ADVERTISEMENT

ತೀವ್ರ ಏರಿಳಿತ ನಿರೀಕ್ಷೆ?

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2011, 19:30 IST
Last Updated 2 ಅಕ್ಟೋಬರ್ 2011, 19:30 IST

ನವದೆಹಲಿ (ಪಿಟಿಐ): ಯೂರೋಪ್‌ಒಕ್ಕೂಟದ ಸಾಲದ ಬಿಕ್ಕಟ್ಟು ಮತ್ತು  ಮಂದಗತಿಯಲ್ಲಿರುವ ಅಮೆರಿಕದ ಆರ್ಥಿಕ ಪುನಶ್ಚೇತನ  ಜಾಗತಿಕ ಷೇರುಪೇಟೆಗಳ ಮೇಲೆ ಒತ್ತಡ ಹೆಚ್ಚಿಸಿದೆ. ದೇಶೀಯ ಮಾರುಕಟ್ಟೆಯಲ್ಲಿ ಗರಿಷ್ಠ ಬಡ್ಡಿ ದರದಿಂದ ಕಾರ್ಪೊರೇಟ್ ಕಂಪೆನಿಗಳ ವರಮಾನ ಕುಸಿಯುವ ನಿರೀಕ್ಷೆಯೂ ಇದೆ.
 
ಶೀಘ್ರದಲ್ಲೇ ಕಾರ್ಪೊರೇಟ್ ಕಂಪೆನಿಗಳು ಪ್ರಸಕ್ತ ಹಣಕಾಸು ವರ್ಷದ ಎರಡನೆಯ ತ್ರೈಮಾಸಿಕ ಅವಧಿಯ ಹಣಕಾಸು ಸಾಧನೆ ಪ್ರಕಟಿಸಲಿವೆ. ಈ ಎಲ್ಲ ಸಂಗತಿಗಳನ್ನು ಆಧರಿಸಿ ಈ ವಾರದ ಪೇಟೆ ವಹಿವಾಟು ನಿರ್ಧಾರವಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 

   ತ್ರೈಮಾಸಿಕ ಫಲಿತಾಂಶ ಅವಧಿ ಮತ್ತೊಮ್ಮೆ ಬಂದಿದೆ. ಸದ್ಯದ ಪರಿಸ್ಥಿತಿಯಲ್ಲಿ ಪೇಟೆ ತೀವ್ರ ಏರಿಳಿತ ಕಾಣುತ್ತಿದ್ದು, ಹೆಚ್ಚಿನ ಒತ್ತಡವನ್ನು ಎದುರಿಸಬೇಕಾಗಿದೆ. ಕಾರ್ಪೊರೇಟ್ ಕಂಪೆನಿಗಳ ಹಣಕಾಸು ಸಾಧನೆ, ತಿಂಗಳ ಕೈಗಾರಿಕೆ ಮತ್ತು ವಾಹನ ಮಾರಾಟ ಪ್ರಗತಿ, ಹಣದುಬ್ಬರ ದರ, ಆರ್‌ಬಿಐ ಹಣಕಾಸು ಪರಾಮರ್ಶೆ ಹೀಗೆ ಅನೇಕ ಸಂಗತಿಗಳು ವಹಿವಾಟಿನ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರಬಹುದು ಎಂದು  `ಐಐಎಫ್‌ಎಲ್~ನ ಮುಖ್ಯಸ್ಥ ಅಮರ್ ಅಂಬಾನಿ ಅಭಿಪ್ರಾಯಪಟ್ಟಿದ್ದಾರೆ. 

 ಅಮೆರಿಕದ ಕೈಗಾರಿಕಾ ಸರಾಸರಿ ಡೋವ್‌ಜೋನ್ಸ್ ಕಳೆದ ವಾರಾಂತ್ಯದಲ್ಲಿ  ಶೇ 2.16ರಷ್ಟು ಕುಸಿತ ಕಂಡಿದೆ. ಕಳೆದ ವಾರ ಮುಂಬೈಷೇರು ಪೇಟೆ ಸಂವೇದಿ ಸೂಚ್ಯಂಕ ಒಟ್ಟಾರೆ 291 ಅಂಶಗಳಷ್ಟು ಚೇತರಿಸಿಕೊಂಡರೂ, ಹೂಡಿಕೆದಾರರ ಆತ್ಮವಿಶ್ವಾಸ ಮರಳಿ ಪಡೆಯುವಲ್ಲಿ ವಿಫಲವಾಗಿದೆ. ವಿದೇಶಿ ವಿತ್ತೀಯ ಚಟುವಟಿಕೆ ಹೆಚ್ಚಿರುವುದೂ ಕೂಡ ಪೇಟೆ ಏರಿಳಿತಗಳಿಗೆ ಕಾರಣವಾಗಬಹುದು ಎಂದು ಜಿಯೋಜಿತ್ ಸಂಶೋಧನಾ ತಂಡದ ಮುಖ್ಯಸ್ಥ ಅಲೆ ಕ್ಸ್ ಮಾಥ್ಯೂಸ್ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.