ADVERTISEMENT

ಷೇರುದಾರರಿಗೆ ಪ್ರೇಮ್‌ಜಿ ಪತ್ರ; ಭವಿಷ್ಯದ ಬಗ್ಗೆ ವಿಶ್ವಾಸ

​ಪ್ರಜಾವಾಣಿ ವಾರ್ತೆ
Published 1 ಜುಲೈ 2012, 19:30 IST
Last Updated 1 ಜುಲೈ 2012, 19:30 IST
ಷೇರುದಾರರಿಗೆ ಪ್ರೇಮ್‌ಜಿ ಪತ್ರ; ಭವಿಷ್ಯದ ಬಗ್ಗೆ ವಿಶ್ವಾಸ
ಷೇರುದಾರರಿಗೆ ಪ್ರೇಮ್‌ಜಿ ಪತ್ರ; ಭವಿಷ್ಯದ ಬಗ್ಗೆ ವಿಶ್ವಾಸ   

ನವದೆಹಲಿ (ಪಿಟಿಐ): `ಭವಿಷ್ಯದ ಪ್ರಗತಿ ಮತ್ತು ಜಾಗತಿಕ ಮಾರುಕಟ್ಟೆ ಸವಾಲು ಎದುರಿಸಲು ಸಂಪೂರ್ಣವಾಗಿ ಸಿದ್ಧಗೊಂಡಿದ್ದೇವೆ~ ಎಂದು ದೇಶದ ಮುಂಚೂಣಿ ಐ.ಟಿ ಸಂಸ್ಥೆಗಳಲ್ಲೊಂದಾದ `ವಿಪ್ರೊ~ದ ಅಧ್ಯಕ್ಷ ಅಜೀಂ ಪ್ರೇಮ್‌ಜಿ ಹೇಳಿದ್ದಾರೆ.

ಭವಿಷ್ಯದ ಪ್ರಗತಿಯ ನಿಟ್ಟಿನಲ್ಲಿ ಆಡಳಿತದಲ್ಲಿ ಬದಲಾವಣೆ ತರಲಾಗಿದೆ. ಆದ್ಯತೆ ಮೇರೆಗೆ ಗ್ರಾಹಕ ಸಂಸ್ಥೆಗಳನ್ನು ಬದಲಿಸಲಾಗಿದೆ. ಈ ಎಲ್ಲ ಪರಿಷ್ಕರಣೆಗಳು ಮುಂದಿನ ಒಂದು ದಶಕದ ಸುಸ್ಥಿರ ಪ್ರಗತಿಯನ್ನು ಕೇಂದ್ರೀಕರಿಸಿವೆ ಎಂದು ಅವರು ಷೇರುದಾರರಿಗೆ ಇತ್ತೀಚೆಗೆ ಬರೆದ ವಾರ್ಷಿಕ (2011-12) ಪತ್ರದಲ್ಲಿ ಹೇಳಿದ್ದಾರೆ.

ಪ್ರವರ್ಧಮಾನಕ್ಕೆ ಬರುತ್ತಿರುವ ಮಾರುಕಟ್ಟೆಗಳಿಂದ ಹೆಚ್ಚು ವರಮಾನ ಸಂಗ್ರಹಿಸಲು ಆದ್ಯತೆ ನೀಡಲಾಗಿದೆ. ಇದಕ್ಕೆ ತಕ್ಕಂತೆ ಜಾಗತಿಕ ಗ್ರಾಹಕ ಸಂಸ್ಥೆಗಳಲ್ಲಿ ಬದಲಾವಣೆ ಮಾಡಿಕೊಳ್ಳಲಾಗಿದೆ. ಐ.ಟಿ ಸೇವೆಗಳಿಂದ ಪ್ರಸಕ್ತ ವರ್ಷ ಹೆಚ್ಚಿನ ಲಾಭ ನಿರೀಕ್ಷಿಸಲಾಗಿದೆ ಎಂದು ವಿವರಿಸಿದ್ದಾರೆ.

ಕುರಿಯನ್ ವೇತನ 4.5 ಕೋಟಿ!
ವಿಪ್ರೊ ಅಧ್ಯಕ್ಷ ಅಜೀಂ ಪ್ರೇಮ್‌ಜಿ ಅವರ ಸಂಭಾವನೆ ಕಳೆದ ಹಣಕಾಸು ವರ್ಷದಲ್ಲಿ ರೂ2.8 ಕೋಟಿಯಿಂದ  ರೂ 1.9 ಕೋಟಿಗೆ ಇಳಿಕೆಯಾಗಿದೆ. ಆದರೆ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಟಿ.ಕೆ.ಕುರಿಯನ್ ಅವರ ವೇತನ ಐದು ಪಟ್ಟು ಹೆಚ್ಚಿಸಲಾಗಿದ್ದು, ವಾರ್ಷಿಕ  ರೂ4.5 ಕೋಟಿ ವೇತನ ನಿಗದಿಪಡಿಸಲಾಗಿದೆ. ಕಳೆದ ಹಣಕಾಸು ವರ್ಷದಲ್ಲಿ (2011-12) ಕುರಿಯನ್ ರೂ80 ಲಕ್ಷ ವೇತನ ಪಡೆದಿದ್ದರು.

ವಿಪ್ರೊ ಐ.ಟಿ ವ್ಯವಹಾರಗಳ ಜಂಟಿ `ಸಿಇಒ~ಗಳಾದ ಸುರೇಶ್ ವಾಸ್ವಾನಿ ಮತ್ತು ಗಿರೀಶ್ ಎಸ್.ಪರಂಜಾಪೆ  ಅವರ ವೇತವನ್ನೂ ಪರಿಷ್ಕರಿಸಲಾಗಿದೆ. ವಾಸ್ವಾನಿ ಕಳೆದ ವರ್ಷ ರೂ3.1 ಕೋಟಿ ವೇತನ ಪಡೆಯುತ್ತಿದ್ದರು. ಸದ್ಯ ಅವರ ಸಂಭಾವನೆ ರೂ10.2 ಕೋಟಿಗಳಷ್ಟಾಗಿದೆ. ಮುಖ್ಯ ಹಣಕಾಸು ಅಧಿಕಾರಿ ಸುರೇಶ್ ಸೇನಾಪತಿ ಅವರ ವೇತನ ರೂ4.3 ಕೋಟಿಯಿಂದ ರೂ1.8 ಕೋಟಿಗೆ ಇಳಿದಿದೆ. ಅಜೀಂ ಪ್ರೇಮ್‌ಜಿ ಅವರ ಮಗ ಮತ್ತು ವಿಪ್ರೊದ ಐ.ಟಿ ವ್ಯವಹಾರಗಳ ಯೋಜನಾ ಅಧಿಕಾರಿ ರಶೀದ್ ಪ್ರೇಮ್‌ಜಿ ವೇತನ ರೂ40 ಲಕ್ಷದಿಂದ ರೂ50ಲಕ್ಷಕ್ಕೆ ಹೆಚ್ಚಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.