ADVERTISEMENT

ಮಾವಿಗೆ ರಾಸಾಯನಿಕ ಬಳಕೆ:ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2013, 19:59 IST
Last Updated 6 ಏಪ್ರಿಲ್ 2013, 19:59 IST

ಪುಣೆ(ಪಿಟಿಐ): ಮತ್ತೆ ಮಾವಿನ  ಸೀಸನ್ ಪ್ರಾರಂಭವಾಗಿದೆ.`ಅಲ್ಫೋನ್ಸ' ಸೇರಿದಂತೆ ವಿವಿಧ ತಳಿಯ ಮಾವಿನ ಹಣ್ಣುಗಳು ನಿಧಾನವಾಗಿ ಮಾರುಕಟ್ಟೆಗೆ ಬರಲು ಆರಂಭಿಸಿವೆ.
`ಮಾವಿನ ಹಣ್ಣು ಸವಿಯುವ ಮುನ್ನ ಸ್ವಲ್ಪ ಎಚ್ಚರಿಕೆ ವಹಿಸಿ' ಎಂದು ಆಹಾರ ಮತ್ತು ಔಷಧ (ಎಫ್‌ಡಿಎ) ಇಲಾಖೆ ಎಚ್ಚರಿಸಿದೆ.ಮಾವು ಪ್ರಿಯರು ಹಣ್ಣು ಖರೀದಿಸುವ ಮುನ್ನ ಸರಿಯಾಗಿ  ಪರೀಕ್ಷಿಸು  ವಂತೆಯೂ ಸಲಹೆ ನೀಡಿದೆ.

ವ್ಯಾಪಾರಿಗಳು ಮಾವಿನ ಕಾಯಿಯನ್ನು ನೈಸರ್ಗಿಕವಲ್ಲದ ರೀತಿಯಲ್ಲಿ `ಹಣ್ಣಾಗಿಸಲು' ಮತ್ತು ಆಕರ್ಷಕ ಬಣ್ಣ ಬರುವಂತೆ ಮಾಡಲು ವಿವಿಧ ರಾಸಾಯನಿಕಗಳನ್ನು ಬಳಸಿರುತ್ತಾರೆ.  ಇಂತಹ ಹಣ್ಣುಗಳ ಹೊರಮೈ ಸುಕ್ಕುಗಟ್ಟಿರುತ್ತದೆ. ಇದರ ಬದಲು ನೈಸರ್ಗಿಕವಾಗಿ ಹಣ್ಣಾದ ಮಾವು ಪರೀಕ್ಷಿಸಿ ಖರೀದಿಸುವಂತೆ ಸೂಚಿಸಿದೆ.

ಮಹಾರಾಷ್ಟ್ರ ಸರ್ಕಾರ ಅಲ್ಲಿನ ವ್ಯಾಪಾರಿಗಳಿಗೆ `ಕ್ಯಾಲ್ಸಿಯಂ ಕಾರ್ಬೈಡ್'ನಂತಹ ನಿಷೇಧಿತ ರಾಸಾಯನಿಕಗಳನ್ನು ಮಾವು ಹಣ್ಣು ಮಾಡಲು ಬಳಸದಿರುವಂತೆ ಕಟ್ಟು ನಿಟ್ಟಿನ ಸೂಚನೆ ನೀಡಿದೆ.

`ಕೃತಕವಾಗಿ ಹಣ್ಣಾದ ಮಾವು ನೋಡಲು ಬಣ್ಣ ಬಣ್ಣವಾಗಿ ಬಹಳ ಆಕರ್ಷಷಕವಾಗಿದ್ದರೂ ಸುವಾಸನೆ ಇರುವುದಿಲ್ಲ. ಇದು ಸಾಕಷ್ಟು ಗಟ್ಟಿಯಾಗಿರುತ್ತದೆ. ಹೊರಮೈ ಹಿಚುಕಿ ನೋಡಿ ಅದನ್ನು ಅರಿಯಬಹುದು. ಎಲ್ಲ ಹಣ್ಣುಗಳು ಒಂದೇ ರೀತಿಯ ಗಾಢ ಅರಿಶಿಣ  ಬಣ್ಣದಿಂದ ಕೂಡಿರುತ್ತವೆ ಎನ್ನುತ್ತಾರೆ ದೇವಗಢ ತಾಲ್ಲೂಕಿನ ಮಾವು ಬೆಳೆಗಾರರ ಸಹಕಾರ ಸಂಘದ ನಿರ್ದೇಶಕ ಅಜಿತ್ ಗೋಗಟೆ.

ನೈಸರ್ಗಿಕವಾಗಿ ಹಣ್ಣಾದ ಮಾವು ಅರಿಶಿಣ ಮತ್ತು ಹಸಿರು ಬಣ್ಣದಿಂದ ಕೂಡಿರುತ್ತದೆ. ಹೊರಮೈ ಸುಕ್ಕುಗಟ್ಟಿರುವುದಿಲ್ಲ. ಒಂದು ವೇಳೆ ಹಣ್ಣುಗಳು ಸುಕ್ಕುಗಟ್ಟಿದ್ದರೆ ಮತ್ತು ಹಸಿರು ಬಣ್ಣ ಇಲ್ಲದಿದ್ದರೆ, ಇನ್ನೂ ಬಲಿತರದ ಕಾಯಿಗಳನ್ನು ಕೊಯ್ದು ಕೃತಕವಾಗಿ ಹಣ್ಣು ಮಾಡಲಾಗಿದೆ ಎಂದು ಸುಲಭವಾಗಿ ಗುರುತಿಸಬಹುದು. ಮಾವು ಖರೀದಿಸುವಾಗ  ಬಣ್ಣಕ್ಕೆ ಮರುಳಾಗದಿರಿ  ಎನ್ನುತ್ತಾರೆ ಅವರು.

ದೇವಗಢ ತಾಲ್ಲೂಕಿನ 700 ಮಾವು ಬೆಳೆಗಾರರು ಸೇರಿಕೊಂಡು ಸಹಕಾರ ಸಂಘ ರಚಿಸಿಕೊಂಡಿದ್ದಾರೆ. ಈ ಸಂಘ ಆನ್‌ಲೈನ್ ಮೂಲಕವೂ ಗ್ರಾಹಕರಿಗೆ ನೇರವಾಗಿ ಮಾವಿನ ಹಣ್ಣು ಮಾರಾಟ ಮಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.