ADVERTISEMENT

ಮಿಶ್ರ ಫಲಿತಾಂಶ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 8 ಜನವರಿ 2012, 19:30 IST
Last Updated 8 ಜನವರಿ 2012, 19:30 IST

ನವದೆಹಲಿ (ಪಿಟಿಐ): ಮೂರನೆಯ ತ್ರೈಮಾಸಿಕ ಅವಧಿಯ ಕಾರ್ಪೊರೇಟ್ ಫಲಿತಾಂಶಗಳು ಈ ವಾರದಿಂದ ಪ್ರಕಟಗೊಳ್ಳಲಿದ್ದು, ಮುಂಬೈ ಷೇರು ಪೇಟೆ ಸಂವೇದಿ ಸೂಚ್ಯಂಕ ತೀವ್ರ ಏರಿಳಿತ ಕಾಣುವ ನಿರೀಕ್ಷೆ ಇದೆ.

ಭಾರತೀಯ ರಿಸರ್ವ್ ಬ್ಯಾಂಕ್ ಬಡ್ಡಿ ದರಗಳನ್ನು ಇಳಿಸುವ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಸೂಚ್ಯಂಕ ಹೊಸ ವರ್ಷದ ಆರಂಭದಲ್ಲಿ ಚೇತರಿಕೆಯ ವಹಿವಾಟು ಕಂಡಿದೆ.

ಐಟಿ ದಿಗ್ಗಜ ಇನ್ಫೋಸಿಸ್ ಮತ್ತು ಎಚ್‌ಡಿಎಫ್‌ಸಿ ಜನವರಿ 12ರಂದು ತ್ರೈಮಾಸಿಕ ಹಣಕಾಸು ಸಾಧನೆ ಪ್ರಕಟಿಸಲಿವೆ. ಅಂದೇ ದೇಶದ ಕೈಗಾರಿಕಾ ಉತ್ಪಾದನೆ ವೃದ್ಧಿ ದರವೂ ಪ್ರಕಟಗೊಳ್ಳಲಿದೆ. ಹಣದುಬ್ಬರ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ `ಆರ್‌ಬಿಐ~ ಬಡ್ಡಿ ದರ ಇಳಿಕೆಗೆ ಮುಂದಾಗಬಹುದು. ಈ ಕ್ರಮವೂ ವಹಿವಾಟಿಗೆ ಶಕ್ತಿ ತುಂಬಬಹುದು ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.

ADVERTISEMENT

ಜಾಗತಿಕ ಆರ್ಥಿಕ ಅಸ್ಥಿರತೆ ಮತ್ತು ಬಡ್ಡಿ ದರ ಹೆಚ್ಚಳದಿಂದ ಕಾರ್ಪೋರೇಟ್  ಕಂಪೆನಿಗಳ ವಹಿವಾಟು ಕುಂಠಿತವಾಗಿದೆ.  ಆದರೆ, ಡಾಲರ್ ಎದುರು ರೂಪಾಯಿ ಅಪಮೌಲ್ಯ ಕಂಪೆನಿಗಳಿಗೆ ವರವಾಗಿ ಪರಿಗಣಿಸಿದೆ. ಈ ಎಲ್ಲ ಸಂಗತಿಗಳು ಮಿಶ್ರ ಫಲಿತಾಂಶ ಸೃಷ್ಟಿಸಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಮೂರನೆಯ ತ್ರೈಮಾಸಿಕ ಅವಧಿಯಲ್ಲಿ ಕಂಪೆನಿಗಳು ಸರಾಸರಿ ಶೇ 3.3ರಷ್ಟು ಪ್ರಗತಿ ದಾಖಲಿಸಿರುವ  ಸಾಧ್ಯತೆ  ಇದೆ ಎಂದು ಎಡಿಲ್‌ವೈಸ್ ಸೆಕ್ಯುರಿಟೀಸ್ ಹೇಳಿದೆ. ಮಾಹಿತಿ ತಂತ್ರಜ್ಞಾನ, ಗ್ರಾಹಕ ಸರಕುಗಳು, ಔಷಧಿ, ಸಿಮೆಂಟ್ ವಲಯದ ಕಂಪೆನಿಗಳು ಉತ್ತಮ ಫಲಿತಾಂಶ ಪ್ರಕಟಿಸುವ ನಿರೀಕ್ಷೆ ಇದೆ. ರಿಯಲ್ ಎಸ್ಟೇಟ್, ಲೋಹ, ಕಾಮಗಾರಿ ಕಂಪೆನಿಗಳ ಲಾಭಾಂಶ ಇಳಿಕೆಯಾಗಲಿದೆ ಎಂದು ಎಡಿಲ್‌ವೈಸ್ ವಿಶ್ಲೇಷಿಸಿದೆ.

ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತದಿಂದ ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ತ್ರೈಮಾಸಿಕ ಅವಧಿಯಲ್ಲಿ ಇನ್ಫೋಸಿಸ್, ವಿಪ್ರೊ ಮತ್ತು ಟಿಸಿಎಸ್ ಕ್ರಮವಾಗಿ ಶೇ 25, ಶೇ 23 ಮತ್ತು ಶೇ 12ರಷ್ಟು ಪ್ರಗತಿ ದಾಖಲಿಸಬಹುದು ಏಂಜಲ್ ಬ್ರೋಕಿಂಗ್ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.