ADVERTISEMENT

ಫ್ಲಿಪ್‌ಕಾರ್ಟ್‌ ‘ಐಪಿಒ’ ಸಾಧ್ಯತೆ

ಪಿಟಿಐ
Published 12 ಮೇ 2018, 19:30 IST
Last Updated 12 ಮೇ 2018, 19:30 IST
ಫ್ಲಿಪ್‌ಕಾರ್ಟ್‌ ‘ಐಪಿಒ’ ಸಾಧ್ಯತೆ
ಫ್ಲಿಪ್‌ಕಾರ್ಟ್‌ ‘ಐಪಿಒ’ ಸಾಧ್ಯತೆ   

ನವದೆಹಲಿ: ಅಮೆರಿಕದ ರಿಟೇಲ್‌ ದೈತ್ಯ ವಾಲ್‌ಮಾರ್ಟ್‌ ಇಂಕ್‌ ಸಂಸ್ಥೆಯು ನಾಲ್ಕು ವರ್ಷದೊಳಗೆ ಫ್ಲಿಪ್‌ಕಾರ್ಟ್‌ನ ಐಪಿಒ (ಆರಂಭಿಕ ಸಾರ್ವಜನಿಕ ಕೊಡುಗೆ) ಬಿಡುಗಡೆ ಮಾಡುವ ಸಾಧ್ಯತೆ ಇದೆ.

ಫ್ಲಿಪ್‌ಕಾರ್ಟ್‌ನಲ್ಲಿನ ಶೇ 77ರಷ್ಟು ಪಾಲು ಬಂಡವಾಳವನ್ನು ₹ 1.07 ಲಕ್ಷ ಕೋಟಿಗೆ ಖರೀದಿಸಲಿರುವ ಸಂಸ್ಥೆಯು ಅಮೆರಿಕದ ಸೆಕ್ಯುರಿಟೀಸ್‌ ಆ್ಯಂಡ್‌ ಎಕ್ಸ್‌ಚೇಂಜ್‌ ಕಮಿಷನ್‌ಗೆ ಈ ಮಾಹಿತಿ ನೀಡಿದೆ.

₹ 13,400 ಕೋಟಿಯನ್ನು ನಗದು ರೂಪದಲ್ಲಿ ಹೂಡಿಕೆ ಮಾಡಲಿದ್ದು, ಫ್ಲಿಪ್‌ಕಾರ್ಟ್‌ ಪಾಲುದಾರರಿಂದ ₹ 93,800 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಲಿದೆ. ಫ್ಲಿಪ್‌ಕಾರ್ಟ್‌ ಸ್ವಾಧೀನ ಪಡಿಸಿಕೊಳ್ಳಲು ಗೂಗಲ್‌ನ ಮಾತೃಸಂಸ್ಥೆಯಾಗಿರುವ ಆಲ್ಫಾಬೆಟ್‌ ಜತೆ ಪಾಲುದಾರಿಕೆ ಮಾಡಿಕೊಳ್ಳುವ ಸುದ್ದಿಯೂ ಹರಿದಾಡುತ್ತಿದೆ.

ADVERTISEMENT

ಫ್ಲಿಪ್‌ಕಾರ್ಟ್‌ನಲ್ಲಿ ಶೇ 60 ರಷ್ಟು ಪಾಲು ಹೊಂದಿರುವ ಸಣ್ಣ ಹೂಡಿಕೆದಾರರಿದ್ದಾರೆ. ಅವರಿಗೆ ‘ಐಪಿಒ’ದ ಅಗತ್ಯ ಬೀಳಬಹುದು. ಖರೀದಿ ಒಪ್ಪಂದ ಮುಕ್ತಾಯವಾಗುವ ನಾಲ್ಕನೇ ವರ್ಷದ ವೇಳೆಗೆ ಐಪಿಒ ಬಿಡುಗಡೆ ಆಗುವ ಸಾಧ್ಯತೆ ಇದೆ.

ಐಪಿಒ ಮೊತ್ತವು ಷೇರು ನೀಡಿಕೆ ಒಪ್ಪಂದದಲ್ಲಿ ಸಂಸ್ಥೆಯು ನೀಡುವ ಮೊತ್ತಕ್ಕಿಂತಲೂ ಕಡಿಮೆ ಇರುವುದಿಲ್ಲ ಎಂದು ತಿಳಿಸಿದೆ.

ಐಪಿಒ ಅವಧಿ ಮುಕ್ತಾಯವಾಗುತ್ತಿದ್ದಂತೆಯೇ ಷೇರುದಾರರ ಒಪ್ಪಂದವೂ ಮುಗಿಯಲಿದೆ ಎಂದು ತಿಳಿಸಿದೆ.

ಫ್ಲಿಪ್‌ಕಾರ್ಟ್‌ ಸಹ ಸ್ಥಾಪಕ ಬಿನ್ನಿ ಬನ್ಸಲ್‌ ಅವರನ್ನೂ ಒಳಗೊಂಡು, ಚೀನಾದ ಟೆನ್ಸೆಂಟ್‌ ಹೋಲ್ಡಿಂಗ್ಸ್‌, ಅಮೆರಿಕದ ಹೂಡಿಕೆ ನಿಧಿ ಟೈಗರ್‌ ಗ್ಲೋಬಲ್‌ ಮ್ಯಾನೇಜ್‌ಮೆಂಟ್‌ ಮತ್ತು ಮೈಕ್ರೊಸಾಫ್ಟ್‌ ಕಾರ್ಪ್‌ ಕಡಿಮೆ ಪ್ರಮಾಣದ ಪಾಲು ಬಂಡ ವಾಳ ಹೊಂದಿರುವ ಪ್ರಮುಖ ಕಂಪನಿಗಳಾಗಿವೆ. ಫ್ಲಿಪ್‌ಕಾರ್ಟ್‌
ನಲ್ಲಿ ಹೊಂದಿರುವ ಪಾಲು ಬಂಡವಾಳ ಮಾಲ್‌ ಮಾರ್ಟ್‌ಗೆ ಮಾರುವು ದಾಗಿ ನ್ಯಾಸ್ಪರ್ಸ್‌, ಆ್ಯಕ್ಸೆಲ್‌ ಪಾರ್ಟ್‌ನರ್ಸ್‌ ಮತ್ತು ಇ–ಬೇ ಕಂಪನಿಗಳು ಈಗಾಗಲೇ ಖಾತರಿಪಡಿಸಿವೆ.

ಆಡಳಿತ ಮಂಡಳಿಯಲ್ಲಿ ಬದಲಾವಣೆ?

ಫ್ಲಿಪ್‌ಕಾರ್ಟ್‌ನಲ್ಲಿನ ಗರಿಷ್ಠ ಪಾಲು ಬಂಡವಾಳ ಖರೀದಿಸಲಿರುವ ವಾಲ್‌ಮಾರ್ಟ್‌ ಅದರ ಆಡಳಿತ ಮಂಡಳಿಯಲ್ಲಿ ಕೆಲವು ಬದಲಾವಣೆ ತರುವ ಸುಳಿವು ನೀಡಿದೆ.

ಬಿನ್ನಿ ಬನ್ಸಲ್ ಮತ್ತು ಆಡಳಿತ ಮಂಡಳಿ ಸಲಹೆ ಪಡೆದು ಫ್ಲಿಪ್‌ಕಾರ್ಟ್‌ನ ಸಿಇಒ ಮತ್ತು ಇತರೆ ಪ್ರಮುಖ  ಅಧಿಕಾರಿಗಳನ್ನು ಬದಲಾಯಿಸುವ ಅಥವಾ ಹೊಸ ನೇಮಕ ಮಾಡುವ ಸಾಧ್ಯತೆ ಇದೆ ಎಂದು ಹೇಳಿದೆ.

ಫ್ಲಿಪ್‌ಕಾರ್ಟ್‌ನ ಹೊಸ ಆಡಳಿತ ಮಂಡಳಿಯಲ್ಲಿ ಆರಂಭದಲ್ಲಿ 8 ಮಂದಿ ನಿರ್ದೇಶಕರು ಇರಲಿದ್ದಾರೆ. ಐವರನ್ನು ವಾಲ್‌ಮಾರ್ಟ್‌ ನೇಮಿಸಲಿದೆ.  ಕಡಿಮೆ ಪಾಲು ಬಂಡವಾಳ ಹೊಂದಿರುವ ಷೇರುದಾರರು ಇಬ್ಬರನ್ನು ನೇಮಿಸಲಿದ್ದಾರೆ. ಒಬ್ಬರು ಸಂಸ್ಥೆಯ ಸ್ಥಾಪಕರು (ಬಿನ್ನಿ ಬನ್ಸಲ್‌) ಇರಲಿದ್ದಾರೆ.

ನಿರ್ದೇಶಕರ ಸಂಖ್ಯೆಯನ್ನು ಯಾವುದೇ ಸಂದರ್ಭದಲ್ಲಾದರೂ 9ಕ್ಕೆ ಹೆಚ್ಚಿಸಬಹುದು ಎಂದೂ ವಾಲ್‌ಮಾರ್ಟ್‌ ಹೇಳಿದೆ. ಬನ್ಸಲ್‌ ಅವರ ಸಮ್ಮತಿ ಪಡೆದು ಫ್ಲಿಪ್‌ಕಾರ್ಟ್‌ನ ಸಿಇಒ ಮತ್ತು ಇತರ  ಉನ್ನತ ಅಧಿಕಾರಿಗಳನ್ನು ಬದಲಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.