ADVERTISEMENT

ಬಿಗಿ ವಿತ್ತೀಯ ನೀತಿ ಅಂತ್ಯ?

​ಪ್ರಜಾವಾಣಿ ವಾರ್ತೆ
Published 2 ಜನವರಿ 2012, 19:30 IST
Last Updated 2 ಜನವರಿ 2012, 19:30 IST

ನವದೆಹಲಿ (ಪಿಟಿಐ): ಆರ್ಥಿಕ ವೃದ್ಧಿ ದರ ಕುಸಿದಿರುವ ಹಿನ್ನೆಲೆಯಲ್ಲಿ, ಇದುವರೆಗೆ ಅನುಸರಿಸಿಕೊಂಡು ಬಂದಿರುವ ಕಠಿಣ ಹಣಕಾಸು ನೀತಿ ಕೈಬಿಡುವ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕ್ ಇಂಗಿತ ವ್ಯಕ್ತಪಡಿಸಿದೆ.

2010ರ ಮಾರ್ಚ್ ತಿಂಗಳಿನಿಂದ ಇಲ್ಲಿಯವರೆಗೂ ನಿರಂತರವಾಗಿ ಪಾಲಿಸಿಕೊಂಡು ಬಂದಿರುವ ಕಠಿಣ ಹಣಕಾಸು ನೀತಿಯನ್ನು ಹಂತ ಹಂತವಾಗಿ ಕೈಬಿಡುವ ಬಗ್ಗೆ `ಆರ್‌ಬಿಐ~ ಗವರ್ನರ್ ಡಿ. ಸುಬ್ಬರಾವ್, `ಬಿಬಿಸಿ~ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.ಮೃದು ಹಣಕಾಸು ನೀತಿಯನ್ನು ಯಾವ ದಿನದಿಂದ ಜಾರಿಗೆ ತರಲಾಗುವುದು ಮತ್ತು ಅಂತಹ ನೀತಿ ಹೇಗಿರುತ್ತದೆ ಎಂದು ಈ ಹಂತದಲ್ಲಿ ಹೇಳುವುದು   ಸಾಧ್ಯವಾಗಲಾರದು ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

ಕೇಂದ್ರೀಯ ಬ್ಯಾಂಕ್, ಈ ತಿಂಗಳ 24ರಂದು ತನ್ನ ಹಣಕಾಸು ನೀತಿಯನ್ನು ಪರಾಮರ್ಶಿಸುವಾಗ ಬಡ್ಡಿ ದರಗಳಲ್ಲಿ ರಿಯಾಯ್ತಿ ಪ್ರಕಟಿಸುವ ಸಾಧ್ಯತೆ ಇದೆ. ಇದುವರೆಗೆ ಅಲ್ಪಾವಧಿ ಬಡ್ಡಿ ದರಗಳನ್ನು 13 ಬಾರಿ ಹೆಚ್ಚಿಸಲಾಗಿದೆ. ಆದರೆ, ನವೆಂಬರ್ - ಡಿಸೆಂಬರ್ ಅವಧಿಯಲ್ಲಿ ಹಣದುಬ್ಬರವು ಕೆಲ ಮಟ್ಟಿಗೆ ಕಡಿಮೆಯಾಗಿದ್ದರಿಂದ ಡಿಸೆಂಬರ್ ತಿಂಗಳ ಪರಾಮರ್ಶೆಯಲ್ಲಿ ಬಡ್ಡಿ ದರ ಹೆಚ್ಚಳ ನಿರ್ಧಾರ ಕೈಬಿಟ್ಟಿತ್ತು. ಜಾಗತಿಕ ಆರ್ಥಿಕತೆಯ ಅನಿಶ್ಚಿತ ಪರಿಸ್ಥಿತಿಯ ಹಿನ್ನೆಲೆಯಲ್ಲಿ ದೇಶಿ ಆರ್ಥಿಕ ವೃದ್ಧಿ ದರಕ್ಕೆ ಚೇತರಿಕೆ ನೀಡುವ ಅಗತ್ಯ ಹೆಚ್ಚಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.