ನವದೆಹಲಿ(ಪಿಟಿಐ): ಲೋಕಸಭಾ ಚುನಾವಣೆಗೆ ಸಂಬಂಧಿಸಿದ ಬೆಳವಣಿಗೆಗಳು, ಭಾರತೀಯ ರಿಸರ್ವ್ ಬ್ಯಾಂಕ್‌ನ ಹಣಕಾಸು ನೀತಿ ಪರಾಮರ್ಶೆ ಮತ್ತು ಆರ್ಥಿಕ ಉತ್ತೇಜನ ಕೊಡುಗೆಗಳ ಕಡಿತಕ್ಕೆ ಸಂಬಂಧಿಸಿದಂತೆ ಅಮೆರಿಕದ ‘ಫೆಡರಲ್ ರಿಸರ್ವ್’ ಅನುಸರಿಸುತ್ತಿ ರುವ ಕ್ರಮಗಳು ಈ ವಾರ ಷೇರುಪೇಟೆ ವಹಿವಾಟಿನ ಮೇಲೆ ನಕಾರಾತ್ಮಕ ಪರಿ ಣಾಮ ಬೀರುವ ಸಾಧ್ಯತೆಗಳಿವೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.
‘ಅಮೆರಿಕದ ಸೆಂಟ್ರಲ್ ಬ್ಯಾಂಕ್ 2015ರ ಮಧ್ಯಂತರದಿಂದ ಆರ್ಥಿಕ ಉತ್ತೇಜನ ಕೊಡುಗೆಗಳನ್ನು ಕಡಿತಗೊ ಳಿಸಿ ಬಡ್ಡಿ ದರ ಏರಿಕೆ ಮಾಡಲು ನಿರ್ಧ ರಿಸಿದೆ. ಇದರಿಂದ ಕಳೆದ ವಾರಾಂತ್ಯದಲ್ಲಿ ದೇಶೀಯ ಹಣಕಾಸು ಮಾರುಕಟ್ಟೆಯಲ್ಲಿ ಮತ್ತೆ ಅಸ್ಥಿರತೆ ಮೂಡಿದೆ. ಡಾಲರ್ ವಿರುದ್ಧ ಚೇತರಿಕೆ ಕಂಡಿದ್ದ ರೂಪಾಯಿ ಮೌಲ್ಯ ಮತ್ತೆ ಕುಸಿದಿದೆ. ಈ ಎಲ್ಲ ಅಂಶಗಳು ಈ ವಾರ ಮತ್ತೆ ನಕಾರಾ ತ್ಮಕ ಪರಿಣಾಮ ಬೀರುವ ಸಾಧ್ಯತೆಗಳಿವೆ’ ಎಂದು ಕೋಟಕ್ ಸೆಕ್ಯುರಿಟೀಸ್‌ನ ರಿಟೇಲ್ ವಿಭಾಗದ ಮುಖ್ಯಸ್ಥ ಜಯಂತ್ ಮಂಗ್ಲಿಕ್ ಅಭಿಪ್ರಾಯಪಟ್ಟಿದ್ದಾರೆ.
ಬ್ಯಾಂಕಿಂಗ್, ಎಫ್‌ಎಂಸಿಜಿ, ಐಟಿ ಸೇರಿ ದಂತೆ ಸಣ್ಣ ಮತ್ತು ಮಧ್ಯಮ ಶ್ರೇಣಿಯ ಕಂಪೆನಿಗಳಿಗೆ ಗಳಿಕೆಗೆ ಅವಕಾಶ ಇದೆ. ಆದರೆ, ಏ. 1ಕ್ಕೆ ‘ಆರ್‌ಬಿಐ’ ಹಣಕಾಸು ನೀತಿ ಇರುವುದರಿಂದ ಹೂಡಿಕೆದಾರರು ಖರೀದಿಗಿಂತ ಮಾರಾಟಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾರೆ’ ಎಂದು ಬೊನಾಂಜಾ ಪೋರ್ಟ್‌ಫೋಲಿಯೊ ಸಂಸ್ಥೆ ಉಪಾಧ್ಯಕ್ಷ ರಾಕೇಶ್ ಗೋಯಲ್ ಹೇಳಿದ್ದಾರೆ.
ಕಳೆದ ವಾರದಲ್ಲಿ ಮುಂಬೈ ಷೇರು ಪೇಟೆ(ಬಿಎಸ್‌ಇ) ಸಂವೇದಿ ಸೂಚ್ಯಂಕ ಒಟ್ಟು 54 ಅಂಶಗಳಷ್ಟು ಏರಿಕೆ ಕಂಡು 21,755 ಅಂಶಗಳಿಗೆ ವಹಿವಾಟು ಕೊನೆಗೊಳಿಸಿದೆ. ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ (ಎನ್‌ಎಸ್‌ಇ) ಸೂಚ್ಯಂಕ ‘ನಿಫ್ಟಿ’ 6,494 ಅಂಶಗಳಲ್ಲಿ ವಹಿವಾಟು ಕೊನೆಗೊಳಿಸಿದೆ. ಈ ವಾರ ‘ನಿಫ್ಟಿ’ 6,500 ಅಂಶಗಳನ್ನು ದಾಟುವ ಸಾಧ್ಯತೆ ಇಲ್ಲ. ವಿದೇಶಿ ಸಾಂಸ್ಥಿಕ ಹೂಡಿಕೆ ದಾರರು (ಎಫ್‌ಐಐ) ಪ್ರಸಕ್ತ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕ ಫಲಿ ತಾಂಶಗಳಿಗಾಗಿ ಕಾಯುತ್ತಿದ್ದಾರೆ. ಡಾಲರ್ ವಿರುದ್ಧ ರೂಪಾಯಿ ಮೌಲ್ಯ ವರ್ಧನೆ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಆಧರಿಸಿ ‘ಎಫ್‌ಐಐ’ ವಹಿವಾಟು ಇರು ತ್ತದೆ ಎಂದು ಷೇರು ದಲ್ಲಾಳಿ ಸಂಸ್ಥೆ ಷೇರ್‌ಖಾನ್ ಹೇಳಿದೆ.
‘ಫೆಡರಲ್ ರಿಸರ್ವ್ ಆರ್ಥಿಕ ಉತ್ತೇ ಜನ ಕೊಡುಗೆಯ ಭಾಗವಾಗಿ ನಡೆಸುತ್ತಿರುವ ಸಾಲಪತ್ರಗಳ ಖರೀದಿಯನ್ನು 5500 ಕೋಟಿ ಡಾಲರ್‌ನಿಂದ (ರೂ.3.35 ಲಕ್ಷ ಕೋಟಿ) 1000 ಕೋಟಿ ಡಾಲರ್ ಗಳಿಗೆ (ರೂ.61000 ಕೋಟಿ) ತಗ್ಗಿಸಲು ಕಳೆದ ವಾರದ ಸಭೆಯಲ್ಲಿ ನಿರ್ಧರಿಸಿದೆ. ಇದು ಖಂಡಿತ ಈ ವಾರ ಜಾಗತಿಕ ಷೇರು ಪೇಟೆಗಳ ಮೇಲೆ ಪರಿಣಾಮ ಬೀರಲಿದೆ’ ಎಂದು ವೆರಾಸಿಟಿ ಬ್ರೋಕಿಂಗ್ ಸಂಸ್ಥೆಯ ಮುಖ್ಯಸ್ಥ ಜಗ್ನೇಶ್ ಚೌಧರಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.