ADVERTISEMENT

ಪೇಟೆಯಲ್ಲಿ ಚಂಚಲ ವಹಿವಾಟು

ಪಿಟಿಐ
Published 17 ಮಾರ್ಚ್ 2018, 19:30 IST
Last Updated 17 ಮಾರ್ಚ್ 2018, 19:30 IST
ಪೇಟೆಯಲ್ಲಿ ಚಂಚಲ ವಹಿವಾಟು
ಪೇಟೆಯಲ್ಲಿ ಚಂಚಲ ವಹಿವಾಟು   

ಮುಂಬೈ: ಜಾಗತಿಕ ಮತ್ತು ರಾಜಕೀಯ ವಿದ್ಯಮಾನಗಳ ಪ್ರಭಾವದಿಂದ ಷೇರುಪೇಟೆಗಳಲ್ಲಿ ಚಂಚಲ ವಹಿವಾಟು ನಡೆಯಿತು.

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ವ್ಯಾಪಾರ ನೀತಿಯು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೊಸ ಬಿಕ್ಕಟ್ಟನ್ನು ಸೃಷ್ಟಿಸುವ ಆತಂಕ ಮೂಡಿಸಿದೆ. ಇದು ಜಾಗತಿಕ ಮತ್ತು ದೇಶಿ ಷೇರುಪೇಟೆಗಳಲ್ಲಿ ಸೂಚ್ಯಂಕದ ಇಳಿಕೆಗೆ ಕಾರಣವಾಗುತ್ತಿದೆ ಎಂದು ತಜ್ಞರು ವಿಶ್ಲೇಷಣೆ ಮಾಡಿದ್ದಾರೆ.

ಅಮೆರಿಕದ ಆರ್ಥಿಕತೆಯನ್ನು ಬಲಪಡಿಸುವ ನಿಟ್ಟಿನಲ್ಲಿ ತೆಗೆದುಕೊಳ್ಳುತ್ತಿರುವ ನಿರ್ಧಾರಗಳು ಬೇರೆ ದೇಶಗಳ ವ್ಯಾಪಾರ–ವಹಿವಾಟಿನ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆಯನ್ನು ಹೆಚ್ಚಿಸಿದೆ. ಚೀನಾದಿಂದ ಆಮದಾಗುವ ಉಕ್ಕು ಮತ್ತು ಅಲ್ಯುಮಿನಿಯಂ ಸರಕುಗಳಿಗೆ ಸುಂಕ ಹೆಚ್ಚಿಸಲು ನಿರ್ಧರಿಸಿದೆ.

ADVERTISEMENT

ಭಾರತದ ರಫ್ತು ಉತ್ತೇಜನ ಯೋಜನೆಯ ಬಗ್ಗೆ ಅಮೆರಿಕವು ವಿಶ್ವ ವ್ಯಾಪಾರ ಸಂಘಟನೆಯಲ್ಲಿ (ಡಬ್ಲ್ಯುಟಿಒ) ಆಕ್ಷೇಪ ವ್ಯಕ್ತಪಡಿಸಿದೆ.

ಸದ್ಯದ ಮಟ್ಟಿಗೆ, ಭಾರತದ ಚಿಲ್ಲರೆ ಮತ್ತು ಸಗಟು ಹಣದುಬ್ಬರ, ಕೈಗಾರಿಕಾ ತಯಾರಿಕಾ ಸೂಚ್ಯಂಕ (ಐಐಪಿ) ಸಕಾರಾತ್ಮಕ ಮಟ್ಟದಲ್ಲಿವೆ. ಜಿಡಿಪಿ ಮುನ್ನೋಟವೂ ಉತ್ತಮವಾಗಿದೆ. ಈ ಅಂಶಗಳು ಆರ್ಥಿಕತೆಯ ಚೇತರಿಕೆಯ ಸುಳಿವು ನೀಡುತ್ತಿದ್ದರೂ ಅಮೆರಿಕದ ನಿರ್ಧಾರಗಳು ಹೂಡಿಕೆ ಚಟುವಟಿಕೆಯನ್ನು ತಗ್ಗಿಸುತ್ತಿದೆ.

ಎನ್‌ಡಿಎ ಮೈತ್ರಿಕೂಟದಿಂದ ಟಿಡಿಪಿ ಹೊರಬಂದಿದ್ದು ಸಹ ಚಂಚಲ ವಹಿವಾಟಿಗೆ ಕಾರಣವಾಯಿತು. ಮುಂಬೈ ಷೇರುಪೇಟೆ ಸೂಚ್ಯಂಕ 131 ಅಂಶ ಇಳಿಕೆ ಕಂಡು 33,176 ಅಂಶಗಳಲ್ಲಿ ವಾರದ ವಹಿವಾಟು ಅಂತ್ಯಕಂಡಿದೆ. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 31 ಅಂಶ ಇಳಿಕೆಯಾಗಿ 10,195 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.