ADVERTISEMENT

ಶ್ರೀನಿವಾಸಪುರ ಮಾವು ಬೆಳೆಗಾರರಿಗೆ ತರಬೇತಿ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2014, 19:30 IST
Last Updated 14 ಮಾರ್ಚ್ 2014, 19:30 IST

ಬೆಂಗಳೂರು: ‘ಮಾವಿನ ಗುಣಮಟ್ಟ ವೃದ್ಧಿಸಿ ರಫ್ತು ಪ್ರಮಾಣವನ್ನು ಗಣನೀ-­ಯ­ವಾಗಿ ಹೆಚ್ಚಿಸಲು ಕೋಲಾರ ಜಿಲ್ಲೆಯ ಶ್ರೀನಿವಾಸಪುರ ರೈತರಿಗೆ ವಿವಿಧ ಸಂಸ್ಥೆಗಳ  ಸಹಯೋಗದಲ್ಲಿ ತಜ್ಞರಿಂದ ತರಬೇತಿ ಆರಂಭಿಸಲಾಗಿದೆ’ ಎಂದು ಕೃಷಿ ಇಲಾಖೆಯ ವಿಶೇಷ ಕಾರ್ಯದರ್ಶಿ ಜಿ.ಕೆ.ವಸಂತಕುಮಾರ್‌ ತಿಳಿಸಿದರು.

ಭಾರತೀಯ ವಾಣಿಜ್ಯೋದ್ಯಮ ಮಹಾಸಂಘ (ಅಸೋಚಾಂ) ಆಶ್ರಯ­ದಲ್ಲಿ ನಗರದಲ್ಲಿ ಶುಕ್ರವಾರ ನಡೆದ ಸಮ್ಮೇಳನದ ಸಂದರ್ಭದಲ್ಲಿ  ಅವರು ‘ಪ್ರಜಾವಾಣಿ’ಯೊಂದಿಗೆ ಮಾತನಾ­ಡಿದರು.  ‘ಶ್ರೀನಿವಾಸಪುರ ತಾಲ್ಲೂಕು ಮಾವಿನ ಮಡಿಲೆಂದೇ ಪ್ರಖ್ಯಾತವಾ­ದುದು. ಇಲ್ಲಿ 40,000 ಹೆಕ್ಟೇರ್‌ ಪ್ರದೇಶದಲ್ಲಿ ಮಾವು ಬೆಳೆಯಲಾ­ಗುತ್ತಿದೆ.

ರಾಜ್ಯದ ಮಾವಿನ ಬೆಳೆಯಲ್ಲಿ ಶೇ 40ರಷ್ಟು ಪಾಲು ಕೋಲಾರ ಜಿಲ್ಲೆಯದೇ. ಆದರೆ,   ಮಾರುಕಟ್ಟೆಯ ಮಾಹಿತಿ ಕೊರತೆಯಿಂದ ಇಲ್ಲಿನ ರೈತರು ಗುಣಮಟ್ಟ ಕಾಪಾಡಲು ಹೆಚ್ಚಿನ ಆದ್ಯತೆ ನೀಡಿರಲಿಲ್ಲ. ಈ ಹಿನ್ನೆಲೆ­ಯಲ್ಲಿ ನಿರಂತರ ತರಬೇತಿ ನೀಡಲಾ­ಗುತ್ತಿದೆ’ ಎಂದು ಅವರು ವಿವರಿಸಿದರು.

‘ಜಿಲ್ಲೆಯ ಆಯ್ದ 100 ರೈತರಿಗೆ ಈ ತರಬೇತಿ ನೀಡಲಾಗುತ್ತಿದೆ. ಡಿಸೆಂಬರ್‌ನಲ್ಲಿ ತಜ್ಞರಿಂದ ತರಬೇತಿ ಆರಂಭವಾಗಿದೆ. ಈಗಾಗಲೇ ಮೂರು ಹಂತದ ತರಬೇತಿ ನೀಡಲಾಗಿದೆ. ಮೇ ತಿಂಗಳ ವರೆಗೆ ಮುಂದುವರಿಯಲಿದೆ. ಮೂರು ವರ್ಷಗಳ ಕಾಲ ತರಬೇತಿ ನೀಡಿದ ಬಳಿಕ ರೈತರೇ ತಜ್ಞರು ಆಗು­ತ್ತಾರೆ. ಆಗ ಅವರು ಉಳಿದ ರೈತರಿಗೆ ಮಾರ್ಗದರ್ಶನ ನೀಡುತ್ತಾರೆ ಎಂದರು.

‘ಮಾವಿನ ಕಾಯಿಯನ್ನು ಕೀಳುವುದು ಹೇಗೆ? ಕಟಾವು ಮಾಡಿದ ಯಾವ ತಾಪಮಾನದಲ್ಲಿ ಸಂರಕ್ಷಣೆ ಮಾಡ­ಬೇಕು? ಹಣ್ಣಿನ ನೈಸರ್ಗಿಕ ಬಣ್ಣ ಬರಲು ಯಾವ ರೀತಿ ಇಡಬೇಕು?  ವಿದೇಶಕ್ಕೆ ರಫ್ತು ಮಾಡಲು ಅನುಸರಿಸಬೇಕಾದ ಮಾನ­ದಂಡಗಳೇನು ಎಂಬಿತ್ಯಾದಿ ವಿಷಯಗಳ ಬಗ್ಗೆ ತಜ್ಞರು ಮಾಹಿತಿ ನೀಡುತ್ತಿದ್ದಾರೆ’ ಎಂದರು.

‘ರಾಜ್ಯದ ಹೆಚ್ಚಿನ ರೈತರು ಕಟಾ­ವಿಗೂ ಮುಂಚೆಯೇ ಇಡೀ ತೋಟವನ್ನು ವರ್ತಕರಿಗೆ ಗುತ್ತಿಗೆ ಕೊಟ್ಟುಬಿಡುತ್ತಾರೆ. ಅವರು ಸರಿಯಾಗಿ ಬೆಳೆಯದ ಮಾವನ್ನು ಮಾರುಕಟ್ಟೆಗೆ ತರುತ್ತಾರೆ. ಮಾವು ನೋಡಲು ಸುಂದರವಾಗಿ­ರುತ್ತದೆ. ಆದರೆ, ಹುಳಿ ಹುಳಿಯಾಗಿ­ರುತ್ತದೆ. ಮತ್ತೆ ಗ್ರಾಹಕ ಈ ಹಣ್ಣನ್ನು ಖರೀದಿ ಮಾಡುವುದಿಲ್ಲ. ಇಂತಹ ಹಣ್ಣಿಗೆ ಉತ್ತಮ ಬೆಲೆಯೂ ಸಿಗು­ವುದಿಲ್ಲ. ಗ್ರಾಹಕರು ಈ ಊರಿನ ಹಣ್ಣನ್ನು ಅನುಮಾನದಿಂದ ನೋಡು­ತ್ತಾರೆ. ರೈತರಿಗೆ ತರಬೇತಿ ನೀಡುವುದ­ರಿಂದ ಭವಿಷ್ಯದಲ್ಲಿ ಇಂತಹ ಪ್ರಮೇಯ ಎದುರಾಗದಂತೆ ಎಚ್ಚರ ವಹಿಸಬಹುದಾಗಿದೆ’ ಎಂದರು.

‘5 ವರ್ಷಗಳ ಹಿಂದೆ ಕೊಪ್ಪಳ ಜಿಲ್ಲೆಯ ದಾಳಿಂಬೆ ಬೆಳೆಗಾರರಿಗೆ ತರಬೇತಿ ನೀಡಲಾಯಿತು. ತಜ್ಞರ ಸಲಹೆ ಮೇರೆಗೆ ದಾಳಿಂಬೆ ಬೆಳೆ ಚಕ್ರದ ಅವಧಿಯನ್ನೇ ಮಾರ್ಪಾಡು ಮಾಡಲಾ­ಯಿತು. ದಾಳಿಂಬೆ ರಫ್ತು ಆಯಿತು. ರೈತರಿಗೆ ಒಂದು ಕೆ.ಜಿ.ದಾಳಿಂಬೆಗೆ ₨140 ಬೆಲೆ ಸಿಕ್ಕಿತ್ತು. ಅದೇ ಈ ರೀತಿ ಈ ವರ್ಷ ಹಾವೇರಿ ಜಿಲ್ಲೆಯಲ್ಲಿ ಬಾದಾಮಿ ಮಾವಿನಕಾಯಿ ಬೆಳೆಗಾರರಿಗೆ,  ತರಬೇತಿ ನೀಡಲಾಗಿತ್ತು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.