ADVERTISEMENT

ಸಾರ್ವಜನಿಕ ಷೇರು ವಿತರಣೆ 6 ತಿಂಗಳಲ್ಲಿ ಶೇ92 ಕುಸಿತ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2012, 19:30 IST
Last Updated 13 ಅಕ್ಟೋಬರ್ 2012, 19:30 IST

ನವದೆಹಲಿ(ಪಿಟಿಐ): ಪ್ರಸಕ್ತ ಹಣಕಾಸು ವರ್ಷದ ಮೊದಲ ಆರು ತಿಂಗಳಲ್ಲಿ ಆರಂಭಿಕ ಸಾರ್ವಜನಿಕ ಕೊಡುಗೆಗಳ (`ಐಪಿಒ~, `ಎಫ್‌ಪಿಒ~ ಮತ್ತು `ಒಎಫ್‌ಎಸ್~) ಮೂಲಕ ನಡೆಯುವ ಷೇರು ವಿತರಣೆ  ಶೇ 92ರಷ್ಟು ಕುಸಿದಿದೆ ಎಂದು `ಪ್ರೈಮ್ ಡಾಟಾಬೇಸ್ ಕಾರ್ಪೊರೇಟ್~ ಸಂಸ್ಥೆ ನಡೆಸಿದ ಅಧ್ಯಯನ ತಿಳಿಸಿದೆ.

`ಏಪ್ರಿಲ್-ಸೆಪ್ಟೆಂಬರ್~ ತ್ರೈಮಾಸಿಕದಲ್ಲಿ   19 `ಸಾರ್ವಜನಿಕ ಷೇರು ವಿತರಣೆ~ ಪ್ರಕ್ರಿಯೆ ನಡೆದಿದ್ದು, ರೂ772 ಕೋಟಿ ಬಂಡವಾಳ ಸಂಗ್ರಹವಾಗಿದೆ. ಇದರಲ್ಲಿ 13 `ಐಪಿಒ~ ಮತ್ತು 6 `ಒಎಫ್‌ಎಸ್~ ಸೇರಿವೆ.  2010-11ನೇ ಸಾಲಿನ ಇದೇ ಅವಧಿಯಲ್ಲಿ ಸಾರ್ವಜನಿಕ ಷೇರು ವಿತರಣೆ ಮೂಲಕ ರೂ9,553 ಕೋಟಿ ಬಂಡವಾಳ ಸಂಗ್ರಹವಾಗಿತ್ತು.

ಕೇಂದ್ರೋದ್ಯಮ ಸಂಸ್ಥೆಗಳಲ್ಲಿನ ತನ್ನ ಷೇರುಪಾಲನ್ನು ಅಲ್ಪ ಪ್ರಮಾಣದಲ್ಲಿ ಮಾರಾಟ ಮಾಡುವ ಮೂಲಕ ಸರ್ಕಾರ ಪ್ರಸಕ್ತ ಹಣಕಾಸು ವರ್ಷದಲ್ಲಿ ರೂ30 ಸಾವಿರ ಕೋಟಿ ಬಂಡವಾಳ ಸಂಗ್ರಹಿಸುವ ಗುರಿ ಹೊಂದಿದೆ. ಆದರೆ, ಮಾರುಕಟ್ಟೆ ಅಸ್ಥಿರತೆಯಿಂದ ಮೊದಲ ಆರು ತಿಂಗಳಲ್ಲಿ ಯಾವುದೇ `ಐಪಿಒ~ ಪ್ರಕಟಗೊಂಡಿಲ್ಲ.
 
ಸದ್ಯ ಮಾರುಕಟ್ಟೆ ಸುಧಾರಿಸಿದ್ದು, ರೂ2,500 ಕೋಟಿ ಮೊತ್ತದ `ರಾಷ್ಟ್ರೀಯ ಇಸ್ಪತ್ ನಿಗಮ್ ಲಿ. ಮತ್ತು ರೂ5 ಸಾವಿರ ಕೋಟಿ ಮೊತ್ತದ ಭಾರ್ತಿ ಇನ್ಫ್ರಾಟೆಲ್ ಕಂಪೆನಿಯ `ಐಪಿಒ~ ಶೀಘ್ರವೇ ಬಿಡುಗಡೆಯಾಗಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.