ADVERTISEMENT

ಪಿಂಚಣಿ ನಿಧಿ: ಶೇ 9.5ರಷ್ಟು ಬಡ್ಡಿ ಪಾವತಿಸಲು ಅಸ್ತು

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2011, 19:30 IST
Last Updated 17 ಮಾರ್ಚ್ 2011, 19:30 IST
ಪಿಂಚಣಿ ನಿಧಿ: ಶೇ 9.5ರಷ್ಟು ಬಡ್ಡಿ ಪಾವತಿಸಲು ಅಸ್ತು
ಪಿಂಚಣಿ ನಿಧಿ: ಶೇ 9.5ರಷ್ಟು ಬಡ್ಡಿ ಪಾವತಿಸಲು ಅಸ್ತು   

ನವದೆಹಲಿ (ಪಿಟಿಐ): ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯ (ಇಪಿಎಫ್‌ಒ) 4.7 ಕೋಟಿಗಳಷ್ಟು ಠೇವಣಿದಾರರಿಗೆ 2010-11ನೇ ಹಣಕಾಸು ವರ್ಷದಲ್ಲಿ ಶೇ 9.5ರಷ್ಟು ಬಡ್ಡಿ ನೀಡಲು ಹಣಕಾಸು ಸಚಿವಾಲಯವು ಸಮ್ಮತಿ ನೀಡಿದೆ.

ಪಿಂಚಣಿ ನಿಧಿ ಠೇವಣಿದಾರರಿಗೆ 2005-06ರಿಂದ ಇದುವರೆಗೆ ಶೇ 8.5ರಷ್ಟು ಬಡ್ಡಿ ಪಾವತಿಸಲಾಗುತ್ತಿದೆ. ಕಳೆದ ಸೆಪ್ಟೆಂಬರ್‌ನಲ್ಲಿ ಈ ಬಡ್ಡಿ ದರವನ್ನು ಶೇ 9.5ಕ್ಕೆ ಹೆಚ್ಚಿಸಲು ಶಿಫಾರಸು ಮಾಡಲಾಗಿತ್ತು. ನಿಧಿಯ ಬಳಿ ರೂ 1,731 ಕೋಟಿಗಳಷ್ಟು ಹೆಚ್ಚುವರಿ ಹಣ ಇರುವುದರಿಂದ ಬಡ್ಡಿ ದರ ಹೆಚ್ಚಿಸುವ ನಿರ್ಧಾರಕ್ಕೆ ಬರಲಾಗಿತ್ತು.

ಆರಂಭದಲ್ಲಿ ಈ ಶಿಫಾರಸಿಗೆ ಹಣಕಾಸು ಸಚಿವಾಲಯವು ಆಕ್ಷೇಪ ದಾಖಲಿಸಿತ್ತು. ಆದರೆ, ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರ ಹಸ್ತಕ್ಷೇಪದ ಫಲವಾಗಿ ಸಮ್ಮತಿ ನೀಡಲು ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.

ಹಣಕಾಸು ಸಚಿವಾಲಯವು ಶೇ 9.5ರಷ್ಟು ಬಡ್ಡಿ ಪಾವತಿಸಲು ಅನುಮೋದನೆ ನೀಡಿರುವ ಅಧಿಸೂಚನೆ ನಮ್ಮ ಕೈಸೇರಿದೆ ಎಂದು ಕೇಂದ್ರೀಯ ಭವಿಷ್ಯ ನಿಧಿ ಆಯುಕ್ತ ಸಮಿರೇಂದ್ರ ಚಟರ್ಜಿ, ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಬಡ್ಡಿ ಅಮಾನತು ಖಾತೆಯಲ್ಲಿ ್ಙ 1,731 ಕೋಟಿಗಳಷ್ಟು ಹೆಚ್ಚುವರಿ ಮೊತ್ತ ಇರುವ ನಮ್ಮ ಲೆಕ್ಕಾಚಾರವು  ಸರಿಯಾಗಿದೆ ಎನ್ನುವ ತೀರ್ಮಾನಕ್ಕೆ  ಬಂದಿರುವ ಹಣಕಾಸು ಸಚಿವಾಲಯವು,  ಗರಿಷ್ಠ ಪ್ರಮಾಣದ ಈ (ಶೇ 9.5) ಬಡ್ಡಿ ದರ ಪಾವತಿಸಲು ಸಮ್ಮತಿಸಿದೆ. ಮುಂದಿನ 6 ತಿಂಗಳಲ್ಲಿ ‘ಇಪಿಎಫ್‌ಒ’ದ ಚಂದಾದಾರರ ಸಂಖ್ಯೆ ನವೀಕರಿಸಲೂ  ಹಣಕಾಸು ಸಚಿವಾಲಯ ಕೇಳಿಕೊಂಡಿದೆ  ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.