೆ ನೋಡಲ್ ಅಧಿಕಾರಿಯನ್ನೂ ನೇಮಕ ಮಾಡಲಾಗುವುದು~ ಎಂದು ಹೇಳಿದರು.

ಭೂಮಿ ಕೊಡಲು ಒಪ್ಪಿಗೆ: ಈಗಾಗಲೇ ಬಳ್ಳಾರಿ ಜಿಲ್ಲೆಯ ಕುಡಿತಿನಿ ಮತ್ತು ಗದಗ ಜಿಲ್ಲೆಯ ಮುಂಡರಗಿಯಲ್ಲಿ ಕ್ರಮವಾಗಿ ಆರ್ಸೆಲರ್ ಮಿತ್ತಲ್ ಮತ್ತು ಪೋಸ್ಕೊ ಕಂಪೆನಿಗಳು ಉಕ್ಕು ಕಾರ್ಖಾನೆ ಸ್ಥಾಪಿಸಲು ಮುಂದೆ ಬಂದಿವೆ. ರಾಜ್ಯ ಸರ್ಕಾರವೂ ತಲಾ 3 ಸಾವಿರ ಎಕರೆ ಭೂಮಿಯನ್ನು ಸ್ವಾಧೀನ ಮಾಡಿಕೊಡಲು ಮುಂದಾಗಿದ್ದು, ಭೂ ಸ್ವಾಧೀನ ಪ್ರಕ್ರಿಯೆಯೂ ನಡೆದಿದೆ. ಭೂಮಿ ಕಳೆದುಕೊಳ್ಳಲಿರುವ ರೈತರಿಗೆ ಸರ್ಕಾರ ಮಾರುಕಟ್ಟೆ ದರ ನೀಡುವುದರಿಂದ ರೈತರು ಭೂಮಿ ನೀಡಲು ಸಮ್ಮತಿ ವ್ಯಕ್ತಪಡಿಸಿದ್ದಾರೆ. ಪೋಸ್ಕೊ ಕಂಪೆನಿಯು ಬೇರೆ ಕಡೆಗೆ ಜಾಗ ಕೇಳಿತ್ತಾದರೂ ಲಭ್ಯವಿರುವ ಜಾಗದಲ್ಲಿ ಭೂಮಿಯನ್ನು ನೀಡಿದ್ದೇವೆ~ ಎಂದು ಹೇಳಿದರು.

`ಕೈಗಾರಿಕೆಗಳ ಬೆಳವಣಿಗೆಗೆ ಎಲೆಕ್ಟ್ರಾನಿಕ್ಸ್ ಕ್ಷೇತ್ರದ ಸಹಕಾರ ಅತ್ಯಗತ್ಯ. ಆದ್ದರಿಂದ ರಾಜ್ಯದಲ್ಲಿ ಎಲೆಕ್ಟ್ರಾನಿಕ್ಸ್ ಕ್ಷೇತ್ರದ ಬೆಳವಣಿಗೆ ಮಾಡುವುದು ಪ್ರಮುಖ ಆದ್ಯತೆಯಾಗಿದೆ~ ಎಂದು ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT