ನವದೆಹಲಿ (ಪಿಟಿಐ): ಹಣ್ಣು, ತರಕಾರಿ, ಖಾದ್ಯ ತೈಲ ಸೇರಿದಂತೆ ಅಗತ್ಯ ಸರಕುಗಳ ಆಮದು ಪ್ರಮಾಣ ಕಳೆದ ಹಣಕಾಸು ವರ್ಷದಲ್ಲಿ (2011-12) ಶೇ 42.8ರಷ್ಟು ಹೆಚ್ಚಿದ್ದು, ರೂ1,00,911 ಕೋಟಿಗೆ ಏರಿಕೆ ಕಂಡಿದೆ ಎಂದು ವಾಣಿಜ್ಯ ಸಚಿವಾಲಯ ಹೇಳಿದೆ.
2010-11ನೇ ಸಾಲಿನಲ್ಲಿ ರೂ70,655 ಕೋಟಿ ಮೌಲ್ಯದ ಸರಕುಗಳನ್ನು ಆಮದು ಮಾಡಿಕೊಳ್ಳಲಾಗಿತ್ತು. ಪ್ರಸಕ್ತ ಏಪ್ರಿಲ್-ಮಾರ್ಚ್ ಅವಧಿಯಲ್ಲಿ ತರಕಾರಿ ಮತ್ತು ಹಣ್ಣುಗಳ ಆಮದು ಶೇ 70ರಷ್ಟು ಹೆಚ್ಚಿದ್ದು, ರೂ8,929 ಕೋಟಿಯಷ್ಟಾಗಿದೆ. ಆಹಾರ ಧಾನ್ಯಗಳು, ವಾಹನಗಳ ಬಿಡಿಭಾಗಗಳು, ಹಾಲು ಮತ್ತು ಇತರೆ ಪಾನೀಯ ಆಮದು ತುಸು ಇಳಿಕೆ ಕಂಡಿದೆ.
ಭಾರತವು ಪ್ರಪಂಚದಲ್ಲಿಯೇ ಅತಿ ಹೆಚ್ಚು ಖಾದ್ಯತೈಲ ಆಮದು ಮಾಡಿಕೊಳ್ಳುವ ದೇಶವಾಗಿದ್ದು, ಕಳೆದ ಹಣಕಾಸು ವರ್ಷದಲ್ಲಿ ಒಟ್ಟು ಆಮದು ಶೇ 57.9ರಷ್ಟು ಹೆಚ್ಚಿದ್ದು, ರೂ46,309 ಕೋಟಿಗಳಿಗೆ ಏರಿಕೆ ಕಂಡಿದೆ. ಕಚ್ಚಾ ಎಣ್ಣೆ ಮತ್ತು ಸಂಸ್ಕರಿಸಿದ ಎಣ್ಣೆ ಆಮದು ಕ್ರಮವಾಗಿ ಶೇ 53.5 ಮತ್ತು ಶೇ 85.6ರಷ್ಟು ಏರಿಕೆ ಕಂಡಿವೆ.
ಸಣ್ಣ ಮತ್ತು ಮಧ್ಯ ಪ್ರಮಾಣದ ಕೈಗಾರಿಕೆಗಳು ಆಮದು ಮಾಡಿಕೊಳ್ಳುವ ಬೀಗದ ಕೈ, ಆಟಿಕೆಗಳು, ಗಾಜು ಮತ್ತಿತರ ಬಿಡಿಭಾಗಗಳ ಆಮದು ಶೇ 43ರಷ್ಟು ಹೆಚ್ಚಿದ್ದು, ರೂ2,205 ಕೋಟಿ ವಹಿವಾಟು ದಾಖಲಾಗಿದೆ. ವಾಹನಗಳ ಬಿಡಿಭಾಗಗಳ ಆಮದು ಶೇ 40ರಷ್ಟು ಹೆಚ್ಚಿದ್ದು, ರೂ3,587 ಕೋಟಿಗೆ ಏರಿಕೆ ಕಂಡಿದೆ.
ಪ್ರಮುಖವಾಗಿ ಇಂಡೋನೇಷಿಯಾ, ಚೀನಾ, ಮಲೇಷಿಯಾ, ಜರ್ಮನಿ, ಥಾಯ್ಲೆಂಡ್, ಜಪಾನ್, ಕೆನಡಾದಿಂದ ಸರಕುಗಳನ್ನು ಆಮದು ಮಾಡಿಕೊಳ್ಳಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.