ಮುಂಬೈ(ಪಿಟಿಐ): ಹಣಕಾಸು ನೀತಿಯಲ್ಲಿ ಯಾವುದೇ ಬದಲಾವಣೆ ಮಾಡದ ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ), ಬಡ್ಡಿದರ ಮತ್ತು ನಗದು ಮೀಸಲು ಅನುಪಾತವನ್ನು ಯಥಾಸ್ಥಿತಿಯಲ್ಲಿಯೇ ಉಳಿಸಿದೆ.
ಹಣದುಬ್ಬರ ಈಗಲೂ ಮೇಲ್ಮಟ್ಟದಲ್ಲೇ ಇರುವ ಹಿನ್ನೆಲೆಯಲ್ಲಿ ಬಡ್ಡಿದರ ಕಡಿತ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ಇದು ದೇಶದ ಬ್ಯಾಂಕಿಂಗ್ ಮತ್ತು ಉದ್ಯಮ ವಲಯದ ತೀವ್ರ ಅಸಮಾಧಾನಕ್ಕೂ ಕಾರಣವಾಗಿದೆ.
ಬ್ಯಾಂಕ್‌ಗಳಿಗೆ `ಆರ್‌ಬಿಐ' ನೀಡುವ ಸಾಲದ (ರೆಪೊ) ಬಡ್ಡಿದರವನ್ನು ಶೇ 7.25ರ ಮಟ್ಟದಲ್ಲೇ ಉಳಿಸಲಾಗಿದೆ. ಇನ್ನೊಂದೆಡೆ ಬ್ಯಾಂಕ್‌ಗಳು ತಮ್ಮಲ್ಲಿನ ವಹಿವಾಟಿಗೆ ತಕ್ಕಂತೆ ಕಾಯ್ದುಕೊಳ್ಳಬೇಕಿರುವ `ನಗದು ಮೀಸಲು ಅನುಪಾತ'(ಸಿಆರ್‌ಆರ್) ಪ್ರಮಾಣವನ್ನೂ ಈ ಮೊದಲಿನಂತೆ ಶೇ 4ರ ಪ್ರಮಾಣದಲ್ಲೇ ಮುಂದುವರಿಸಲಾಗಿದೆ.
ಮಧ್ಯಂತರ ತ್ರೈಮಾಸಿಕ ಹಣಕಾಸು ಪರಾಮರ್ಶೆ ನೀತಿಯನ್ನು ಇಲ್ಲಿ ಸೋಮವಾರ ಪ್ರಕಟಿಸಿದ `ಆರ್‌ಬಿಐ' ಗವರ್ನರ್ ಡಿ.ಸುಬ್ಬರಾವ್ ಅವರು, ಹಣದುಬ್ಬರ ಈಗಲೂ ಮೇಲ್ಮಟ್ಟದಲ್ಲೇ ಉಳಿದುಕೊಂಡಿದೆ. ರೂಪಾಯಿ ಮೌಲ್ಯವೂ ಕಳವಳಕಾರಿ ಪ್ರಮಾಣದಲ್ಲಿ ಕುಸಿದಿದೆ.
ಇದನ್ನೆಲ್ಲ ಸರಿದೂಗಿಸುವುದು ಕಷ್ಟದ ಸಂಗತಿ. ಅಲ್ಲದೆ, ದೇಶದ ಹೊರಗಿನ ಇತ್ತೀಚಿನ ಕೆಲವು ಬೆಳವಣಿಗೆಗಳೂ ನಮ್ಮ ಈಗಿನ ನಿಲುವಿಗೆ ಕಾರಣವಾಗಿವೆ ಎಂದು ಹೇಳಿದರು.
ಚಿದಂಬರಂ ಬೇಸರ: ಹಣಕಾಸು ನೀತಿಯಲ್ಲಿ ಯಾವುದೇ ಬದಲಾವಣೆ ಆಗದೇ ಇರುವುದಕ್ಕೆ ಬಹಳ ಬೇಸರಗೊಂಡಂತೆ ಕಂಡುಬಂದ ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ, `ಸರ್ಕಾರ ವಿವಿಧ ಹಂತಗಳಲ್ಲಿ ತನ್ನ ಅಭಿಪ್ರಾಯವನ್ನು ಭಾರತೀಯ ರಿಸರ್ವ್ ಬ್ಯಾಂಕ್‌ಗೆ ಮುಟ್ಟಿಸಿದೆ. ಈಗಿನದು ಮಧ್ಯಂತರ ಪರಾಮರ್ಶೆಯಷ್ಟೆ.
ಅಲ್ಲದೆ, `ಆರ್‌ಬಿಐ' ಸ್ವತಂತ್ರ ಸಂಸ್ಥೆಯಾಗಿದೆ. ಇದಕ್ಕಿಂತ ಹೆಚ್ಚಿನದನ್ನೇನೂ ಈ ಸಂದರ್ಭದಲ್ಲಿ ಹೇಳಲಾರೆ' ಎಂದು ಚುಟುಕಾಗಿ ಪ್ರತಿಕ್ರಿಯಿಸಿದರು.ಆರ್‌ಬಿಐ ಕ್ರಮದಿಂದ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಪ್ರಮುಖರೂ ಸಹ ಬೇಸರಗೊಂಡಿದ್ದಾರೆ.
`ಸಾಲ ಬಡ್ಡಿ ಇಳಿಕೆ ಇಲ್ಲ'
ಬಡ್ಡಿದರ ವಿಚಾರದಲ್ಲಿ ಕೇಂದ್ರ ಸರ್ಕಾರದ ಒಡೆತನದ ಬ್ಯಾಂಕ್‌ಗಳೂ `ಆರ್‌ಬಿಐ'ನಂತೆಯೇ ಯಥಾಸ್ಥಿತಿ ಕಾಯ್ದುಕೊಳ್ಳುವ ಸೂಚನೆ ಹೊರಹಾಕಿವೆ.
`ಠೇವಣಿಗಳ ಮೇಲಿನ ವೆಚ್ಚ ಗರಿಷ್ಠ ಪ್ರಮಾಣದಲ್ಲಿಯೇ ಇರುವುದರಿಂದ ಸಾಲಗಳ ಬಡ್ಡಿದರದಲ್ಲಿ ಯಾವುದೇ ಇಳಿಕೆ ಮಾಡುವುದಿಲ್ಲ' ಎಂದು ಬ್ಯಾಂಕ್ ಆಫ್ ಇಂಡಿಯಾ ಅಧ್ಯಕ್ಷ ವಿ.ಆರ್.ಐಯ್ಯರ್ ಹೇಳಿದ್ದಾರೆ.
ಉದ್ಯಮ ವಲಯ ಅಸಮಾಧಾನ
ನವದೆಹಲಿ(ಪಿಟಿಐ): ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ಸೋಮವಾರ ಪ್ರಕಟಿಸಿದ ಹಣಕಾಸು ನೀತಿಯಲ್ಲಿ ಬಡ್ಡಿದರ ಕಡಿತ ಮಾಡದೇ ಇರುವುದಕ್ಕೆ ದೇಶದ ಉದ್ಯಮ ವಲಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
`ಆರ್‌ಬಿಐ ನಡೆ ನಿಜಕ್ಕೂ ಬಹಳ ನಿರಾಶೆ ಉಂಟು ಮಾಡಿದೆ. ವಾಸ್ತವವಾಗಿ ಇದು ಸಾಲ ವಿತರಣೆಯ ಬಡ್ಡಿದರವನ್ನು ಕಡಿಮೆ ಮಾಡಲು ಸೂಕ್ತ ಸಮಯವೇ ಆಗಿತ್ತು. ಈ ಕ್ರಮ ದೇಶದ ಒಟ್ಟಾರೆ ಆರ್ಥಿಕ ಪ್ರಗತಿಯ ದೃಷ್ಟಿಯಿಂದಲೂ ಅತ್ಯಗತ್ಯವಾಗಿತ್ತು' ಎಂದು ಉದ್ಯಮ ವಲಯದ ಪ್ರಾತಿನಿಧಿಕ ಸಂಸ್ಥೆಗಳಾದ `ಸಿಐಐ', `ಅಸೋಚಾಂ', `ಎಫ್‌ಐಸಿಸಿಐ' ಪ್ರತಿಕ್ರಿಯಿಸಿವೆ.
`ಆರ್‌ಬಿಐ' ದೇಶದ ಉದ್ಯಮ ವಲಯ, ಆಮದು-ರಫ್ತು ಕ್ಷೇತ್ರದ ಸಂಕಷ್ಟವನ್ನು ಅರ್ಥ ಮಾಡಿಕೊಳ್ಳಲಿ. ಜುಲೈ 30ರ ತ್ರೈಮಾಸಿಕ ಪರಾಮರ್ಶೆವರೆಗೂ ಕಾಯದೇ ಬಡ್ಡಿದರ ಕಡಿತ ಕ್ರಮವನ್ನು ಶೀಘ್ರವಾಗಿ ಕೈಗೊಳ್ಳಲಿದೆ ಎಂಬ ವಿಶ್ವಾಸ ನಮ್ಮದಾಗಿದೆ' ಎಂದು ಹೇಳಿವೆ.
`ಬಡ್ಡಿದರ ವಿಚಾರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿರುವ ಆರ್‌ಬಿಐ ಕ್ರಮಕ್ಕೆ ಆಮದು-ರಫ್ತು ನಡುವಿನ ಅಂತರ ಹೆಚ್ಚುತ್ತಲೇ ಇರುವುದು, ರೂಪಾಯಿ ಬೆಲೆ ಕುಸಿತ ಮೊದಲಾದ ಅಂಶಗಳ ಕುರಿತ ಕಾಳಜಿಯೇ ಕಾರಣ. ಸದ್ಯ `ಆರ್‌ಬಿಐ'ನದು ಬಹಳ ಎಚ್ಚರಿಕೆಯ ನಡೆಯಾಗಿದೆ' ಎಂದು ಪ್ರಧಾನಮಂತ್ರಿ ಆರ್ಥಿಕ ಸಲಹಾ ಸಮಿತಿ ಅಧ್ಯಕ್ಷ ಸಿ.ರಂಗರಾಜನ್ ಅಭಿಪ್ರಾಯಪಟ್ಟಿದ್ದಾರೆ.
`ಬಹುಶಃ ಪ್ರಸಕ್ತ ಹಣಕಾಸು ವರ್ಷದ ದ್ವಿತೀಯಾರ್ಧದಲ್ಲಿ ಆರ್‌ಬಿಐ ಬಡ್ಡಿದರ ಕಡಿತ ನಿರ್ಧಾರ ಕೈಗೊಳ್ಳಬಹುದು. ಉತ್ತಮ ಮುಂಗಾರು ಬಂದಲ್ಲಿ ಮತ್ತು ರೂಪಾಯಿ ಮೌಲ್ಯ ಹೆಚ್ಚಿಸಿಕೊಂಡು ಸ್ಥಿರತೆ ಕಾಯ್ದುಕೊಂಡಲ್ಲಿ ಆರ್‌ಬಿಐ ಉದಾರ ಕ್ರಮಕ್ಕೆ ಮುಂದಾಗುವ ನಿರೀಕ್ಷೆ ಇದೆ' ಎಂದು ಬ್ಯಾಂಕ್ ಆಫ್ ಬರೋಡಾದ ಮುಖ್ಯ ಅರ್ಥಶಾಸ್ತ್ರಜ್ಞೆ ರೂಪಾ ರೆಗೆ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.