ADVERTISEMENT

ಚುರುಕು ವಹಿವಾಟು ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 22 ಜನವರಿ 2012, 19:30 IST
Last Updated 22 ಜನವರಿ 2012, 19:30 IST

ನವದೆಹಲಿ (ಪಿಟಿಐ): ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಇದೇ 24ರಂದು ತನ್ನ ಹಣಕಾಸು ನೀತಿಯ ಮೂರನೆಯ ತ್ರೈಮಾಸಿಕ ಅವಧಿಯ  ಪರಾಮರ್ಶೆ ನಡೆಸಲಿದೆ. ಹಣದುಬ್ಬರ ಇಳಿದಿರುವ ಹಿನ್ನೆಲೆಯಲ್ಲಿ ಬಡ್ಡಿ ದರಗಳು  ಕಡಿತಗೊಳ್ಳುವ ಸಾಧ್ಯತೆಗಳಿವೆ. ಇದರಿಂದ ಷೇರುಪೇಟೆ ವಹಿವಾಟು  ಇನ್ನಷ್ಟು ಚುರುಕುಗೊಳ್ಳುವ ನಿರೀಕ್ಷೆ ಇದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ರಿಲಯನ್ಸ್ ಇಂಡಸ್ಟ್ರೀಸ್‌ನ ಮೂರನೆಯ ತ್ರೈಮಾಸಿಕ ಸಾಧನೆ ಶೇ 13ರಷ್ಟು ಕುಸಿತ ಕಂಡಿದ್ದು ಬಿಟ್ಟರೆ, ಉಳಿದ ಕಾರ್ಪೊರೇಟ್ ಕಂಪೆನಿಗಳ ವಹಿವಾಟು ಚೇತರಿಸಿಕೊಂಡಿದೆ.

`ಆರ್‌ಐಎಲ್~, ಮುಕ್ತ ಮಾರುಕಟ್ಟೆಯಿಂದ ಪ್ರತಿ ಷೇರಿಗೆ ಗರಿಷ್ಠ ರೂ870ರಂತೆ ರೂ10,440 ಕೋಟಿ ಮೌಲ್ಯದ 12 ಕೋಟಿ ಷೇರುಗಳನ್ನು ಮರು ಖರೀದಿಸುವುದಾಗಿ ಹೇಳಿದೆ. `ಆರ್‌ಐಎಲ್~ನ ಈ ನಡೆ ಸೋಮವಾರದ ವಹಿವಾಟಿನ ಮೇಲೆ ಪರಿಣಾಮ ಬೀರಬಹುದು ಎಂದು ಬೊನಾಂಜ ಪೋರ್ಟ್‌ಪೊಲಿಯೊ ಸಂಸ್ಥೆಯ ವಿಶ್ಲೇಷಕ ಶಾನು ಗೋಯೆಲ್ ಅಭಿಪ್ರಾಯಪಟ್ಟಿದ್ದಾರೆ.

ಯೂರೋ ಬಿಕ್ಕಟ್ಟು ತಗ್ಗಿದ್ದು, ಜಾಗತಿಕ ಷೇರುಪೇಟೆಗಳು ಸ್ಥಿರಗೊಂಡಿರುವುದು ಹೂಡಿಕೆದಾರರಲ್ಲಿ ಹೊಸ ಆತ್ಮವಿಶ್ವಾಸ ಮೂಡಿಸಿದೆ.

ತೆರಿಗೆ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ವೋಡಾಫೋನ್ ಪರವಾಗಿ ತೀರ್ಪು ನೀಡಿರುವುದರಿಂದ ದೇಶೀಯ ಮಾರುಕಟ್ಟೆಗೆ ಇನ್ನಷ್ಟು ವಿದೇಶಿ  ನೇರ ಬಂಡವಾಳ ಹೂಡಿಕೆ (ಎಫ್‌ಡಿಐ) ಆಕರ್ಷಿಸಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.  ಈ ಎಲ್ಲ ಸಂಗತಿಗಳ ಹಿನ್ನೆಲೆಯಲ್ಲಿ ಈ ವಾರ ಉತ್ತಮ ವಹಿವಾಟು ನಿರೀಕ್ಷಿಸಲಾಗಿದೆ.

ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಜನವರಿ 26ರಂದು ಷೇರುಪೇಟೆಗೆ ರಜೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.