ADVERTISEMENT

ಬೆಂಗಳೂರಿನ ವೃತ್ತಿನಿರತರಿಗೆ ಗರಿಷ್ಠ ಸಂಬಳ

ಮಾಹಿತಿ ತಂತ್ರಜ್ಞಾನ ವಲಯ ನಾಲ್ಕನೇ ಸ್ಥಾನದಲ್ಲಿ: ರ‍್ಯಾಂಡ್‌ಸ್ಟಡ್‌ ಇನ್‌ಸೈಟ್ಸ್‌ ವರದಿ

ಪಿಟಿಐ
Published 16 ಏಪ್ರಿಲ್ 2018, 19:30 IST
Last Updated 16 ಏಪ್ರಿಲ್ 2018, 19:30 IST
ಸಂಗ್ರಹ ಚಿತ್ರ.
ಸಂಗ್ರಹ ಚಿತ್ರ.   

ನವದೆಹಲಿ: ಬೆಂಗಳೂರಿನಲ್ಲಿ ಇರುವ ವೃತ್ತಿನಿರತರು ದೇಶದ ಇತರ ಮಹಾನಗರಗಳಿಗೆ ಹೋಲಿಸಿದರೆ ಗರಿಷ್ಠ ಮಟ್ಟದ ವೇತನ ಪಡೆಯುತ್ತಿದ್ದಾರೆ ಎಂದು ವರದಿಯೊಂದು ತಿಳಿಸಿದೆ.

ಈ ವೃತ್ತಿನಿರತರ ವಾರ್ಷಿಕ ಸರಾಸರಿ ವೇತನವು ₹10.8 ಲಕ್ಷದಷ್ಟು ಇದೆ. ಔಷಧಿ ಮತ್ತು ಆರೋಗ್ಯ ರಕ್ಷಣೆ ಕ್ಷೇತ್ರಗಳಲ್ಲಿನ ಉದ್ಯೋಗ ನಿರತರೂ ಕೈತುಂಬ ಸಂಬಳ ಪಡೆಯುತ್ತಿದ್ದಾರೆ ಎಂದು ರ‍್ಯಾಂಡ್‌ಸ್ಟಡ್‌ ಇಂಡಿಯಾದ ಸಂಶೋಧನಾ ಮತ್ತು ವಿಶ್ಲೇಷಣಾ ವಿಭಾಗವಾದ ರ‍್ಯಾಂಡ್‌ಸ್ಟಡ್‌ ಇನ್‌ಸೈಟ್ಸ್‌ ನಡೆಸಿದ ವರದಿಯಲ್ಲಿ ತಿಳಿಸಲಾಗಿದೆ.

ದೇಶದ ಮಾಹಿತಿ ತಂತ್ರಜ್ಞಾನ (ಐ.ಟಿ) ರಾಜಧಾನಿ ಖ್ಯಾತಿಯ ಬೆಂಗಳೂರಿನಲ್ಲಿ ಪ್ರತಿಭಾನ್ವಿತ ಕೆಲಸಗಾರರ ವಾರ್ಷಿಕ ಸರಾಸರಿ ಸಂಬಳ (ಸಿಟಿಸಿ) ₹ 10.8 ಲಕ್ಷ ಇದೆ. ನಂತರದ ಸ್ಥಾನಗಳಲ್ಲಿ ಪುಣೆ, ರಾಷ್ಟ್ರೀಯ ರಾಜಧಾನಿ ಪ್ರದೇಶ (ಎನ್‌ಸಿಆರ್‌) ಮತ್ತು ಮುಂಬೈ ಮಹಾನಗರಗಳು ಇವೆ.

ADVERTISEMENT

ಔಷಧಿ ತಯಾರಿಕೆ ಮತ್ತು ಆರೋಗ್ಯ ರಕ್ಷಣೆ ಕ್ಷೇತ್ರಗಳಲ್ಲಿ ಗರಿಷ್ಠ ಪ್ರಮಾಣದ ವೇತನ ನೀಡಲಾಗುತ್ತಿದೆ. ಈ ಕ್ಷೇತ್ರಗಳಲ್ಲಿನ ಎಲ್ಲ ಹಂತಗಳ  ಉದ್ಯೋಗಿಗಳ ವಾರ್ಷಿಕ ಸರಾಸರಿ ‘ಸಿಟಿಸಿ’ಯು ₹ 9.6 ಲಕ್ಷ ಇದೆ.

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಗೆ ಬಂದಿರುವುದರಿಂದ ತೆರಿಗೆ ಮತ್ತಿತರ ಸೇವಾ ಕ್ಷೇತ್ರಗಳಲ್ಲಿನ ಪರಿಣತರಿಗೆ ಬೇಡಿಕೆ ಹೆಚ್ಚಿದೆ.  ಸೇವಾ ಕ್ಷೇತ್ರದಲ್ಲಿಯೂ ಗಮನಾರ್ಹ ಪ್ರಮಾಣದ ವೇತನ (ಸರಾಸರಿ ಸಂಬಳ ₹ 9.4 ಲಕ್ಷ) ಪಾವತಿಸಲಾಗುತ್ತಿದೆ.

ತ್ವರಿತವಾಗಿ ಬಿಕರಿಯಾಗುವ ಗ್ರಾಹಕ ಉತ್ಪನ್ನ (ಎಫ್‌ಎಂಸಿಜಿ) ತಯಾರಿಕಾ ವಲಯವು  ಉತ್ತಮ ಮಟ್ಟದ ಸಂಬಳ ಪಾವತಿಸುವುದರಲ್ಲಿ ಮೂರನೇ ಸ್ಥಾನದಲ್ಲಿ ಇದೆ. 

₹ 9.1 ಲಕ್ಷದಷ್ಟು ‘ಸಿಟಿಸಿ’ ಇರುವ ಐ.ಟಿ ವಲಯವು ನಾಲ್ಕನೇ ಸ್ಥಾನದಲ್ಲಿ ಇದೆ. ಮೂಲಸೌಕರ್ಯ, ರಿಯಲ್‌ ಎಸ್ಟೇಟ್‌ ಮತ್ತು ಕಟ್ಟಡ ನಿರ್ಮಾಣ ರಂಗವು ₹ 9 ಲಕ್ಷದಷ್ಟು ವೇತನ ನೀಡುವ ಮೂಲಕ ಐದನೇ ಸ್ಥಾನದಲ್ಲಿ ಇದೆ.

6ರಿಂದ 10 ವರ್ಷಗಳ ವೃತ್ತಿ ಅನುಭವ ಇರುವವರಿಗೆ ಹೆಚ್ಚಿನ ಪ್ರಮಾಣದಲ್ಲಿ ಸಂಬಳ ಪಾವತಿಸಲಾಗುತ್ತಿದೆ. ಪರಿಣತ ವೈದ್ಯರ ‘ಸಿಟಿಸಿ’ಯು ₹ 18.4 ಲಕ್ಷ, ವಾಸ್ತುತಜ್ಞರು ( ₹ 15 ಲಕ್ಷ), ಉತ್ಪನ್ನಗಳ ಎಂಜಿನಿಯರಿಂಗ್‌ ಪರಿಣತರು (₹ 14.8 ಲಕ್ಷ) ಮತ್ತು ತಂತ್ರಜ್ಞಾನ ಪರಿಣತರ ‘ಸಿಟಿಸಿ’ ₹ 14.6 ಲಕ್ಷದವರೆಗೆ ಇದೆ.

ದೇಶದಾದ್ಯಂತ 20 ಕೈಗಾರಿಕಾ ವಲಯಗಳಲ್ಲಿ ಇರುವ ಉದ್ಯೋಗಿಗಳ ವೇತನದ ವಿವರವನ್ನು ಆಧರಿಸಿ ರ‍್ಯಾಂಡ್‌ಸ್ಟಡ್‌ ಇನ್‌ಸೈಟ್ಸ್‌ ಈ ವರದಿ ಸಿದ್ಧಪಡಿಸಿದೆ.

ಏನಿದು ಸಿಟಿಸಿ?
ಉದ್ಯೋಗಿಗೆ ಸಂಸ್ಥೆ ನೀಡುವ ಒಟ್ಟಾರೆ ಸಂಬಳಕ್ಕೆ ಕಾಸ್ಟ್‌ ಟು ಕಂಪನಿ (ಸಿಟಿಸಿ) ಎಂದು ಕರೆಯಲಾಗುತ್ತದೆ.

ಒಂದು ವರ್ಷಾವಧಿಯಲ್ಲಿ ಉದ್ಯೋಗದಾತ ಸಂಸ್ಥೆಯು ತನ್ನ ಉದ್ಯೋಗಿಗೆ ಮಾಡುವ ಒಟ್ಟು ವೆಚ್ಚ ಇದಾಗಿರುತ್ತದೆ. ಇದರಲ್ಲಿ ಮೂಲ ವೇತನ, ಇತರ ಭತ್ಯೆಗಳೂ ಇರುತ್ತವೆ. ತಿಂಗಳ ವೇತನವು ‘ಸಿಟಿಸಿ’ಗಿಂತ ಕಡಿಮೆ ಇರುತ್ತದೆ.

*
ಪ್ರತಿಭಾನ್ವಿತರನ್ನು ಸಂಸ್ಥೆಯಲ್ಲಿ ಉಳಿಸಿಕೊಳ್ಳಲು ಮತ್ತು ಅವರಿಗೆ ಉತ್ತೇಜನ ನೀಡಲು ಗರಿಷ್ಠ ಮಟ್ಟದ ಸಂಬಳ ನೀಡುವುದು ಅನಿವಾರ್ಯವಾಗಿದೆ.
–ಪೌಲ್‌ ಡಿ. ,ರ‍್ಯಾಂಡ್‌ಸ್ಟಡ್‌ ಇಂಡಿಯಾದ ಸಿಇಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.