
ನವದೆಹಲಿ (ಪಿಟಿಐ): ಮದುವೆಗಳ ಕಾಲ ಆರಂಭವಾಗಿರುವ ಹಿನ್ನೆಲೆಯಲ್ಲಿ ಚಿನ್ನಾಭರಣಗಳ ಖರೀದಿ ಹೆಚ್ಚಿದ್ದು, ಬುಧವಾರ ಇಲ್ಲಿನ ಚಿನಿವಾರ ಪೇಟೆಯಲ್ಲಿ ಚಿನ್ನದ ಧಾರಣೆ 10 ಗ್ರಾಂಗಳಿಗೆ ರೂ. 250 ಏರಿಕೆ ಕಂಡಿದೆ.
99.9 ಮತ್ತು 99.5 ಶುದ್ಧ ಚಿನ್ನದ ಬೆಲೆ ಕ್ರಮವಾಗಿ ರೂ. 28,900 ಮತ್ತು ರೂ. 28,760ರಷ್ಟಾಗಿದೆ. ಕಳೆದ ಮೂರು ವಹಿವಾಟು ದಿನಗಳಲ್ಲಿ ಚಿನ್ನದ ಬೆಲೆ ಒಟ್ಟು ರೂ. 510 ಏರಿಕೆಯಾಗಿದೆ.
ಯೂರೋಪ್ ಸಾಲದ ಬಿಕ್ಕಟ್ಟಿನಿಂದ ಜಾಗತಿಕ ಷೇರುಪೇಟೆಗಳಲ್ಲಿ ಮತ್ತೆ ಅಸ್ಥಿರತೆ ಮೂಡಿದೆ. ಇದರಿಂದ ಹೂಡಿಕೆದಾರರು ಷೇರುಪೇಟೆಗಳಿಂದ ಬಂಡವಾಳ ಹಿಂತೆಗೆದು ಸುರಕ್ಷಿತ ಹೂಡಿಕೆಗಾಗಿ ಚಿನ್ನ ಖರೀದಿಸಲು ಮುಂದಾಗುತ್ತಿದ್ದಾರೆ.
ನ್ಯೂಯಾರ್ಕ್ ಮಾರುಕಟ್ಟೆಯಲ್ಲೂ ಬುಧವಾರ ಚಿನ್ನದ ಬೆಲೆ ಪ್ರತಿ ಔನ್ಸ್‌ಗೆ 19.30 ಡಾಲರ್‌ನಷ್ಟು (ರೂ. 984) ಏರಿಕೆಯಾಗಿದ್ದು, ಕಳೆದೊಂದು ವಾರದಲ್ಲೇ ಗರಿಷ್ಠ ಮಟ್ಟ (1,666 ಡಾಲರ್) ತಲುಪಿದೆ. ಈ ನಡುವೆ ಬೆಳ್ಳಿ ಧಾರಣೆ ಕಳೆದ ಮೂರು ದಿನಗಳಿಂದ ಕೆ.ಜಿಗೆ ರೂ. 56,100ರಲ್ಲಿ ಸ್ಥಿರವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.