ADVERTISEMENT

ರಾಜ್ಯಸಭೆಗೆ ಸಚಿವ ಕಪಿಲ್ ಸಿಬಲ್ ವಿವರಣೆ:ಅಂಚೆ ಕಚೇರಿ ಬ್ಯಾಂಕ್-ಶೀಘ್ರ 1000 ಎಟಿಎಂ

​ಪ್ರಜಾವಾಣಿ ವಾರ್ತೆ
Published 11 ಮೇ 2012, 19:30 IST
Last Updated 11 ಮೇ 2012, 19:30 IST
ರಾಜ್ಯಸಭೆಗೆ ಸಚಿವ ಕಪಿಲ್ ಸಿಬಲ್ ವಿವರಣೆ:ಅಂಚೆ ಕಚೇರಿ ಬ್ಯಾಂಕ್-ಶೀಘ್ರ 1000 ಎಟಿಎಂ
ರಾಜ್ಯಸಭೆಗೆ ಸಚಿವ ಕಪಿಲ್ ಸಿಬಲ್ ವಿವರಣೆ:ಅಂಚೆ ಕಚೇರಿ ಬ್ಯಾಂಕ್-ಶೀಘ್ರ 1000 ಎಟಿಎಂ   

ನವದೆಹಲಿ(ಪಿಟಿಐ): ಭಾರತೀಯ ಅಂಚೆ ಕಚೇರಿ ದೇಶದಾದ್ಯಂತ 1 ಸಾವಿರ ಎಟಿಎಂ ಕೇಂದ್ರಗಳನ್ನು ತೆರೆಯಲು ಯೋಜಿಸಿದೆ. ಆ ಮೂಲಕ ಸಾವಿರ ಅಂಚೆ ಕಚೇರಿಗಳನ್ನು ಬ್ಯಾಂಕ್ ಆಗಿ ಪರಿವರ್ತಿಸಲಿದೆ!ಈ ಅಚ್ಚರಿ ಬೆಳವಣಿಗೆಯ ಮಾಹಿತಿಯನ್ನು ದೂರಸಂಪರ್ಕ ಖಾತೆ ಸಚಿವ ಕಪಿಲ್ ಸಿಬಲ್ ಶುಕ್ರವಾರ ರಾಜ್ಯಸಭೆಗೆ ನೀಡಿದರು.

ಪ್ರಶ್ನೋತ್ತರ ವೇಳೆ ಉಪ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ದೇಶದಾದ್ಯಂತ 1,54,688 ಅಂಚೆ ಕಚೇರಿಗಳಿದ್ದು, ನಮ್ಮದು ವಿಶ್ವದಲ್ಲೇ ಅತಿದೊಡ್ಡ ಅಂಚೆ ಕಚೇರಿ ಸಮೂಹವಾಗಿದೆ. ಇದರಲ್ಲಿ 25,154 ಅಂಚೆ ಇಲಾಖೆಯ ಕಚೇರಿಗಳಾಗಿವೆ. ಉಳಿದವು ಗ್ರಾಮೀಣ ಪ್ರದೇಶದಲ್ಲಿನ `ಗ್ರಾಮೀಣ ಅಂಚೆ ಸೇವಾ ಕೇಂದ್ರ~ಗಳಾಗಿವೆ. ಒಂದೊಮ್ಮೆ ಈ ಎಲ್ಲ ಅಂಚೆ ಕಚೇರಿಗಳನ್ನೂ ಕಂಪ್ಯೂಟರೀಕರಣಗೊಳಿಸಿದರೆ ಬ್ಯಾಂಕ್‌ಗಳಂತೆ ಸಾಮರ್ಥ್ಯ ದುಪ್ಪಟ್ಟಾಗಲಿದೆ ಎಂದರು.

ಮಾರ್ಚ್ 31ರವರೆಗೆ ಒಟ್ಟು 24,154 ಅಂಚೆ ಕಚೇರಿಗಳು ಕಂಪ್ಯೂಟರೀಕರಣಗೊಂಡಿದ್ದವು. ಇವುಗಳಲ್ಲಿ 19,890 ಕಚೇರಿಗಳ ನಡುವೆ ಸಮರ್ಥ ಸಂಪರ್ಕ ಜಾಲವೂ ಇದೆ ಎಂದು ವಿವರ ನೀಡಿದರು.ಗ್ರಾಮೀಣ ಅಂಚೆ ಕಚೇರಿಗಳನ್ನೂ ಕಂಪ್ಯೂಟರೀಕರಣಗೊಳಿಸಲೆಂದು 1877.20 ಕೋಟಿ ವೆಚ್ಚದಲ್ಲಿ ಸಮಗ್ರ ಮಾಹಿತಿ ತಂತ್ರಜ್ಞಾನ ಯೋಜನೆ ರೂಪಿಸಲಾಗಿದೆ. 1 ಸಾವಿರ ಎಟಿಎಂ ಕೇಂದ್ರಗಳ ಸ್ಥಾಪನೆಯೂ ಇದೇ ಯೋಜನೆಯಡಿ ಬರುತ್ತದೆ ಎಂದು ವಿವರಿಸಿದರು.

ಅಂಚೆ ಕಚೇರಿಗಳನ್ನು ಬ್ಯಾಂಕ್‌ಗಳಾಗಿ ಪರಿವರ್ತಿಸುವ ಸಂಬಂಧ ಆರ್‌ಬಿಐಗೆ ಅರ್ಜಿ ಸಲ್ಲಿಸಲಾಗಿದೆ ಎಂದರು.
ಮೊಬೈಲ್ ಹ್ಯಾಂಡ್‌ಸೆಟ್ ಬೇಡಿಕೆ ದೇಶದಲ್ಲಿ ಮೊಬೈಲ್ ಫೋನ್ ಹ್ಯಾಂಡ್‌ಸೆಟ್‌ಗಳಿಗೆ ಭಾರಿ ಬೇಡಿಕೆ ಇದ್ದು, 2014ರ ವೇಳೆಗೆ  54 ಸಾವಿರ ಕೋಟಿ ಮೌಲ್ಯಕ್ಕೆ ಬೆಳೆಯಲಿದೆ ಎಂದು ಭಾರತೀಯ ಸೆಲ್ಯುಲರ್ ಸಂಘ(ಐಸಿಎ) ಹೇಳಿದೆ.

2013 ಮತ್ತು 2014ರಲ್ಲಿ ದೇಶದ ಮಾರುಕಟ್ಟೆಯಲ್ಲಿ ಕ್ರಮವಾಗಿ 22.50 ಕೋಟಿ ಮತ್ತು 25 ಕೋಟಿ ಹ್ಯಾಂಡ್‌ಸೆಟ್‌ಗಳವರೆಗೂ ಬೇಡಿಕೆ ಹೆಚ್ಚಲಿದೆ ಎಂದು ಐಸಿಎ ಅಂದಾಜು ಮಾಡಿರುವುದಾಗಿ ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ಮಿಲಿಂದ್ ದೇವೂರ ರಾಜ್ಯಸಭೆಗೆ ಶುಕ್ರವಾರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.