ADVERTISEMENT

ಬ್ಯಾಂಕ್‌ಗಳ ವಿಲೀನ: ಜೇಟ್ಲಿ ನೇತೃತ್ವದಲ್ಲಿ ಸಮಿತಿ ರಚನೆ

ಪಿಟಿಐ
Published 1 ನವೆಂಬರ್ 2017, 19:30 IST
Last Updated 1 ನವೆಂಬರ್ 2017, 19:30 IST
ಅರುಣ್‌ ಜೇಟ್ಲಿ
ಅರುಣ್‌ ಜೇಟ್ಲಿ   

ನವದೆಹಲಿ: ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ವಿಲೀನ ಪ್ರಸ್ತಾವಗಳನ್ನು ಪರಿಶೀಲಿಸಲು ಹಣಕಾಸು ಸಚಿವ ಅರುಣ್‌ ಜೇಟ್ಲಿ ನೇತೃತ್ವದಲ್ಲಿ ಸಚಿವರ ಸಮಿತಿ ರಚಿಸಲಾಗಿದೆ.

ರೈಲ್ವೆ ಸಚಿವ ಪೀಯೂಷ್‌ ಗೋಯೆಲ್‌ ಮತ್ತು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಸಮಿತಿಯ ಇತರ ಸದಸ್ಯರಾಗಿದ್ದಾರೆ.

ಬ್ಯಾಂಕಿಂಗ್‌ ಸುಧಾರಣಾ ಕ್ರಮಗಳ ಭಾಗವಾಗಿರುವ ವಿಲೀನ ಪ್ರಸ್ತಾವಗಳನ್ನು ಈ ಸಮಿತಿಯು ಪರಿಶೀಲಿಸಲಿದೆ ಎಂದು ಹಣಕಾಸು ಸೇವೆಗಳ ಕಾರ್ಯದರ್ಶಿ ರಾಜೀವ್‌ ಕುಮಾರ್‌ ಟ್ವೀಟ್‌ ಮಾಡಿದ್ದಾರೆ.

ADVERTISEMENT

ಬ್ಯಾಂಕ್‌ಗಳ ಬಲವರ್ಧನೆಗೆ ಕಳೆದ ವಾರ ₹ 2.11 ಲಕ್ಷ ಕೋಟಿಗಳ ಬಂಡವಾಳ ನೆರವು ಘೋಷಿಸಿದ ಸಂದರ್ಭದಲ್ಲಿ, ‘ಇದಕ್ಕೆ ಪೂರಕವಾಗಿ ಸರಣಿಯೋಪಾದಿಯಲ್ಲಿ ಬ್ಯಾಂಕಿಂಗ್‌ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗುವುದು’ ಎಂದು ಅರುಣ್‌ ಜೇಟ್ಲಿ ಪ್ರಕಟಿಸಿದ್ದರು.

ಬ್ಯಾಂಕ್‌ಗಳ ಬಲವರ್ಧನೆಗೆ ವಿಲೀನ ಪ್ರಕ್ರಿಯೆ ಚುರುಕುಗೊಳಿಸಲು ಪರ್ಯಾಯ ವ್ಯವಸ್ಥೆ ರೂಪಿಸಲು ಕೇಂದ್ರ ಸಚಿವ ಸಂಪುಟವು ಆಗಸ್ಟ್‌ ತಿಂಗಳಿನಲ್ಲಿ ನಿರ್ಧರಿಸಿತ್ತು.

ಬ್ಯಾಂಕ್‌ಗಳ ಆಡಳಿತ ಮಂಡಳಿಗಳಿಂದ ಬರುವ ವಿಲೀನ ಪ್ರಸ್ತಾವಗಳನ್ನು ಪರಿಶೀಲಿಸಲು ಇದರಿಂದ ಸುಲಭವಾಗಲಿದೆ.

ವಿಲೀನದಿಂದ ದೊಡ್ಡ ಬ್ಯಾಂಕ್‌ ಅಸ್ತಿತ್ವಕ್ಕೆ ಬಂದರೆ, ಬೆಳೆಯುತ್ತಿರುವ ಆರ್ಥಿಕತೆಗೆ ಅಗತ್ಯವಾದ ಸಾಲದ ಅಗತ್ಯ ಪೂರೈಸಲು ಮತ್ತು ಸರ್ಕಾರದ ಬೊಕ್ಕಸವನ್ನು ನೆಚ್ಚಿಕೊಳ್ಳದೇ ಸಂಪನ್ಮೂಲ ಸಂಗ್ರಹಿಸಲು ಸಾಧ್ಯವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.