ADVERTISEMENT

ಷೇರುಪೇಟೆಗೆ 739 ಅಂಶ ನಷ್ಟ

ಪಿಟಿಐ
Published 10 ಮಾರ್ಚ್ 2018, 19:30 IST
Last Updated 10 ಮಾರ್ಚ್ 2018, 19:30 IST
ಷೇರುಪೇಟೆಗೆ 739 ಅಂಶ ನಷ್ಟ
ಷೇರುಪೇಟೆಗೆ 739 ಅಂಶ ನಷ್ಟ   

ಮುಂಬೈ: ಷೇರುಗಳ ಮಾರಾಟ ಒತ್ತಡದಿಂದ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು 739 ಅಂಶಗಳ ನಷ್ಟದಲ್ಲಿ ವಾರದ ವಹಿವಾಟು ಅಂತ್ಯಗೊಳಿಸಿದೆ.

ಉಕ್ಕು ಮತ್ತು ಅಲ್ಯುಮಿನಿಯಂ ಲೋಹಗಳ ಆಮದು ನಿರ್ಬಂಧಿಸಲು ಗರಿಷ್ಠ ಪ್ರಮಾಣದ ತೆರಿಗೆ ವಿಧಿಸುವ ಅಮೆರಿಕ ಸರ್ಕಾರದ ನಿರ್ಧಾರವು ದೇಶಿ ಷೇರುಪೇಟೆಗಳ ವಾರದ ವಹಿವಾಟಿನ ಮೇಲೆ ತೀವ್ರ ಪರಿಣಾಮ ಬೀರಿದೆ.

ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ವಸೂಲಾಗದ ಸಾಲದ ಪ್ರಮಾಣ ಹೆಚ್ಚಳ ಮತ್ತು ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಬಹುಕೋಟಿ ವಂಚನೆ ಪ್ರಕರಣವೂ ಷೇರುಪೇಟೆ ಓಟಕ್ಕೆ ಕಡಿವಾಣ ಹಾಕಿತು.

ADVERTISEMENT

ಈ ಕಾರಣಗಳಿಂದ ಷೇರುಗಳ ಖರೀದಿಗೆ ಹೂಡಿಕೆದಾರರು ಆಸಕ್ತಿ ತೋರಿಸಲಿಲ್ಲ. ಇದರಿಂದ ಬ್ಯಾಂಕ್‌ ಷೇರುಗಳ ಮೌಲ್ಯ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡವು. ಷೇರುಪೇಟೆ ವಹಿವಾಟು ಆರು ವಾರಗಳ ಕನಿಷ್ಠ ಮಟ್ಟಕ್ಕೆ ಕುಸಿಯಿತು.

ವಾರದ ಕನಿಷ್ಠ ಮಟ್ಟವಾದ 34,034 ಅಂಶಗಳಲ್ಲಿ ಆರಂಭವಾದ ಷೇರುಪೇಟೆ ವಹಿವಾಟು, ವಾರದ ಒಂದು ಹಂತದಲ್ಲಿ 32,991 ಅಂಶಗಳ ಕನಿಷ್ಠ ಮಟ್ಟಕ್ಕೂ ಕುಸಿದಿತ್ತು.

10,428 ಅಂಶಗಳ ಕನಿಷ್ಠ ಮಟ್ಟದಲ್ಲಿ ಆರಂಭವಾದ ರಾಷ್ಟ್ರೀಯ ಷೇರುಪೇಟೆ (ನಿಫ್ಟಿ) ಕೂಡ 231 ಅಂಶಗಳ ನಷ್ಟ ಅನುಭವಿಸಿ 10,226 ಅಂಶಗಳಲ್ಲಿ ಅಂತ್ಯಗೊಂಡಿತು. ವಾರದ ಒಂದು ಹಂತದಲ್ಲಿ 10,141 ಅಂಶಗಳ ಕನಿಷ್ಠ ಮಟ್ಟಕ್ಕೂ ಕುಸಿದಿತ್ತು.

ಲೋಹ, ಆರೋಗ್ಯ ಸೇವೆ, ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು, ಇಂಧನ, ತೈಲ ಮತ್ತು ಅನಿಲ, ವಾಹನ ತಯಾರಿಕೆ, ತಂತ್ರಜ್ಞಾನ, ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಷೇರುಗಳ ಮೌಲ್ಯ ಕುಸಿತ ಕಂಡವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.