ADVERTISEMENT

ಮಾರುತಿ ತ್ರೈಮಾಸಿಕ ಪ್ರಗತಿ ಶೇ.79

ಜನವರಿ-ಮಾರ್ಚ್ ಅವಧಿ ಲಾಭ ಸಾರ್ವಕಾಲಿಕ ಗರಿಷ್ಠ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2013, 19:59 IST
Last Updated 26 ಏಪ್ರಿಲ್ 2013, 19:59 IST

ನವದೆಹಲಿ (ಪಿಟಿಐ): ಕಠಿಣ ಮಾರುಕಟ್ಟೆ ಪರಿಸ್ಥಿತಿ ನಡುವೆಯೂ `ಮಾರುತಿ ಸುಜುಕಿ ಇಂಡಿಯ'(ಎಂಎಸ್‌ಐ) 2012-13ನೇ ಹಣಕಾಸು ವರ್ಷದ 4ನೇ ತ್ರೈಮಾಸಿಕದಲ್ಲಿ ರೂ.1147.50 ಕೋಟಿ ನಿವ್ವಳ ಲಾಭ ಗಳಿಸಿದೆ. ಇದು ಕಂಪೆನಿಯ ಸಾರ್ವಕಾಲಿಕ ಗರಿಷ್ಠ ತ್ರೈಮಾಸಿಕ ನಿವ್ವಳ ಲಾಭವಾಗಿದೆ.

ಹಿಂದಿನ ವರ್ಷದ ಇದೇ ಅವಧಿಯ  ಲಾಭ ರೂ.639.80 ಕೋಟಿಗೆ ಹೋಲಿಸಿದರೆ ಈ ಬಾರಿ ಶೇ 79.4ರಷ್ಟು ವೃದ್ಧಿ ಆಗಿದೆ. `ಎಂಎಸ್‌ಐ'ಅಂಗಸಂಸ್ಥೆ `ಸುಜುಕಿ ಪವರ್‌ಟ್ರೇನ್ ಇಂಡಿಯ' ಲಾಭವನ್ನೂ ಸೇರಿಸಿದರೆ ಒಟ್ಟಾರೆ ಲಾಭ ಪ್ರಮಾಣ ರೂ.1,239.60 ಕೋಟಿಯಷ್ಟಾಗಲಿದೆ.

2013ರ ಜನವರಿ-ಮಾರ್ಚ್ ಅವಧಿಯಲ್ಲಿ ಹೆಚ್ಚು ಬೆಲೆಯ ಎರ್ಟಿಗಾ, ಡಿಜೈರ್ ಮತ್ತು ಸ್ವಿಫ್ಟ್ ಮಾದರಿ ಕಾರುಗಳ ಮಾರಾಟ ಬಹಳ ಉತ್ತಮ ಮಟ್ಟದಲ್ಲಿದ್ದುದರಿಂದ 4ನೇ ತ್ರೈಮಾಸಿಕದ ಲಾಭದಲ್ಲಿ ಭಾರಿ ಏರಿಕೆಯಾಗಿದೆ. ಕಂಪೆನಿ ಕೈಗೊಂಡ ವೆಚ್ಚ ಕಡಿತ ಕ್ರಮ, ಸ್ಥಳೀಯ ಅವಕಾಶಗಳ ಸದ್ಬಳಕೆ ಮತ್ತು ವಿನಿಮಯ ಕೊಡುಗೆಗಳು ವಹಿವಾಟು ವೃದ್ಧಿಯಾಗುವಂತೆ ಮಾಡಿ ಲಾಭದಲ್ಲಿನ ಹೆಚ್ಚಳಕ್ಕೆ ಕಾರಣವಾಗಿವೆ ಎಂದು `ಎಂಎಸ್‌ಐ' ಮುಖ್ಯ ಹಣಕಾಸು ಅಧಿಕಾರಿ ಅಜಯ್ ಸೇಠ್ ಇಲ್ಲಿ ಶುಕ್ರವಾರ ಸುದ್ದಿಗಾರರಿಗೆ ವಿವರಿಸಿದರು.

4ನೇ ತ್ರೈಮಾಸಿಕದಲ್ಲಿ ಒಟ್ಟು 3,43,709 ವಾಹನ ಮಾರಾಟವಾಗಿವೆ. 2011-12ನೇ ಹಣಕಾಸು ವರ್ಷದ ಇದೇ ಅವಧಿಯಲ್ಲಿನ ಮಾರಾಟ ಸಂಖ್ಯೆ 3,60,334ಕ್ಕೆ ಹೋಲಿಸಿದರೆ ಶೇ 9.4ರಷ್ಟು ಇಳಿಕೆಯಾಗಿದೆ. ಆದರೆ, ಮಾರಾಟದ ವರಮಾನ(ರೂ.12,566 ಕೋಟಿ) ಲೆಕ್ಕ ತೆಗೆದುಕೊಂಡರೆ ಶೇ 9.4ರಷ್ಟು ಹೆಚ್ಚಳ ಕಂಡುಬಂದಿದೆ.
ಒಟ್ಟಾರೆ ಹಣಕಾಸು ವರ್ಷದಲ್ಲಿ ಕಂಪೆನಿಯ ನಿವ್ವಳ ಲಾಭದಲ್ಲಿಯೂ ಶೇ 40.70ರಷ್ಟು (ರೂ.2300 ಕೋಟಿ) ಪ್ರಗತಿಯಾಗಿದೆ. ಮಾರಾಟದಲ್ಲಿ ಶೇ 21.4ರ (ರೂ.42,123 ಕೋಟಿ) ಹೆಚ್ಚಳವಾಗಿದೆ.

`ಮಂದಗತಿ ಆರ್ಥಿಕ ಪ್ರಗತಿ ಮತ್ತು ಗ್ರಾಹಕರ ಬೇಡಿಕೆ ಇಳಿಮುಖದ ಕಾರಣದಿಂದಾಗಿ 2012-13ನೇ ಹಣಕಾಸು ವರ್ಷ ಭಾರತದ ಇಡೀ ವಾಹನ ಉದ್ಯಮಕ್ಕೇ ಕಠಿಣ ಸವಾಲಿನದಾಗಿತ್ತು. ಇದರ ಮಧ್ಯೆಯೂ ನಮ್ಮ ಕಂಪೆನಿ ಕೆಲವು ಮಾದರಿ ಕಾರುಗಳ ಮಾರಾಟದಲ್ಲಿ ಏರಿಕೆ ಸಾಧಿಸಿ ಮಾರುಕಟ್ಟೆ ಪಾಲನ್ನೂ ಹೆಚ್ಚಿಸಿಕೊಂಡಿದ್ದೇವೆ' ಎಂದು `ಎಂಎಸ್‌ಐ'ನ ವ್ಯವಸ್ಥಾಪಕ ನಿರ್ದೇಶಕ ಹುದ್ದೆಯಿಂದ ಇತ್ತೀಚೆಗಷ್ಟೇ ನಿವೃತ್ತರಾದ ಶಿಂಜೊ ನಕನಿಶಿ ಹರ್ಷ ವ್ಯಕ್ತಪಡಿಸಿದ್ದಾರೆ.

ಹೀರೊ ಲಾಭ ಶೇ4.86 ಕುಸಿತ
ನವದೆಹಲಿ(ಪಿಟಿಐ): ಬೇಡಿಕೆ ತಗ್ಗಿದ ಕಾರಣ `ಹೀರೊ ಮೊಟೊ ಕಾರ್ಪ್' ನಿವ್ವಳ ಲಾಭ ಗಳಿಕೆ 2012-13ನೇ ಹಣಕಾಸು ವರ್ಷದ 4ನೇ ತ್ರೈಮಾಸಿಕದಲ್ಲಿ ಶೇ 4.86ರಷ್ಟು ಕುಸಿದು ರೂ.574.23 ಕೋಟಿಗೆ ಬಂದಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ `ಹೀರೊ' ರೂ.603.59 ಕೋಟಿ ಲಾಭ ಗಳಿಸಿತ್ತು.

4ನೇ ತ್ರೈಮಾಸಿಕದ ನಿವ್ವಳ ವರಮಾನ ಮಾತ್ರ ಶೇ 1.84ರ ಅಲ್ಪ ಏರಿಕೆಯೊಂದಿಗೆ ರೂ.6,145.75 ಕೋಟಿಗೆ ಮುಟ್ಟಿದೆ. ಹಣಕಾಸು ವರ್ಷದ ಪೂರ್ಣ ಅವಧಿಯ ನಿವ್ವಳ ಲಾಭ ಗಳಿಕೆಯೂ ರೂ.2,118.16 ಕೊಟಿಗೆ ತಗ್ಗಿದೆ. ಹಿಂದಿನ ವರ್ಷದ ರೂ.2,378.13 ಕೋಟಿಗೆ ಹೋಲಿಸಿದರೆ ಈ ಬಾರಿ ಶೇ 10.93ರಷ್ಟು ಕುಸಿತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT