ADVERTISEMENT

ಜಿಡಿಪಿ ಇಳಿಕೆಗೆ ಹಲವು ಕಾರಣ

ಪಿಟಿಐ
Published 1 ಜೂನ್ 2017, 19:30 IST
Last Updated 1 ಜೂನ್ 2017, 19:30 IST
ಜಿಡಿಪಿ ಇಳಿಕೆಗೆ ಹಲವು ಕಾರಣ
ಜಿಡಿಪಿ ಇಳಿಕೆಗೆ ಹಲವು ಕಾರಣ   

ನವದೆಹಲಿ: ‘2016–17ನೇ ಆರ್ಥಿಕ ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಜಿಡಿಪಿ ಪ್ರಗತಿ ಶೇ 6.1ಕ್ಕೆ ಕುಸಿತ ಕಾಣಲು ನೋಟು ರದ್ದತಿಯೊಂದೇ ಕಾರಣ ಅಲ್ಲ.  ಇತರ ಹಲವಾರು ವಿದ್ಯಮಾನಗಳೂ ಪ್ರಭಾವ ಬೀರಿವೆ’ ಎಂದು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಹೇಳಿದ್ದಾರೆ.

‘ನವೆಂಬರ್‌ 8ರಂದು ನೋಟು ರದ್ದತಿ ಘೋಷಿಸುವುದಕ್ಕೂ ಮುನ್ನವೇ ಜಿಡಿಪಿ ಪ್ರಗತಿ ಇಳಿಮುಖವಾಗಿತ್ತು. ಶೇ 7 ರಿಂದ 8ರಷ್ಟು ಪ್ರಗತಿ ಉತ್ತಮ ಮಟ್ಟದ್ದಾಗಿದೆ. ಇದು ಜಾಗತಿಕ ಮಾನದಂಡದ ದೃಷ್ಟಿಯಿಂದಲೂ ಉತ್ತಮವಾಗಿಯೇ ಇದೆ’ ಎಂದು ಅವರು ವಿವರಿಸಿದ್ದಾರೆ.

ಕೇಂದ್ರ ಸರ್ಕಾರದ ಮೂರು ವರ್ಷಗಳ ಸಾಧನೆಯ ಕುರಿತು ಏರ್ಪಡಿಸಿದ್ದ  ಸುದ್ದಿಗೋಷ್ಠಿಯಲ್ಲಿ ಜಿಡಿಪಿ ಪ್ರಗತಿ ಬಗ್ಗೆ ಅವರು ಮಾತನಾಡಿದ್ದಾರೆ.

ADVERTISEMENT

ಕೇಂದ್ರೀಯ ಅಂಕಿ–ಅಂಶ ಕಚೇರಿ  ಬುಧವಾರ ಜಿಡಿಪಿ ಪ್ರಗತಿ ಮಾಹಿತಿ ಬಿಡುಗಡೆ ಮಾಡಿದ್ದು, 2016–17ರ ನಾಲ್ಕನೇ ತ್ರೈಮಾಸಿಕದಲ್ಲಿ ಶೇ 6.1ಕ್ಕೆ ಮತ್ತು 2016–17ರ ಆರ್ಥಿಕ ವರ್ಷದಲ್ಲಿ ಶೇ 7.1ಕ್ಕೆ ಇಳಿಕೆ ಕಂಡಿದೆ.

ಬಹುದೊಡ್ಡ ಸವಾಲು: ‘ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ವಸೂಲಿಯಾಗದ ಸಾಲ ಹೆಚ್ಚುತ್ತಿರುವುದು ಮತ್ತು ಖಾಸಗಿ ಹೂಡಿಕೆ ಪ್ರಮಾಣ ಹೆಚ್ಚಿಸುವಂತೆ ಮಾಡುವುದು ಬಹು ದೊಡ್ಡ ಸವಾಲಾಗಿದೆ ಎಂದು ಜೇಟ್ಲಿ ಹೇಳಿದ್ದಾರೆ.

  ಎನ್‌ಪಿಎ  ಪ್ರಮಾಣ ತಗ್ಗಿಸಲು ಶೀಘ್ರವೇ ಪರಿಣಾಮಕಾರಿಯಾದ ಕ್ರಮ ಕೈಗೊಳ್ಳಲಾಗುವುದು’ ಎಂದೂ ಜೇಟ್ಲಿ ತಿಳಿಸಿದ್ದಾರೆ.

‘1949ರ ಬ್ಯಾಂಕಿಂಗ್‌ ನಿಯಂತ್ರಣ ಕಾಯ್ದೆಗೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ   ತರಲಾಗಿದೆ. ಈ ಮೂಲಕ ‘ಎನ್‌ಪಿಎ’ಗೆ ಕಡಿವಾಣ ಹಾಕುವ   ಕಾರ್ಯ ಪ್ರಗತಿಯಲ್ಲಿದೆ’ ಎಂದಿದ್ದಾರೆ.

‘ಎನ್‌ಪಿಎ ತಗ್ಗಿಸಲು ಆರ್‌ಬಿಐಗೆ  ಹೆಚ್ಚಿನ ಅಧಿಕಾರ ನೀಡಲಾಗಿದೆ. ಆರ್‌ಬಿಐ ತನ್ನದೇ ಆದ ಮಾರ್ಗಗಳನ್ನು ಅನುಸರಿಸುತ್ತಿದೆ. ಆದರೆ, ಸರ್ಕಾರ   ಪರಿಣಾಮ ಗೋಚರಿಸುವಂತಹ ಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಿದೆ’ ಎಂದು ತಿಳಿಸಿದ್ದಾರೆ. 2016–17ರ ಏಪ್ರಿಲ್‌-ಡಿಸೆಂಬರ್‌ ಅವಧಿಯಲ್ಲಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಎನ್‌ಪಿಎ ₹6.06 ಲಕ್ಷ ಕೋಟಿಗಳಷ್ಟು ದಾಖಲಾಗಿದೆ. ಏರ್‌ಇಂಡಿಯಾ ಖಾಸಗೀಕರಣಗೊಳಿಸುವಂತೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ‘ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯದ ಮುಂದೆ ಹಲವು ಆಯ್ಕೆಗಳಿವೆ’ ಎಂದಷ್ಟೇ ಪ್ರತಿಕ್ರಿಯೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.