ADVERTISEMENT

‘ಮೊಬೈಲ್‌ಗೆ ಆಧಾರ್‌ ಕಡ್ಡಾಯವಲ್ಲ’

ಪಿಟಿಐ
Published 3 ಮೇ 2018, 19:21 IST
Last Updated 3 ಮೇ 2018, 19:21 IST
‘ಮೊಬೈಲ್‌ಗೆ ಆಧಾರ್‌ ಕಡ್ಡಾಯವಲ್ಲ’
‘ಮೊಬೈಲ್‌ಗೆ ಆಧಾರ್‌ ಕಡ್ಡಾಯವಲ್ಲ’   

ನವದೆಹಲಿ: ಮೊಬೈಲ್‌ನ ಹೊಸ ಸಿಮ್‌ ಕಾರ್ಡ್‌ ಪಡೆಯಲು ಆಧಾರ್‌ ಸಂಖ್ಯೆ ನೀಡುವುದು ಕಡ್ಡಾಯ ಅಲ್ಲ. ಮತದಾರರ ಚೀಟಿ, ಚಾಲನಾ ಪರವಾನಗಿಯಂತಹ ಯಾವುದೇ ಮೌಲಿಕ ದಾಖಲೆಗಳನ್ನು ನೀಡಿ ಹೊಸ ಮೊಬೈಲ್‌ ಸಂಪರ್ಕ ಪಡೆಯಬಹುದು ಎಂದು ದೂರ ಸಂಪರ್ಕ ಸಚಿವಾಲಯದ ಅಧಿಕಾರಿಗಳು ಹೇಳಿದ್ದಾರೆ.

‘ಆಧಾರ್‌ ಇಲ್ಲ ಎಂಬ ಕಾರಣಕ್ಕೆ ಮೊಬೈಲ್‌ ಸಿಮ್‌ ನಿರಾಕರಿಸುವಂತಿಲ್ಲ. ಯಾವುದೇ ಒಂದು ಅಧಿಕೃತ ಗುರುತು ಚೀಟಿ ಪಡೆದುಕೊಂಡು ಸಿಮ್‌ ನೀಡಬಹುದು. ಗುರುತಿನ ಮರು ದೃಢೀಕರಣಕ್ಕೆ ಆಧಾರ್‌ ಬಳಸುವುದಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ ತೀರ್ಪು ಬರುವವರೆಗೆ ಕಾಯಬೇಕಾಗಿದೆ’ ಎಂದು ದೂರ ಸಂಪರ್ಕ ಕಾರ್ಯದರ್ಶಿ ಅರುಣಾ ಸುಂದರರಾಜನ್‌ ತಿಳಿಸಿದ್ದಾರೆ.

ಸಿಮ್‌ಗೆ ಆಧಾರ್‌ ಜೋಡಣೆ ನೀತಿ ಈಗಲೂ ಜಾರಿಯಲ್ಲಿದೆ. ಆಧಾರ್‌ ನೀಡದೆ ಸಿಮ್‌ ಪಡೆದುಕೊಂಡಿದ್ದರೆ ಮುಂದೊಂದು ದಿನ ಆಧಾರ್‌ ನೀಡಿ ಮರು ದೃಢೀಕರಣ ನಡೆಸಬೇಕಾಗುತ್ತದೆ. ಆದರೆ, ಸಿಮ್‌ ಪಡೆದುಕೊಳ್ಳುವಾಗಲೇ ಆಧಾರ್‌ ಸಂಖ್ಯೆ ನೀಡಿರುವ ಗ್ರಾಹಕರು ಮರು ದೃಢೀಕರಣ ಮಾಡುವ ಅಗತ್ಯ ಇಲ್ಲ ಎಂದು ದೂರಸಂಪರ್ಕ ಸಚಿವಾಲಯದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ADVERTISEMENT

ಮರು ದೃಢೀಕರಣ ಮಾಡಬೇಕಾಗಬಹುದು ಎಂಬುದನ್ನು ಆಧಾರ್‌ ಸಂಖ್ಯೆ ನೀಡದೆ ಸಿಮ್‌ ಪಡೆದುಕೊಳ್ಳುವವರಿಗೆ ದೂರಸಂಪರ್ಕ ಕಂಪನಿಯು ತಿಳಿಸಬೇಕು ಎಂದು ಈಗಾಗಲೇ ಹೊರಡಿಸಿರುವ ಸುತ್ತೋಲೆಯಲ್ಲಿ ಹೇಳಲಾಗಿದೆ.

ಆಧಾರ್‌ನ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ ವಿಚಾರಣೆ ನಡೆಸುತ್ತಿದೆ. ಹೀಗಾಗಿ, ತೀರ್ಪು ಬರುವವರೆಗೆ ಸಿಮ್‌ಗೆ ಆಧಾರ್‌ ಜೋಡಣೆ ಗಡುವನ್ನು ದೂರಸಂಪರ್ಕ ಇಲಾಖೆ ಈಗಾಗಲೇ ಮುಂದೂಡಿದೆ.

**

‘ಆಧಾರ್‌ ಸಾ‍ಫ್ಟ್‌ವೇರ್‌ ಸುರಕ್ಷಿತ’

ಆಧಾರ್‌ ನೋಂದಣಿ ಮತ್ತು ಪರಿಷ್ಕರಣೆಗೆ ಕಟ್ಟುನಿಟ್ಟಿನ ಪ್ರಕ್ರಿಯೆ ಅನುಸರಿಸಲಾಗುತ್ತಿದೆ. ಈ ಕಾರಣದಿಂದಲೇ, ವಿವಿಧ ರೀತಿಯಲ್ಲಿ ನಿಯಮ ಉಲ್ಲಂಘನೆ  ಮಾಡಿದ 50 ಸಾವಿರಕ್ಕೂ ಹೆಚ್ಚು ನಿರ್ವಾಹಕರನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ ಎಂದು ಭಾರತೀಯ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರ (ಯುಐಡಿಎಐ) ಹೇಳಿದೆ.

ನೋಂದಣಿ ಸಾಫ್ಟ್‌ವೇರ್‌ ಲೋಪದಿಂದ ಕೂಡಿದೆ ಎಂಬ ವರದಿಗಳು ಪ್ರಕಟವಾದ ಬೆನ್ನಿಗೇ ಯುಐಡಿಎಐ ಈ ಸ್ಪಷ್ಟನೆ ನೀಡಿದೆ.

ಎಲ್ಲ ಸಾಫ್ಟ್‌ವೇರ್‌ಗಳಲ್ಲಿ ಅಗತ್ಯ ಸುರಕ್ಷತಾ ವ್ಯವಸ್ಥೆಗಳು ಇವೆ. ಯಾವುದೇ ರೀತಿಯ ದುರ್ಬಳಕೆ ತಡೆಯುವ ವ್ಯವಸ್ಥೆಯೂ ಇದೆ. ಹಾಗಾಗಿ ಸೋರಿಕೆಯ ವರದಿಗಳು ಸುಳ್ಳು ಮತ್ತು ಆಧಾರರಹಿತ ಎಂದು ಯುಐಡಿಎಐ ತಿಳಿಸಿದೆ.

ಆಧಾರ್‌ ನೋಂದಣಿ ಸಾಫ್ಟ್‌ವೇರ್‌ಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಈ ಸಾಫ್ಟ್‌ವೇರ್‌ಗಳಲ್ಲಿ ನಿರ್ವಾಹಕರ ಬಯೊಮೆಟ್ರಿಕ್‌ ದೃಢೀಕರಣ ಅಗತ್ಯ ಇಲ್ಲ.

ಈ ಸಾಫ್ಟ್‌ವೇರ್‌ ಬಳಸಿಕೊಂಡು ಯಾವುದೇ ದಾಖಲೆ ಇಲ್ಲದೆ ಆಧಾರ್‌ ನೋಂದಣಿ ಮಾಡಲು ಮತ್ತು ಆಧಾರ್‌ ಕಾರ್ಡ್‌ ನೀಡಲು ಸಾಧ್ಯವಿದೆ ಎಂಬ ವರದಿಗಳು ಇತ್ತೀಚೆಗೆ ಪ್ರಕಟವಾಗಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.