ಹೈದರಾಬಾದ್(ಪಿಟಿಐ): ಹಣದುಬ್ಬರ ಮತ್ತು ಮುಂಗಾರು ಮುನ್ನೋಟ ಆಧರಿಸಿಯೇ ಈ ಬಾರಿಯ ತ್ರೈಮಾಸಿಕ ಹಣಕಾಸು ನೀತಿ ನಿರ್ಧಾರವಾಗಲಿದೆ ಎಂದು `ಭಾರತೀಯ ರಿಸರ್ವ್ ಬ್ಯಾಂಕ್'(ಆರ್‌ಬಿಐ) ಗವರ್ನರ್ ಡಿ.ಸುಬ್ಬರಾವ್ ಹೇಳಿದ್ದಾರೆ.
ಜೂನ್ 17ರಂದು ಮೊದಲ ಹಂತದ ಮಧ್ಯಂತರ ತ್ರೈಮಾಸಿಕ ಹಣಕಾಸು ನೀತಿ ಪ್ರಕಟಗೊಳ್ಳಲಿದೆ. ದೇಶದ ಕೋಟ್ಯಂತರ ರೈತರು ಮುಂಗಾರಿಗೆ ಕಾಯುತ್ತಿರುವಂತೆ `ಆರ್‌ಬಿಐ' ಕೂಡ ಉತ್ತಮ ಮುಂಗಾರು ನಿರೀಕ್ಷಿಸಿದೆ. ಹಣಕಾಸು ನೀತಿ ನಿರ್ಧರಿಸುವಲ್ಲಿ ಮುಂಗಾರು ನಿರ್ಣಾಯಕ ಪಾತ್ರ ವಹಿಸಲಿದೆ ಎಂದು ಅವರು ಶುಕ್ರವಾರ ಇಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿದರು.
ಭಾರತೀಯ ಹವಾಮಾನ ಇಲಾಖೆ ಪ್ರಸಕ್ತ ವರ್ಷ ಸಾಮಾನ್ಯ ಮುಂಗಾರು ಇರಲಿದೆ ಎಂದು ಅಂದಾಜು ಮಾಡಿದೆ.
`ಸಗಟು ಬೆಲೆ ಸೂಚ್ಯಂಕ'(ಡಬ್ಲ್ಯಪಿಐ) ಆಧರಿಸಿದ ಹಣದುಬ್ಬರ ಮೂರು ವರ್ಷಗಳ ಹಿಂದಿನ ಮಟ್ಟವಾದ ಶೇ 4.89ಕ್ಕೆ ಇಳಿಕೆ ಕಂಡಿದೆ. ಆದರೆ, ಆಹಾರ ಹಣದುಬ್ಬರ ಏಪ್ರಿಲ್‌ನಲ್ಲಿ ಶೇ 6.08ಕ್ಕೆ ಏರಿಕೆ ಕಂಡಿದೆ. `ಗ್ರಾಹಕ ಬೆಲೆ ಸೂಚ್ಯಂಕ'(ಸಿಪಿಐ) ಆಧರಿಸಿದ ಚಿಲ್ಲರೆ ಹಣದುಬ್ಬರ ದರ ಶೇ 9.39ಕ್ಕೆ ಏರಿದೆ. ಮುಂಬರುವ ತಿಂಗಳುಗಳಲ್ಲಿ ಹಣದುಬ್ಬರ ತಗ್ಗಲಿದೆ ಎಂದು ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ಅವರೂ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.