ADVERTISEMENT

ಜಾಗತಿಕ ಸಂಗತಿಗಳ ಪ್ರಭಾವ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2011, 19:30 IST
Last Updated 9 ಅಕ್ಟೋಬರ್ 2011, 19:30 IST

ನವದೆಹಲಿ (ಪಿಟಿಐ): ಪ್ರಸಕ್ತ ಹಣಕಾಸು ವರ್ಷದ ಎರಡನೆಯ ತ್ರೈಮಾಸಿಕ ಅವಧಿಯ ಫಲಿತಾಂಶದ ನಿರೀಕ್ಷೆಯಲ್ಲಿರುವ ಮುಂಬೈ ಷೇರು ಪೇಟೆ ಸಂವೇದಿ ಸೂಚ್ಯಂಕವು ಈ ವಾರ ಜಾಗತಿಕ ಸಂಗತಿಗಳಿಂದಲೂ ತೀವ್ರ ಪ್ರಭಾವಕ್ಕೆ ಒಳಗಾಗಲಿದೆ ಎಂದು ತಜ್ಞರು ಹೇಳಿದ್ದಾರೆ.

ಐಟಿ ದಿಗ್ಗಜ ಕಂಪೆನಿ ಇನ್ಫೋಸಿಸ್ ಇದೇ 12ರಂದು ಎರಡನೆಯ ತ್ರೈಮಾಸಿಕ ಅವಧಿಯ ಹಣಕಾಸು ಸಾಧನೆ ಪ್ರಕಟಿಸಲಿದೆ. ಈಗಾಗಲೇ ಬಹುತೇಕ ಕಾರ್ಪೊರೇಟ್ ಕಂಪನಿಗಳ ವಾರ್ಷಿಕ ಸಾಮಾನ್ಯ ಸಭೆ ಮುಗಿದಿದ್ದು, ಫಲಿತಾಂಶ ಪ್ರಕಟಿಸುವುದು ಮಾತ್ರ ಬಾಕಿ ಉಳಿದಿದೆ.

ಕಳೆದ ವಾರಾಂತ್ಯದಲ್ಲಿ ಆಹಾರ ಹಣದುಬ್ಬರ ದರ ಮತ್ತೆ ಏರಿರುವುದು ಮತ್ತು ಕೈಗಾರಿಕಾ ಬೆಳವಣಿಗೆ  ಕುಸಿದಿರುವುದು  ಕೂಡ ವಹಿವಾಟಿನ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆಗಳಿವೆ. ಈ ವಾರ ಅಷ್ಟೊಂದು ಉತ್ಸಾಹಿ ಚಟುವಟಿಕೆಗಳು ದಾಖಲಾಗುವ ವಾತಾವರಣ ಇಲ್ಲ ಎಂದು `ಯೂನಿಕಾನ್ ಫೈನಾನ್ಶಿಯಲ್ ಸಲ್ಯೂಷನ್ಸ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಜೇಂದ್ರ ನಾಗ್‌ಪಾಲ್ ಅಭಿಪ್ರಾಯಪಟ್ಟಿದ್ದಾರೆ. 

ಸದ್ಯದ ಪರಿಸ್ಥಿತಿಯಲ್ಲಿ ಅಂತರರಾಷ್ಟ್ರೀಯ ಚಿತ್ರಣವೂ ವಹಿವಾಟಿಗೆ ಪೂರಕವಾಗಿಲ್ಲ. ಅಮೆರಿಕ ಮತ್ತು ಯೂರೋಪ್ ಒಕ್ಕೂಟದಲ್ಲಿ ಸಾಲದ ಬಿಕ್ಕಟ್ಟು ಮುಂದುವರೆದಿದೆ. ಹೊಸ ಉದ್ಯೋಗಾವಕಾಶಕಗಳ ಸೃಷ್ಟಿಯಲ್ಲಿ ಅಮೆರಿಕ ಹಿಂದೆ ಬಿದ್ದಿರುವುದು ಕೂಡ ಜಾಗತಿಕ ಷೇರುಪೇಟೆಗಳ ಮೇಲೆ ಒತ್ತಡ ಹೆಚ್ಚಿಸಿದೆ.

ಅಮೆರಿಕದ ನಿರುದ್ಯೋಗ ದರ ಸೆಪ್ಟೆಂಬರ್ ಅಂತ್ಯಕ್ಕೆ ಶೇ 9.1ರಷ್ಟಾಗಿದೆ. ಈ ಹಿನ್ನೆಲೆಯಲ್ಲಿ, ಸೋಮವಾರ ಜಾಗತಿಕ ಪೇಟೆಗಳ ಚಟುವಟಿಕೆ ಆಧರಿಸಿ ಮುಂಬೈ ಷೇರುಪೇಟೆ ವಹಿವಾಟು ನಿರ್ಧಾರವಾಗುತ್ತದೆ ಎಂದು  ಆಶಿಕ್ ಷೇರು ದಲ್ಲಾಳಿ ಸಂಸ್ಥೆಯ ಮುಖ್ಯಸ್ಥ ಪರಾಸ್ ಬೋಥ್ರ ಹೇಳಿದ್ದಾರೆ.

ಕಳೆದ ಶುಕ್ರವಾರ ಸೂಚ್ಯಂಕ 440 ಅಂಶಗಳಷ್ಟು ಚೇತರಿಕೆ ಕಂಡಿದ್ದರೂ, ಒಟ್ಟಾರೆ ವಾರದ ವಹಿವಾಟಿನಲ್ಲಿ 221 ಅಂಶಗಳಷ್ಟು ಇಳಿಕೆ ದಾಖಲಿಸಿದೆ.  ಜಾಗತಿಕ ಆರ್ಥಿಕ ಅಸ್ಥಿರತೆಯ ಜತೆಗೆ, ಭಾರತೀಯ ಸ್ಟೇಟ್ ಬ್ಯಾಂಕ್‌ನ (ಎಸ್‌ಬಿಐ) ಸಾಲ ಸಾಮರ್ಥ್ಯವನ್ನು `ಮೂಡೀಸ್~ ತಗ್ಗಿಸಿರುವುದು ಕೂಡ ವಹಿವಾಟು ಹಿನ್ನಡೆಗೆ ಕಾರಣವಾಗಿದೆ.

ಈ ಎಲ್ಲ ಸಂಗತಿಗಳ ಒತ್ತಡಗಳ ನಡುವೆ ಮುಂಬೈ ಷೇರು ಪೇಟೆ ಕಾರ್ಪೊರೇಟ್ ಫಲಿತಾಂಶಗಳತ್ತ ಕಣ್ಣು ನೆಟ್ಟು ಕುಳಿತಿದೆ. ಸದ್ಯದ ಪರಿಸ್ಥಿತಿಯಲ್ಲಿ ಈ ಅಂಶ ಮಾತ್ರ ಪೇಟೆಗೆ ಚೇತರಿಕೆ ನೀಡಬಲ್ಲದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.