ADVERTISEMENT

ಜಲ ಮಾಲಿನ್ಯ: ಮೀನು ತುಟ್ಟಿ

ವಾರ್ಷಿಕ ರೂ. 61 ಸಾವಿರ ಕೋಟಿ ವರಮಾನ ನಷ್ಟ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2013, 19:59 IST
Last Updated 9 ಆಗಸ್ಟ್ 2013, 19:59 IST

ಮುಂಬೈ: ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯಗಳಿಂದ ಜಲ ಮಾಲಿನ್ಯ,  ಅಸಂಘಟಿತ ಚಿಲ್ಲರೆ ಮಾರಾಟ ಇತ್ಯಾದಿ ಕಾರಣಗಳಿಂದ ಕಳೆದ 5 ವರ್ಷಗಳಲ್ಲಿ ಮೀನಿನ ಸಗಟು ಧಾರಣೆ ಶೇ 131ರಷ್ಟು ಹೆಚ್ಚಿದೆ ಎಂದು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘ (ಅಸೋಚಾಂ) ನಡೆಸಿದ ಅಧ್ಯಯನ ತಿಳಿಸಿದೆ.

2008-09ರಲ್ಲಿ ಮೀನಿನ ಬೆಲೆ ಶೇ 126ರಷ್ಟು ಏರಿಕೆಯಾಗಿತ್ತು. 2012-13ರಲ್ಲಿ ಇದು ಶೇ 291ಕ್ಕೆ ಏರಿಕೆ ಕಂಡಿದೆ. ಮೀನುಗಾರಿಕೆ ಕೂಡ ಈ ಅವಧಿಯಲ್ಲಿ ಗಣನೀಯವಾಗಿ ತಗ್ಗಿದ್ದು ಒಟ್ಟಾರೆ ಶೇಖರಣೆ ಕಡಿಮೆಯಾಗಿರುವುದು ಕೂಡ ಬೆಲೆ ಏರಿಕೆಗೆ ಪ್ರಮುಖ ಕಾರಣ ಎಂದು `ಅಸೋಚಾಂ' ವಿಶ್ಲೇಷಿಸಿದೆ.

ಶತಮಾನದಷ್ಟು ಹಳೆಯದಾದ ಮಾರಾಟ ವ್ಯವಸ್ಥೆ, ಡೀಸೆಲ್ ಬೆಲೆ ಏರಿಕೆಯಿಂದ ನಿರ್ವಹಣೆ ವೆಚ್ಚದಲ್ಲಿ ಆಗಿರುವ ಹೆಚ್ಚಳ, ಮೀನುಗಾರಿಕಾ ಪ್ರದೇಶದಲ್ಲಿ ಹೆಚ್ಚುತ್ತಿರುವ ತ್ಯಾಜ್ಯ ಇವೆಲ್ಲವೂ ಮೀನಿನ ಧಾರಣೆ ಹೆಚ್ಚುವಂತೆ ಮಾಡಿವೆ. 2008ರಿಂದ 2013ರ ನಡುವೆ ಮೀನು ಉತ್ಪಾದನೆ ಅರ್ಧದಷ್ಟು ತಗ್ಗಿದೆ.  ಕೆರೆ, ನದಿಗಳಲ್ಲಿ ಹಿಡಿಯಲಾಗುವ ಮೀನಿನ ಬೆಲೆ ಕಳೆದ 5 ವರ್ಷಗಳಲ್ಲಿ ಶೇ 200ರಷ್ಟು ಹೆಚ್ಚಿದರೆ, ಸಮುದ್ರ ಮೀನಿನ ಬೆಲೆ ಶೇ 91ರಷ್ಟು ಹೆಚ್ಚಿದೆ ಎನ್ನುತ್ತಾರೆ `ಅಸೋಚಾಂ' ಪ್ರಧಾನ ಕಾರ್ಯದರ್ಶಿ ಡಿ.ಎಸ್.ರಾವತ್.

ಮೀನು ಹಿಡಿಯುವವರ ಸಂಖ್ಯೆ ಅಥವಾ ಮೀನುಗಾರಿಕೆಯನ್ನೇ ನೆಚ್ಚಿಕೊಂಡು ಜೀವನ ನಡೆಸುತ್ತಿದ್ದ ಕುಟುಂಬಗಳ ಸಂಖ್ಯೆಯೂ ಕಡಿಮೆಯಾಗಿವೆ. ಇದು ಗ್ರಾಹಕರು, ವರ್ತಕರು ಮತ್ತು ಮೀನು ಉದ್ಯಮ ಆಧಾರಿತ ಸರಕುಗಳನ್ನು ಮಾರಾಟ ಮಾಡುವರ ಮೇಲೂ ಪ್ರತಿಕೂಲ ಪರಿಣಾಮ ಬೀರಿವೆ. ಆದರೆ, ಈ ಅವಧಿಯಲ್ಲಿ ಆಗಿರುವ ನಗರೀಕರಣ, ಸೂಪರ್ ಮಾರ್ಕೆಟ್‌ಗಳ ವಿಸ್ತರಣೆ, ಆಹಾರ ಶೈಲಿಯಲ್ಲಿ ಆಗಿರುವ ವ್ಯತ್ಯಾಸ ಇತ್ಯಾದಿ ಕಾರಣಗಳಿಂದ ಮೀನು ಖಾದ್ಯಗಳಿಗೆ ಬೇಡಿಕೆ ಹೆಚ್ಚಿದೆ. ಶೈತ್ಯಾಗಾರಗಳ ಕೊರತೆ,  ಅವೈಜ್ಞಾನಿಕ ಮೀನು ಕೃಷಿ, ಪ್ಯಾಕೇಜಿಂಗ್, ಸಾಂಪ್ರದಾಯಿಕ ಮೀನುಗಾರಿಕೆ ಇತ್ಯಾದಿ ಕಾರಣಗಳಿಂದ ಬೇಡಿಕೆ ಪೂರೈಸುವಷ್ಟು ಮೀನು ಸಿಗುತ್ತಿಲ್ಲ ಎಂದೂ `ಅಸೋಚಾಂ' ವಿವರಿಸಿದೆ.

ಮೀನು ಹಿಡಿದ ನಂತರ ಅದರ ಸಂಗ್ರಹಣೆ ಮತ್ತು ನಿರ್ವಹಣೆ ಕೊರತೆಯಿಂದ  ಶೇ 25ರಷ್ಟು ಉತ್ಪನ್ನ ತ್ಯಾಜ್ಯವಾಗಿ ಪೋಲಾಗುತ್ತಿದೆ.  ಇದರಿಂದ ಮೀನುಗಾರರಿಗೆ ವಾರ್ಷಿಕ ರೂ.15 ಸಾವಿರ ಕೋಟಿ ವರಮಾನ ನಷ್ಟವಾಗುತ್ತಿದೆ ಎಂದೂ ಈ ಅಧ್ಯಯನ ತಿಳಿಸಿದೆ. ಅವೈಜ್ಞಾನಿಕ ವಿಧಾನಗಳಿಂದ ಸಮುದ್ರ ಮೀನುಗಾರಿಕೆಗೆ ವಾರ್ಷಿಕ ರೂ.61 ಸಾವಿರ ಕೋಟಿಯಷ್ಟು ನಷ್ಟವಾಗುತ್ತಿದೆ ಎಂದೂ `ಅಸೋಚಾಂ' ಅಂದಾಜು ಮಾಡಿದೆ.

ಶೈತ್ಯಾಗಾರಗಳ ನಿರ್ಮಾಣ, ಮೂಲಸೌಕರ್ಯ ಅಭಿವೃದ್ಧಿ, ಸರ್ಕಾರಿ-ಖಾಸಗಿ ಸಹಭಾಗಿತ್ವ, ಪರಿಸರ ಸ್ನೇಹಿ ಕ್ರಮಗಳು, ಮೀನಿನ ಮೌಲ್ಯವರ್ಧಿತ ಉತ್ಪನ್ನಗಳ ಮಾರುಕಟ್ಟೆ ವಿಸ್ತರಣೆ  ಮತ್ತು ಜಲ ಮಾಲಿನ್ಯ ತಪ್ಪಿಸುವ ಮೂಲಕ ದೇಶದ ಮತ್ಸ್ಯೋದ್ಯಮಕ್ಕೆ ಚೇತರಿಕೆ ನೀಡಬಹುದು ಎಂದು `ಅಸೋಚಾಂ' ಸಲಹೆ ನೀಡಿದೆ.

ಸದ್ಯ ಮೀನುಗಾರಿಕೆಯಲ್ಲಿ ಭಾರತ ಪ್ರಪಂಚದಲ್ಲಿಯೇ ಎರಡನೆಯ ಸ್ಥಾನದಲ್ಲಿದೆ. ಒಟ್ಟಾರೆ ಜಾಗತಿಕ ಮೀನಿನ ಉತ್ಪಾದನೆಗೆ ದೇಶದ ಪಾಲು ಶೇ6ರಷ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.