ADVERTISEMENT

ಸಮತೋಲನದ ಬಜೆಟ್:ಎಫ್‌ಕೆಸಿಸಿಐ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2012, 19:30 IST
Last Updated 21 ಮಾರ್ಚ್ 2012, 19:30 IST

ಬೆಂಗಳೂರು: ರಾಜ್ಯದ 2012-13ನೇ ಸಾಲಿನ ಬಜೆಟ್, ಒಟ್ಟಾರೆ ಸಮಾಧಾನಕರವಾಗಿದ್ದು ರಾಜ್ಯದ ಸರ್ವಾಂಗೀಣ ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದು ಕರ್ನಾಟಕ ವಾಣಿಜ್ಯೋದ್ಯಮ ಮಹಾಸಂಘ (ಎಫ್‌ಕೆಸಿಸಿಐ) ಬಣ್ಣಿಸಿದೆ.

ಕಳೆದ ಹಣಕಾಸು ವರ್ಷದಲ್ಲಿದ್ದ ಆರ್ಥಿಕ ಹಿಂಜರಿಕೆ  ಮೆಟ್ಟಿ, ನೀರಾವರಿ, ಕೃಷಿ, ಶಿಕ್ಷಣ, ಪ್ರವಾಸೋಧ್ಯಮ, ಸಾಮಾಜಿಕ ನ್ಯಾಯ, ವೃತ್ತಿ ನೈಪುಣ್ಯ ಅಭಿವೃದ್ಧಿ, ರಸ್ತೆ - ರೈಲು ಸಂಪರ್ಕ ಹಾಗೂ ತದಡಿ ಬಂದರಿನ ಅಭಿವೃದ್ಧಿ ಸೇರಿದಂತೆ ಮೂಲ ಸೌಕರ್ಯಗಳಿಗೆ ಶೇ 10 ರಿಂದ 18ರವರೆಗೆ  ಪ್ರಾತಿನಿಧ್ಯ ನೀಡಿರುವುದರಿಂದ ಬಜೆಟ್ ಸಮತೋಲನಿಂದ ಕೂಡಿದೆ ಎಂದು ಸಂಘದ ಅಧ್ಯಕ್ಷ ಜೆ.ಆರ್. ಬಂಗೇರಾ ಪ್ರತಿಕ್ರಿಯಿಸಿದ್ದಾರೆ.

 `ಕಾಸಿಯಾ~ ನಿರಾಶೆ: ರಾಜ್ಯ ಬಜೆಟ್‌ನಿಂದ ಸಣ್ಣ ಕೈಗಾರಿಕಾ ವಲಯಕ್ಕೆ ತೀವ್ರ ನಿರಾಶೆಯಾಗಿದೆ ಎಂದು ಕರ್ನಾಟಕ ಸಣ್ಣ ಕೈಗಾರಿಕಾ ಸಂಘ (ಕಾಸಿಯಾ) ಟೀಕಿಸಿದೆ.ಬಜೆಟ್ ಮಂಡನೆ ಪೂರ್ವ ಸಂಘವು ಸಲ್ಲಿಸಿದ್ದ ಹಲವಾರು ಬೇಡಿಕೆಗಳ ಬಗ್ಗೆ ಸರ್ಕಾರ ಯಾವುದೇ ಗಮನ ಹರಿಸದಿರುವುದು ನಿರಾಶೆ ಮೂಡಿಸಿದೆ ಎಂದು ಸಂಘದ ಅಧ್ಯಕ್ಷ ಪ್ರಕಾಶ್ ಎನ್. ರಾಯ್ಕರ್ ಟೀಕಿಸಿದ್ದಾರೆ.

ಉದ್ಯಮ ಪರವಾನಗಿ ಸರಳೀಕರಣ, ಖರೀದಿ ನೀತಿ ಜಾರಿ, ಕೈಗಾರಿಕಾ ಮೂಲ ಸೌಕರ್ಯ ಅಭಿವೃದ್ಧಿ, ಸರ್ಕಾರಿ ಇಲಾಖೆಗಳಿಗೆ ಪೂರೈಸುವ ಸರಕುಗಳಿಗೆ  `ವ್ಯಾಟ್~ ವಿನಾಯ್ತಿ ಮತ್ತಿತರ ಬೇಡಿಕೆ ಸಲ್ಲಿಸಲಾಗಿತ್ತು. ಇವುಗಳಲ್ಲಿ ಯಾವ ಬೇಡಿಕೆಯೂ ಈಡೇರಿಲ್ಲ ಎಂದು ಹೇಳಿದ್ದಾರೆ.

ಅಭಿವೃದ್ಧಿ ಪರ; ಬಿಸಿಐಸಿ: ಒಟ್ಟಾರೆ ಆರ್ಥಿಕ ಚಟುವಟಿಕೆಗಳಿಗೆ ಮತ್ತು  ರಾಜ್ಯದ ಸಮಗ್ರ ಅಭಿವೃದ್ಧಿಗೆ ಉತ್ತೇಜನ ನೀಡಲಿರುವುದರಿಂದ ಇದೊಂದು ಅಭಿವೃದ್ಧಿ ಪರ ಬಜೆಟ್ ಎಂದು ಬೆಂಗಳೂರು ವಾಣಿಜ್ಯೋದ್ಯಮ ಮಹಾಸಂಘ (ಬಿಸಿಐಸಿ) ಪ್ರತಿಕ್ರಿಯಿಸಿದೆ.

ಕೃಷಿ ಆರ್ಥಿಕತೆಗೆ ರೂ.19,660 ಕೋಟಿ ಹಂಚಿಕೆ ಮಾಡಿರುವುದು ಯೋಗ್ಯ ಕ್ರಮವಾಗಿದೆ. `ಇ-ಮಾರ್ಕೆಟ್~ ಸ್ಥಾಪಿಸಲು ಉದ್ದೇಶಿಸಿರುವುದು  ಮಾರುಕಟ್ಟೆ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಸಹಕಾರಿಯಾಗಲಿದೆ ಎಂದು `ಬಿಸಿಐಸಿ~ ಅಧ್ಯಕ್ಷ ಡಾ. ವಿನೋದ್ ನೋವಲ್ ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.