ADVERTISEMENT

ಚಿನ್ನ: ಲಾಭದ ಹೂಡಿಕೆ

​ಪ್ರಜಾವಾಣಿ ವಾರ್ತೆ
Published 2 ಜನವರಿ 2012, 19:30 IST
Last Updated 2 ಜನವರಿ 2012, 19:30 IST

ನವದೆಹಲಿ (ಪಿಟಿಐ): ಕಳೆದ ವರ್ಷದ ವಹಿವಾಟಿನಲ್ಲಿ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಪ್ರತಿ 10 ಸೆಕೆಂಡ್‌ಗೆ ಹೂಡಿಕೆದಾರರ ಸಂಪತ್ತನ್ನು ಸರಾಸರಿ 1 ದಶಲಕ್ಷ ಡಾಲರ್‌ನಂತೆ  (ಅಂದಾಜು ರೂ 5.2 ಕೋಟಿ) ಕರಗಿಸಿದೆ. ಜಾಗತಿಕ ಆರ್ಥಿಕ ಅಸ್ಥಿರತೆ, ರೂಪಾಯಿ ಮೌಲ್ಯ ಕುಸಿತ ಮತ್ತಿತರ ವಿದ್ಯಮಾನಗಳಿಂದ ಈ ವರ್ಷವೂ ಸೂಚ್ಯಂಕ ಗರಿಷ್ಠ  ಏರಿಳಿತ ಕಾಣುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

ಮುಂಬೈ ಷೇರುಪೇಟೆಯ ವರ್ಷಾಂತ್ಯದ ವಹಿವಾಟು 15,454 ಅಂಶಗಳಿಗೆ ಕೊನೆಗೊಂಡಿದೆ. ಜಾಗತಿಕ ಅಸ್ಥಿರತೆ ಮುಂದುವರೆದಿರುವುದರಿಂದ  ಈ ವರ್ಷವೂ ಸೂಚ್ಯಂಕ ಕನಿಷ್ಠ 8 ಸಾವಿರ ಅಂಶಗಳಿಂದ ಗರಿಷ್ಠ 28,500 ಅಂಶಗಳ ವರೆಗೆ ಏರಿಳಿತ ಕಾಣಬಹುದು ಎಂದು ಮಾರುಕಟ್ಟೆ ವಿಶ್ಲೇಷಣೆ ಹೇಳಿದೆ.

ಜಾಗತಿಕ ಪೇಟೆಗಳಲ್ಲಿ ತಲೆದೋರಿರುವ ಅಸ್ಥಿರತೆಯಿಂದ ಈಗಾಗಲೇ ವಿಶ್ವಾಸ ಕಳೆದುಕೊಂಡಿರುವ ಹೂಡಿಕೆದಾರರು ಚಿನ್ನ ಸೇರಿದಂತೆ ಇತರೆ ಸುರಕ್ಷಿತ ಹೂಡಿಕೆ ಮಾರ್ಗಗಳತ್ತ ಗಮನ ಹರಿಸುತ್ತಿದ್ದಾರೆ. ಚಿನ್ನ ಈಗಾಗಲೇ ಅತ್ಯಂತ ಸುರಕ್ಷಿತ ಹೂಡಿಕೆ ಮತ್ತು ಗರಿಷ್ಠ ಲಾಭ ತರುವ ಆಯ್ಕೆ ಎನ್ನುವುದು ಸಾಬೀತಾಗಿದೆ. ಬೆಲೆ ಏರಿಳಿತಗಳ ನಡುವೆಯೂ 2011ರ ಸುರಕ್ಷಿತ ಹೂಡಿಕೆ ಎನ್ನುವ ಹೆಗ್ಗಳಿಕೆಗೆ ಚಿನ್ನ ಪಾತ್ರವಾಗಿದೆ. ಚಿನ್ನದ  ಜತೆಗೆ ಬೆಳ್ಳಿ ಕೂಡ ಹೂಡಿಕೆದಾರರಿಗೆ ಲಾಭ ತಂದಿದೆ. ಆದರೆ, ಇದೇ ಅವಧಿಯಲ್ಲಿ ಷೇರು ಪೇಟೆಯಲ್ಲಿ  ಬಂಡವಾಳ ತೊಡಗಿಸಿದ ಹೂಡಿಕೆದಾರರು ಅಂದಾಜು ರೂ19.46 ಲಕ್ಷ ಕೋಟಿಗಳಷ್ಟು ಮೊತ್ತದ ನಷ್ಟ ಅನುಭವಿಸಿದ್ದಾರೆ. ಶೇಕಡಾವಾರು ಲೆಕ್ಕದಲ್ಲಿ ಕಳೆದ ವರ್ಷದಲ್ಲಿ ಚಿನ್ನ ಮತ್ತು ಬೆಳ್ಳಿ ಮೇಲಿನ ಹೂಡಿಕೆ ಶೇ 32 ಮತ್ತು ಶೇ 10ರಷ್ಟು ಲಾಭ ತಂದಿವೆ. ಆದರೆ, ಷೇರುಪೇಟೆ ಶೇ 24.5ರಷ್ಟು ಕುಸಿತ ಕಂಡಿದೆ.

2011ರ ವರ್ಷಾರಂಭದಲ್ಲಿ 10 ಗ್ರಾಂಗಳಿಗೆ ರೂ 20,890 ಇದ್ದ ಚಿನ್ನದ ಬೆಲೆಯು ಒಂದು ಹಂತದಲ್ಲಿ  ರೂ 30 ಸಾವಿರದ ಗಡಿ ತಲುಪಿ ನಂತರ ರೂ 27,640ರಲ್ಲಿ ವರ್ಷಾಂತ್ಯ ಕಂಡಿತು. ಬೆಳ್ಳಿ ಧಾರಣೆಯೂ ಕೆ.ಜಿಗೆ ರೂ 46,500ರಿಂದ ಪ್ರಾರಂಭವಾಗಿ ರೂ51,150ಕ್ಕೆ ವರ್ಷಾಂತ್ಯ ಕಂಡಿತು.  ಇವೆರಡು ಲೋಹಗಳೂ ಹೂಡಿಕೆದಾರರ ಸರಾಸರಿ  ಸಂಪತ್ತನ್ನು ಇಮ್ಮಡಿಗೊಳಿಸಿವೆ. ಆದರೆ, ಸಂವೇದಿ ಸೂಚ್ಯಂಕವು 5,054 ಅಂಶಗಳನ್ನು ಕಳೆದುಕೊಂಡಿದ್ದು ದೊಡ್ಡ ಪ್ರಮಾಣದಲ್ಲಿ ಹಾನಿಗೊಳಗಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.