ನವದೆಹಲಿ (ಪಿಟಿಐ): ಮುಂಬೈ, ದೆಹಲಿ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿರುವ ಚಿನ್ನಾಭರಣ ವರ್ತಕರು ಶನಿವಾರ, ಬಜೆಟ್‌ನಲ್ಲಿ ಚಿನ್ನದ ಆಮದು ಶುಲ್ಕ ಹೆಚ್ಚಿಸಿರುವ ಕ್ರಮವನ್ನು ವಿರೋಧಿಸಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆ ಅಂಗವಾಗಿ ಮೂರು ದಿನಗಳ ಕಾಲ ವಹಿವಾಟು ಸ್ಥಗಿತಗೊಳಿಸಲು ವರ್ತಕ ಸಂಘಟನೆಗಳು ನಿರ್ಧರಿಸಿವೆ.
ಸ್ಟಾಂಡರ್ಡ್ ಅಲ್ಲದ ಚಿನ್ನಾಭರಣಗಳ ಮೇಲಿನ ತೆರಿಗೆಯನ್ನು ಸದ್ಯದ ಶೇ 5ರಿಂದ ಶೇ 10ಕ್ಕೆ ಹೆಚ್ಚಿಸಲಾಗಿದೆ. ಇದರಿಂದ ಚಿಲ್ಲರೆ ವ್ಯಾಪಾರಿಗಳ ಮೇಲೆ ತೀವ್ರ ಪರಿಣಾಮ ಬೀರಲಿದೆ ಎಂದು ಅಖಿಲ ಭಾರತ ಚಿನ್ನಾಭರಣ ವರ್ತಕರ ಒಕ್ಕೂಟದ ಅಧ್ಯಕ್ಷ ಶೀಲ ಚಾಂದ್ ಜೈನ್ ಹೇಳಿದ್ದಾರೆ.
ಬಜೆಟ್‌ನಲ್ಲಿ ಚಿನ್ನದ ಆಮದು ಶುಲ್ಕ ಹೆಚ್ಚಿಸಿರುವುದನ್ನು ಹಿಂದಕ್ಕೆ ಪಡೆಯಬೇಕು ಎಂದು ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರಿಗೆ ಪತ್ರ ಬರೆದು ಆಗ್ರಹಿಸಲಾಗಿದೆ. ಸರ್ಕಾರದ ಈ ಕ್ರಮದಿಂದ ಚಿನ್ನದ ಕಳ್ಳಸಾಗಾಣಿಕೆ, ಅಕ್ರಮ ವಹಿವಾಟು ಹೆಚ್ಚುವ ಸಾಧ್ಯತೆ ಇದೆ. ಗ್ರಾಹಕರು ಮತ್ತು ವರ್ತಕರ ಹಿತಾಸಕ್ತಿಯಿಂದ ತೆರಿಗೆ ಹೆಚ್ಚಳವನ್ನು ಕೈಬಿಡಬೇಕು ಎಂದು ಚಾಂದ್ ಆಗ್ರಹಿಸಿದ್ದಾರೆ.
ಶುಕ್ರವಾರ ಮಂಡಿಸಲಾದ ಬಜೆಟ್‌ನಲ್ಲಿ 99.5 ಶುದ್ಧತೆ ಹೊಂದಿರುವ ಸ್ಟಾಂಡರ್ಡ್ ಚಿನ್ನದ ಗಟ್ಟಿ, ನಾಣ್ಯ ಮತ್ತು ಪ್ಲಾಟಿನಂ ಆಭರಣಗಳ ಮೇಲಿನ ಪ್ರಾಥಮಿಕ ಸೀಮಾ ಸುಂಕವನ್ನು ಶೇ 2ರಿಂದ ಶೇ 4ಕ್ಕೆ ಹೆಚ್ಚಿಸಲಾಗಿತ್ತು.
ಅಬಕಾರಿ ಮತ್ತು ಸೀಮಾ ಸುಂಕವನ್ನು ವರ್ತಕರು ಗ್ರಾಹಕರ ಮೇಲೆ ವರ್ಗಾಯಿಸುತ್ತಾರೆ. ಇದರಿಂದ ಗ್ರಾಹಕರಿಗೆ ಹೆಚ್ಚಿನ ಹೊರೆ ಬೀಳುತ್ತದೆ ಎಂದು ಚಾಂದ್ ಅಭಿಪ್ರಾಯಪಟ್ಟಿದ್ದಾರೆ.
ಬ್ರಾಂಡೆಡ್ ಅಲ್ಲದ ಚಿನ್ನಾಭರಣಗಳೂ ಸದ್ಯ ಶೇ1ರಷ್ಟು ಎಕ್ಸೈಜ್ ತೆರಿಗೆ ವ್ಯಾಪ್ತಿಯಲ್ಲಿವೆ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.