ADVERTISEMENT

ದೂರವಾಣಿ ಕದ್ದಾಲಿಕೆ: ರೂ 2 ಕೋಟಿ ದಂಡ

​ಪ್ರಜಾವಾಣಿ ವಾರ್ತೆ
Published 16 ಜನವರಿ 2011, 16:35 IST
Last Updated 16 ಜನವರಿ 2011, 16:35 IST

ನವದೆಹಲಿ (ಪಿಟಿಐ): ನ್ಯಾಯಸಮ್ಮತವಲ್ಲದ ರೀತಿಯಲ್ಲಿ ದೂರವಾಣಿ ಕರೆಗಳನ್ನು ಕದ್ದಾಲಿಸುವ ಮತ್ತು ಈ ಸಂಭಾಷಣೆಯನ್ನು ಪರವಾನಿಗೆ ಇಲ್ಲದೆ ಬಹಿರಂಗಗೊಳಿಸಿದರೆ ಇನ್ನು ಮುಂದೆ ರೂ 2 ಕೋಟಿವರೆಗೆ ದಂಡ ಕಟ್ಟಬೇಕಾಗುತ್ತದೆ.

ದೂರ ಸಂಪರ್ಕ ಸಚಿವಾಲಯ ದೂರವಾಣಿ ಕದ್ದಾಲಿಕೆ ಪ್ರಕರಣಗಳಿಗೆ ವಿಧಿಸುವ ದಂಡವನ್ನು ರೂ 500 ರಿಂದ  ರೂ 2 ಕೋಟಿಗೆ ಏರಿಸುವ ಪ್ರಸ್ತಾವವನ್ನು ಸರ್ಕಾರದ ಮುಂದಿಟ್ಟಿದೆ.

ಇದಕ್ಕೆ ಸಂಬಂಧಿಸಿದಂತೆ ಪ್ರಧಾನ ಮಂತ್ರಿಗಳ ಕಚೇರಿಗೆ ಅಧಿಕೃತ ಸೂಚನೆ ರವಾಸಿರುವ ದೂರ ಸಂಪರ್ಕ ಇಲಾಖೆ (ಡಾಟ್), 1885ರ ಭಾರತೀಯ ಟೆಲಿಗ್ರಾಫ್  ಕಾಯ್ದೆಯ ವಿವಿಧ ಪರಿಚ್ಛೇದದಡಿ, ದೂರವಾಣಿ ಕದ್ದಾಲಿಕೆ ಪ್ರಕರಣಗಳಿಗೆ ವಿಧಿಸುವ ದಂಡವನ್ನು    ರೂ 1 ಲಕ್ಷದಿಂದ ರೂ 2 ಕೋಟಿಯವರೆಗೆ ಹೆಚ್ಚಿಸಬೇಕು ಎಂದು ಹೇಳಿದೆ.

ADVERTISEMENT

ದೂರಸಂಪರ್ಕ ಅಧಿಕಾರಿಗಳು ನ್ಯಾಯಸಮ್ಮತವಲ್ಲದ ರೀತಿಯಲ್ಲಿ ದೂರವಾಣಿ ಕರೆಗಳನ್ನು ಕದ್ದಾಲಿಸುವುದು, ಇಂತಹ ಸಂಭಾಷಣೆಯನ್ನು ಬಹಿರಂಗಗೊಳಿಸುವುದು, ಮತ್ತು  ಇದಕ್ಕೆ ಸಂಬಂಧಿಸಿದಂತೆ ಸಹಾಯ ಮಾಡುವುದನ್ನು ಟೆಲಿಗ್ರಾಫ್  ಕಾಯ್ದೆಯ 26ನೇ ಪರಿಚ್ಛೇದ ನಿಷೇಧಿಸಿದೆ. ಇಂತಹ ಪ್ರಕರಣಗಳಿಗೆ ಸದ್ಯ ಮೂರು ವರ್ಷಗಳ ಜೈಲು ಮತ್ತು   ರೂ  500 ದಂಡ ಜಾರಿಯಲ್ಲಿದೆ. ಆದರೆ, ಇದಕ್ಕೆ ಗರಿಷ್ಠ ದಂಡ ವಿಧಿಸಬೇಕು ಎಂದು ‘ಡಾಟ್’ ಈಗ ಪ್ರತಿಪಾದಿಸುತ್ತಿದೆ.

ಟೆಲಿಗ್ರಾಫ್ ಕಾಯ್ದೆಯ ಪ್ರಸ್ತಾವಿತ ತಿದ್ದುಪಡಿಗಳು ಶೀಘ್ರದಲ್ಲೇ ಸಂಸತ್ತಿನಲ್ಲಿ ಚರ್ಚೆಗೆ ಬರುವ ಸಾಧ್ಯತೆಗಳಿವೆ. ಸದ್ಯ ಜಾರಿಯಲ್ಲಿ ಇರುವ ‘ಕರೆಗಳ ದತ್ತಾಂಶ ಸಂಗ್ರಹ’ (ಸಿಡಿಆರ್‌ಎಸ್) ನಿಯಮ ಕೂಡ ತಿದ್ದುಪಡಿಗೆ ಒಳಪಡಲಿದೆ. ಈ ತಿದ್ದುಪಡಿಗಳಿಗೆ ಸಂಬಧಿಸಿದಂತೆ ಮುಂಬರುವ ಬಜೆಟ್ ಅಧಿವೇಶನದಲ್ಲಿ ಚರ್ಚೆ ನಡೆದು ನಿರ್ಧಾರ ಪ್ರಕಟಿಸಬೇಕು ಎಂದು ಪ್ರಧಾನಿ ಕಚೇರಿಗೆ ಬರೆಯಲಾಗಿರುವ ಪತ್ರದಲ್ಲಿ ಆಗ್ರಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇತ್ತೀಚೆಗೆ ಕಾರ್ಪೊರೇಟ್ ಮಧ್ಯವರ್ತಿ ನೀರಾ ರಾಡಿಯಾ ಮತ್ತು ಕೆಲವು ಉದ್ಯಮಿಗಳ ನಡುವಿನ ದೂರವಾಣಿ ಸಂಭಾಷಣೆಗಳು ಮಾಧ್ಯಮಗಳಿಗೆ ಸೋರಿಕೆಯಾಗಿ ದೊಡ್ಡ ಸುದ್ದಿಯಾಗಿತ್ತು. ಇದಕ್ಕೆ ಸಂಬಂಧಿಸಿದಂತೆ  ಉದ್ಯಮಿ ರತನ್ ಟಾಟಾ ವ್ಯಕ್ತಿಯ ಖಾಸಗಿತನಕ್ಕೆ ಧಕ್ಕೆಯಾಗಿದೆ ಎಂದು ಸುಪ್ರೀಂಕೋರ್ಟ್‌ಗೂ ಮೊರೆ ಹೋಗಿದ್ದರು.  ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ದೂರಸಂಪರ್ಕ ಇಲಾಖೆ ಕಾಯ್ದೆ ತಿದ್ದುಪಡಿಗೆ ಮುಂದಾಗಿದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.