ADVERTISEMENT

ತಗ್ಗಿದ ಸಾಗರೋತ್ತರ ಹೂಡಿಕೆ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2012, 19:30 IST
Last Updated 15 ಆಗಸ್ಟ್ 2012, 19:30 IST

ಮುಂಬೈ(ಪಿಟಿಐ): ಭಾರತೀಯ ಕಂಪೆನಿಗಳ ಸಾಗರೋತ್ತರ ನೇರ ಬಂಡವಾಳ ಹೂಡಿಕೆ(ಎಫ್‌ಡಿಐ) ಜುಲೈನಲ್ಲಿ 12.30 ಲಕ್ಷ ಡಾಲರ್‌ನಷ್ಟು (ರೂ.6.76 ಕೋಟಿ) ತಗ್ಗಿದೆ.

ಜೂನ್‌ನಲ್ಲಿ 3.53 ಕೋಟಿ ಡಾಲರ್‌ನಷ್ಟು (ರೂ.194.15 ಕೋಟಿ) ಹೂಡಿಕೆ ಆಗಿದ್ದಿತು. ಆದರೆ, ಇದೇ ಅವಧಿಯಲ್ಲಿ ಸಾಲ ಆಧಾರಿತ ಹೂಡಿಕೆ 34.10 ಕೋಟಿ ಡಾಲರ್‌ಗೆ (ರೂ.1875 ಕೋಟಿ) ಏರಿದೆ. ಜಿಎಸ್‌ಡಬ್ಲ್ಯು ಸ್ಟೀಲ್, ಭಾರ್ತಿ ಏರ್‌ಟೆಲ್, ಗ್ಲೋಬಲ್ ಗ್ರೀನ್, ರೆಲಿಗೇರ್, ರಿಲಯನ್ಸ್, ಸ್ಪೈಸ್ ಇನ್ವೆಸ್ಟ್ ಸೇರಿದಂತೆ ಹಲವು ಪ್ರಮುಖ ಕಂಪೆನಿಗಳು ಜುಲೈನಲ್ಲಿ ಗರಿಷ್ಠ ಹೂಡಿಕೆ ಮಾಡಿವೆ ಎಂದು `ಆರ್‌ಬಿಐ~ ಹೇಳಿದೆ.

ದೇಶೀಯ ಮಾರುಕಟ್ಟೆಯಲ್ಲೇ ಹೆಚ್ಚಿನ ಬಂಡವಾಳ ತೊಡಗಿಸಲು ಕಂಪೆನಿಗಳು ಮುಂದಾಗುತ್ತಿರುವುದು ಸಾಗರೋತ್ತರ ಹೂಡಿಕೆ ತಗ್ಗಲು ಪ್ರಮುಖ ಕಾರಣ ಎಂದು ಭಾರತೀಯ ವಿದೇಶಿ ವ್ಯಾಪಾರ ಸಂಸ್ಥೆ ನಿರ್ದೇಶಕ ಕೆ.ಟಿ.ಚಾಕೊ ಇಲ್ಲಿ ಸುದ್ದಿಗಾರರಿಗೆ ಬುಧವಾರ ತಿಳಿಸಿದರು.

`ಜೆಎಸ್‌ಡಬ್ಲ್ಯು~ ಸ್ಟೀಲ್ ತನ್ನ ಅಂಗ ಸಂಸ್ಥೆಗಳ ಮೂಲಕ ಮಾರಿಷಸ್, ನೆದರ್‌ಲೆಂಡ್‌ನಲ್ಲಿ ತಯಾರಿಕೆ ಮತ್ತು ಸಗಟು ವಲಯದಲ್ಲಿ 16.34 ಕೋಟಿ ಡಾಲರ್‌ನಷ್ಟು (ರೂ.898.70 ಕೋಟಿ) ಹೂಡಿಕೆ ಮಾಡಿದೆ. ಭಾರ್ತಿ ಏರ್‌ಟೆಲ್ ಮಾರಿಷಸ್‌ನಲ್ಲಿನ ಘಟಕದ ಮೂಲಕ ಸಂವಹನ  ಕ್ಷೇತ್ರದಲ್ಲಿ 15 ಕೋಟಿ ಡಾಲರ್ (ರೂ.825 ಕೋಟಿ) ಮತ್ತು ಟಾಟಾ ಸ್ಟೀಲ್ ಸಿಂಗಪುರದಲ್ಲಿ ರಿಯಲ್ ಎಸ್ಟೇಟ್, ಹಣಕಾಸು ಮತ್ತು ವಿಮಾ ಕ್ಷೇತ್ರದಲ್ಲಿ 9.68 ಕೋಟಿ ಡಾಲರ್ (ರೂ.532.40 ಕೋಟಿ) ಹೂಡಿಕೆ ಮಾಡಿದೆ.

ಸಗಟು ಮತ್ತು ಚಿಲ್ಲರೆ ವಹಿವಾಟು ವಲಯದ ಗ್ಲೋಬಲ್ ಗ್ರೀನ್ ಸಂಸ್ಥೆ ಜಂಟಿ ಪಾಲುದಾರಿಕೆ ಮೂಲಕ ಬೆಲ್ಜಿಯಂನಲ್ಲಿ 7.07 ಕೋಟಿ ಡಾಲರ್ (ರೂ.388.85 ಕೋಟಿ) ಹೂಡಿಕೆ ಮಾಡಿದೆ. ರೆಲಿಗೇರ್ ಕ್ಯಾಪಿಟಲ್ ಮಾರ್ಕೆಟ್ 6.41 ಕೋಟಿ ಡಾಲರ್ (ರೂ.352.55 ಕೋಟಿ) ಮತ್ತು ರಿಲಯನ್ಸ್ ಇಂಡಸ್ಟ್ರೀಸ್ 4.52 ಕೋಟಿ ಡಾಲರ್ (ರೂ.248.60 ಕೋಟಿ) ಸಾಗರೋತ್ತರ ಹೂಡಿಕೆ ಮಾಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT